ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸನಿ’ ಅಬ್ಬರ: ದಾವಣಗೆರೆ ಜನ ತತ್ತರ

ಭಾರಿ ಗಾಳಿ, ಮಳೆಗೆ ರಸ್ತೆಯಲ್ಲೇ ಹರಿದ ನೀರು
Last Updated 12 ಮೇ 2022, 4:11 IST
ಅಕ್ಷರ ಗಾತ್ರ

ದಾವಣಗೆರೆ: ಬಂಗಾಳಕೊಲ್ಲಿಯಲ್ಲಿ ಎದ್ದ ಅಸನಿ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ. ರಸ್ತೆಯಲ್ಲೇ ನೀರು ಹರಿದಿದ್ದು, ಹಲವೆಡೆ ನೀರು ನುಗ್ಗಿದೆ. ಈ ಬಾರಿಯ ಮೊದಲ ದೊಡ್ಡ ಮಳೆಗೆ ಜನಜೀವನ ತತ್ತರಗೊಂಡಿತು.

ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಬುಧವಾರ ಬೆಳಿಗ್ಗಿನಿಂದಲೇ ತುಂತುರು ಮಳೆ ಆರಂಭವಾಗಿತ್ತು. ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಗಳ ಕಾಲ ಭಾರಿ ಮಳೆ ಸುರಿಯಿತು. ಚರಂಡಿ, ಒಳಚರಂಡಿಗಳಲ್ಲಿ ನೀರು ರಭಸದಿಂದ ಹರಿಯಿತು. ರಸ್ತೆಗಳೇ ಕಾಲುವೆಗಳಂತಾದವು.

ರೈಲ್ವೆ ನಿಲ್ದಾಣ ಪಕ್ಕದ ರೈಲ್ವೆ ಕೆಳಸೇತುವೆ, ರೇಣುಕಾ ಮಂದಿರ ಪಕ್ಕದ ಕೆಳಸೇತುವೆ, ಈರುಳ್ಳಿ ಮಾರುಕಟ್ಟೆ ಬಳಿಯ ಕೆಳಸೇತುವೆ ರಸ್ತೆಗಳು ಕೆರೆಯಂತೆ ನೀರು ತುಂಬಿದ್ದವು. ಇಲ್ಲಿ ವಾಹನ ಮುಂದಕ್ಕೆ ಚಲಾಯಿಸುವುದೇ ಹರಸಾಹಸದ ಕೆಲಸವಾಯಿತು. ದ್ವಿಚಕ್ರವಾಹನಗಳು ಅತ್ತಿಂದಿತ್ತ ಹೋಗಲು ಸಾಧ್ಯವಾಗದಷ್ಟು ನೀರು ಸಂಗ್ರಹವಾಗಿತ್ತು.

ದಾವಣಗೆರೆ 17ನೇ ವಾರ್ಡಿನಲ್ಲಿರುವ ಜನತಾ ವಿದ್ಯಾಲಯದ ಮುಂದಿನ ರಸ್ತೆ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದೆ. ಭಾರತ್ ಕಾಲೊನಿಯ ದೊಡ್ಡ ಚರಂಡಿ ಉಕ್ಕಿ ಹರಿದಿದೆ.ಪಿಜೆ ಬಡಾವಣೆ ಚೇತನ ಹೊಟೆಲ್ ಬಳಿ ಕಾರೊಂದು ರಸ್ತೆ ಬದಿ ಗುಂಡಿಯಲ್ಲಿ ಸಿಲುಕಿಕೊಂಡಿತು.

ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿರುವಲ್ಲಿ ಇನ್ನಷ್ಟು ಸಮಸ್ಯೆ ಉಂಟಾಯಿತು. ಒಳಚರಂಡಿಯ ಒಳಗೇ ನೀರು ನುಗ್ಗಿತ್ತು. ಕೆಲವೆಡೆ ಚರಂಡಿಗಳಲ್ಲಿ ಕಸ ತುಂಬಿದ್ದರಿಂದ ಚರಂಡಿಯಿಂದ ಹೊರಗೆ ನೀರು ಹರಿಯಿತು.

ಕೊಳೆಗೇರಿಗಳು, ಮಂಡಕ್ಕಿ ಭಟ್ಟಿ ಲೇಔಟ್ ಸುತ್ತಮುತ್ತಲಿನ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಕೆ.ಬಿ. ಬಡಾವಣೆ, ಮಂಡಿಪೇಟೆ, ದೇವರಾಜ ನಗರ, ನಿಟುವಳ್ಳಿ, ಕೆಟಿಜೆ ನಗರ, ವಿನೋಬ ನಗರ, ಗಾಂಧಿನಗರ, ಆಜಾದ್ ನಗರ, ಕಾಡಪ್ಪನ ಕಣ, ಬಂಬೂ ಬಜಾರ್, ನೀಲಮ್ಮನ ತೋಟ, ಬೇತೂರು ರಸ್ತೆ, ಭಾರತ್‌ ಕಾಲೊನಿ, ಜಾಲಿ ನಗರದಲ್ಲಿ ಜನ ತೊಂದರೆಗೆ ಸಿಲುಕಿದರು. ಗ್ರಾಮೀಣ ಪ್ರದೇಶಗಳಲ್ಲಿ ಮೆಕ್ಕೆಜೋಳ, ಭತ್ತ ಸೇರಿ ವಿವಿಧ ಬೆಳೆಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT