ಗುರುವಾರ , ಸೆಪ್ಟೆಂಬರ್ 23, 2021
22 °C

ದಾವಣಗೆರೆ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ 20 ದಿನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ತಿಂಗಳಿಗೆ ₹12 ಸಾವಿರ ವೇತನ ನಿಗದಿಪಡಿಸಬೇಕು ಹಾಗೂ ಕೊರೊನಾ ರಕ್ಷಣೆಗೆ ಅಗತ್ಯವಾದ ಸಲಕರಣೆಗಳನ್ನು ನೀಡಬೇಕು ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 20ನೇ ಕಾಲಿಟ್ಟಿದೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.

‘ಆಶಾ ಕಾರ್ಯಕರ್ತೆಯರು ಜೀವವನ್ನು ಪಣವಾಗಿಟ್ಟು ರಾಜ್ಯದಾದ್ಯಂತ ಕೋವಿಡ್–19 ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ದುಡಿಮೆಗೆ ತಕ್ಕ ಪ್ರತಿಫಲವಿಲ್ಲದೇ ಅನಿಶ್ಚಿತ ವೇತನದಿಂದ ಹೈರಾಣಾಗಿದ್ದು, ಸರ್ಕಾರ ಕೂಡಲೇ ಗೌರವಧನ ಹಾಗೂ ಪ್ರೋತ್ಸಾಹಧನ ನೀಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

‘ರಕ್ಷಣಾ ಸಲಕರಣೆಗಳ ಜೊತೆಗೆ ಎಲ್ಲಾ ಕಾರ್ಯಕರ್ತೆಯರಿಗೂ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಬೇಕು. ಪಾಸಿಟಿವ್ ಬಂದಿರುವ ಎಲ್ಲರಿಗೂ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಈ ಅವಧಿಯಲ್ಲಿ ಮಾಸಿಕ ಗೌರವಧನ ಮತ್ತು ಪ್ರೋತ್ಸಾಹಧನ ನೀಡಬೇಕು. ಸೋಂಕಿತ ಆಶಾಗಳಿಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಬುಧವಾರ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಘಟನೆಯ ರಾಜ್ಯ ನಾಯಕರನ್ನು ಕರೆಯಿಸಿ ಚರ್ಚಿಸಿ ಅಭಿಪ್ರಾಯ ಹೇಳುವುದಾಗಿ ಮಂಗಳವಾರ ತಿಳಿಸಿದ್ದಾರೆ. ಆದ್ದರಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದೇವೆ. ಸರ್ಕಾರದ ಪ್ರತಿಕ್ರಿಯೆ ನೋಡಿಕೊಂಡು ಕೆಲಸಕ್ಕೆ ಹಾಜರಾಗುವ ಇಲ್ಲವೇ ಮುಷ್ಕರ ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ತಿಳಿಸಿದರು.

ಎಐಯುಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಕೈದಾಳೆ, ಭಾರತಿ, ಮಧು ತೊಗಲೇರಿ, ಆಶಾ ಕಾರ್ಯಕರ್ತೆಯರಾದ ನಾಗವೇಣಿ, ಸುಮಾ,ಮಾರಕ್ಕ, ಲೀಲಾವತಿ, ಅನಿತಾ, ಲಲಿತಮ್ಮ, ಪರ್ವೀನ್ ಬಾನು, ರುಕ್ಕಮ್ಮ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು