ಶುಕ್ರವಾರ, ಫೆಬ್ರವರಿ 21, 2020
20 °C

ವಾಲ್ಮೀಕಿ ಜಾತ್ರೆಯಲ್ಲಿ ‘ಕಿಚ್ಚ’ನ ಖದರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ತಾಲ್ಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆಯಲ್ಲಿ ಚಿತ್ರನಟ ಸುದೀಪ್ ಹಾಡು ಹಾಗೂ ಡೈಲಾಗ್‌ಗಳ ಮೂಲಕ ಜನರ ಮನಗೆದ್ದರು.

ಬೃಹತ್ ಜನಜಾಗೃತಿ ಸಮಾವೇಶ ಮುಗಿಯುತ್ತಾ ಬಂದಿದ್ದರೂ ತಮ್ಮ ನೆಚ್ಚಿನ ನಾಯಕನ ಬರುವಿಕೆಗಾಗಿ ಬಿಸಿಲನ್ನು ಲೆಕ್ಕಿಸದೇ ಕಾದು ನಿಂತಿದ್ದರು. ಒಂದೂವರೆ ಗಂಟೆ ತಡವಾಗಿ ಬಂದ ಸುದೀಪ್ ಎಲ್ಲರತ್ತ ಕೈಬೀಸಿ, ಫ್ಲೈಯಿಂಗ್ ಕಿಸ್ ನೀಡಿದರು.

ವೇದಿಕೆಯತ್ತ ಬರುತ್ತಿದ್ದಂತೆಯೇ ‘ಪೈಲ್ವಾನ್’ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದರು. ಪೈಲ್ವಾನ್‌, ಪೈಲ್ವಾನ್‌ ಎಂದು ಹೇಳಿ ಹುರಿದುಂಬಿಸಿದರು. ಸೆಲ್ಫಿ ತೆಗೆದುಕೊಳ್ಳಲು ಕೆಲವರು ವೇದಿಕೆಯತ್ತ ಮುಗಿಬಿದ್ದರು. ಆರಂಭದಲ್ಲಿ ಮಹಾನ್ ವ್ಯಕ್ತಿಗಳ ಭಾವಚಿತ್ರವನ್ನು ಅನಾವರಣಗೊಳಿಸಿದ ಅಭಿನಯ ಚಕ್ರವರ್ತಿ ನಂತರ ಸಾಹಿತಿ ಬಿ.ಎಲ್. ವೇಣು ಅವರ ಕಾದಂಬರಿ ಆಧಾರಿತ ಚಿತ್ರ ‘ಬಿಚ್ಚುಗತ್ತಿ ಭರಮಣ್ಣ ನಾಯಕ’ ಧ್ವನಿ ಸುರಳಿಯನ್ನು ಬಿಡುಗಡೆ ಮಾಡಿದರು.

‘ಕಿರಿಯ ಸ್ವಾಮೀಜಿಗಳಾದರೂ ಹಿರಿಯರು ಮಾಡಿರುವ ಸಾಧನೆ ಮಾಡಿದ್ದಾರೆ. ಅವರು ನಿಮಗಾಗಿ ದುಡಿಯುತ್ತಿದ್ದು, ಅವರಿಗೆ ಬೆಂಬಲ ನೀಡಬೇಕು’ ಎಂದರು.

‘ಈ ವಿಚಾರವಾಗಿ ನಾನು ಜಾಸ್ತಿ ಮಾಡಲು ಬರುವುದಿಲ್ಲ. ನಾನು ಚಿತ್ರರಂಗದವನು. ಕನ್ನಡಿಗ. ಸಿನಿಮಾ ಬಗ್ಗೆ ಮಾತನಾಡುವುದಷ್ಟೇ ಗೊತ್ತು. ಏಕೆಂದರೆ ಅದೇ ನನ್ನ ಪ್ರಪಂಚ. 24 ವರ್ಷ ಚಿತ್ರರಂಗದಲ್ಲಿ ಹೇಗೆ ತೇಲಿಕೊಂಡು ಬಂದಿದ್ದೇನೋ ನನಗೆ ಗೊತ್ತಿಲ್ಲ. ಪ್ರತಿಸಲ ನಾನು ಎಡವಿ ಬಿದ್ದಾಗ ನನ್ನ ಕೈಯನ್ನು ಹಿಡಿದು ಎತ್ತಿದ್ದಕ್ಕೆ ಧನ್ಯವಾದ’ ಎಂದರು.

ಅಭಿಮಾನಿಗಳು ‘ಪೈಲ್ವಾನ್’ ಚಿತ್ರದ ಹಾಡು ಹಾಡಲು ಬೇಡಿಕೆ ಇಟ್ಟಾಗ ‘ಈ ಹಾಡು ಕೇಳಲು ಚಂದ. ಹಾಡಲು ಚೆಂದ ಚಂದವಲ್ಲ’ ಎಂದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಮುಸ್ಸಂಜೆ ಮಾತು ಚಿತ್ರದ ‘ಏನಾದರೂ ಮುಂದೆ ಸಾಗು ನೀ’ ಹಾಗೂ ಬಿಗ್‌ಬಾಸ್‌ನಲ್ಲಿ ವಾಸುಕಿ ವೈಭವ್ ಹಾಡಿದ ‘ಮನಸ್ಸಿಂದ ಯಾರೂನು ಕೆಟ್ಟೋರಲ್ಲ’ ಹಾಡನ್ನು ಹಾಡಿದರು.

‘ಈ ಹಾಡನ್ನು ಕೇಳುವುದು ಮಾತ್ರವಲ್ಲ. ನಿಜ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ’. ‘ಕೈಯಲ್ಲಿ ಇರುವ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬೇಡಿ, ಬೆಳೆಸಿಕೊಂಡು ಹೋಗಿ’ ಎಂದು ಸಲಹೆ ನೀಡಿದರು.

ನಂತರ ವೀರಮದಕರಿ ಚಿತ್ರದ ಡೈಲಾಗ್ ಹೊಡೆದು ರಂಜಿಸಿದರು. ಆರಂಭದಲ್ಲಿ ಚಿತ್ರನಟ ಶಶಿಕುಮಾರ್ ವೇದಿಕೆಯಲ್ಲಿ ಮಾತನಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು