ಮಂಗಳವಾರ, ಡಿಸೆಂಬರ್ 7, 2021
24 °C
ಜಿಲ್ಲೆಯಲ್ಲಿ ಮೊದಲ ಡೋಸ್‌ ಶೇ 80, ಎರಡನೇ ಡೋಸ್‌ ಶೇ 36 ಸಾಧನೆ

ಕೊರೊನಾ ಕಡಿಮೆಯಾಗುತ್ತಿದ್ದಂತೆ ಲಸಿಕೆಗೂ ಇಳಿದ ಬೇಡಿಕೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಲಸಿಕೆ ಹಾಕಿಸಿಕೊಳ್ಳುವ ಹಂಬಲವೂ ಜನರಲ್ಲಿ ಕಡಿಮೆಯಾಗಿದೆ. ಹಾಗಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಗಳು ಲಸಿಕಾ ಮೇಳ ಮಾಡಿದರೂ ಕೊರೊನಾ ನಿರೋಧಕ ಲಸಿಕೆ ತೆಗೆದುಕೊಳ್ಳಲು ಬರುವವರ ಸಂಖ್ಯೆ ಏರುತ್ತಿಲ್ಲ.

18 ವರ್ಷದ ಮೇಲಿನ 12,23,002 ಮಂದಿಗೆ ಜಿಲ್ಲೆಯಲ್ಲಿ ಲಸಿಕೆ ನೀಡುವ ಗುರಿ ಇತ್ತು. 9,83,733 ಮಂದಿ ಮೊದಲ ಡೋಸ್‌ ಹಾಕಿಸಿಕೊಂಡಿದ್ದಾರೆ. ಶೇ 20ರಷ್ಟು ಮಂದಿ ಅಂದರೆ 2,39,269 ಮಂದಿ ಲಸಿಕೆ ಹಾಕಿಸಿಕೊಂಡಿಲ್ಲ. 4,37,947
(ಶೇ 36) ಮಂದಿ ಎರಡನೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಮೊದಲ ಡೋಸ್‌ ಹಾಕಿಸಿಕೊಳ್ಳುವಲ್ಲಿ ಚನ್ನಗಿರಿ ತಾಲ್ಲೂಕು (ಶೇ 93), ಮೊದಲ
ಸ್ಥಾನದಲ್ಲಿದ್ದರೆ, ಜಗಳೂರು ತಾಲ್ಲೂಕು (ಶೇ 70) ಕೊನೇ ಸ್ಥಾನದಲ್ಲಿದೆ. ಎರಡನೇ ಡೋಸ್‌ನಲ್ಲಿ ದಾವಣಗೆರೆ ತಾಲ್ಲೂಕು (ಶೇ 40) ಮೊದಲ ಸ್ಥಾನದಲ್ಲಿದ್ದರೆ, ಜಗಳೂರು ತಾಲ್ಲೂಕು (ಶೇ 29) ಕೊನೇ ಸ್ಥಾನದಲ್ಲಿದೆ.

‘ದಾವಣಗೆರೆ ದಕ್ಷಿಣದಲ್ಲಿ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಹಿಂಜರಿಯುವವರ ಸಂಖ್ಯೆ ದೊಡ್ಡದಿದೆ. ಅದು ಬಿಟ್ಟರೆ ಜಗಳೂರಿನಲ್ಲಿಯೂ ಹಿಂಜರಿಕೆ ಇದೆ.  ಮೊದಲ ಡೋಸ್‌ ಪಡೆಯಲೂ ಜನರು ಹಿಂಜರಿಯುತ್ತಿದ್ದಾರೆ. ಅದಕ್ಕೆ ಮೂರು ದಿನಗಳ ಕಾಲ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಕೊರೊನಾ ಬಂದರೂ ಸಾವಿನಿಂದ ಪಾರಾಗಬೇಕಿದ್ದರೆ ಲಸಿಕೆ ಹಾಕಿಸಿಕೊಳ್ಳುವುದು ಅವಶ್ಯ ಎಂಬುದನ್ನು ತಿಳಿಸಿದ್ದೇವೆ. ಈಗ ಲಸಿಕೆ ಹಾಕಿಸಿಕೊಳ್ಳಲು ಜನ ಬರುತ್ತಿದ್ದಾರೆ. ನಮ್ಮಲ್ಲಿ ಲಸಿಕೆಯ ಕೊರತೆ ಇಲ್ಲ. 1 ಲಕ್ಷ ಡೋಸ್‌ಗಳು ಸಂಗ್ರಹಗಾರದಲ್ಲಿವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದಾಗ ಮೊದಲ ಡೋಸ್‌ ಹಾಕಿಸಿಕೊಳ್ಳಲು ನೂಕುನುಗ್ಗಲು ಇತ್ತು. ಎರಡನೇ ಡೋಸ್‌ಗೆ 84 ದಿನ ಭರ್ತಿಯಾಗುವುದಕ್ಕೇ ಕಾಯುತ್ತಿದ್ದರು. ಆದರೆ ಈಗ ವ್ಯಾಕ್ಸಿನ್‌ ಬೇಕಾದಷ್ಟು ಇದ್ದರೂ ಮುಂದೆ ಬರುತ್ತಿಲ್ಲ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಷ್ಟೇ ಕೆಲಸ ಮಾಡಿದರೆ ಸಾಲದು ಎಂಬ ಕಾರಣಕ್ಕೆ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ್‌ರಾಜ್‌ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಂತೆ ಈಗ ಸಮಿತಿಗಳನ್ನು ಮಾಡಲಾಗಿದೆ. ವ್ಯಾಕ್ಸಿನ್‌ ಹಾಕಿಸಿಕೊಳ್ಳದೇ ಇರುವವರನ್ನು ಪತ್ತೆ ಹಚ್ಚಿ ನೀಡುವ ಕಾರ್ಯವನ್ನು ಈ ಸಮಿತಿ ಮಾಡಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್‌ ಮಾಹಿತಿ ನೀಡಿದರು.

‘ಮೂರನೇ ಅಲೆ ಕಾಣಿಸಿಕೊಳ್ಳದ ಕಾರಣ ಜನರಿಗೆ ಆಸಕ್ತಿ ಕಡಿಮೆ ಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಮೂಲಕ ವ್ಯಾಕ್ಸಿನ್‌ ಹಾಕಿಸಿಕೊಳ್ಳದವರನ್ನು ಹುಡುಕಿಕೊಂಡು ಹೋಗಿ ಲಸಿಕೆ ನೀಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಯೋಜನೆ ರೂಪಿಸಲಾಗಿದೆ’ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ಮೀನಾಕ್ಷಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು