ಶನಿವಾರ, ಜುಲೈ 2, 2022
22 °C
ಆತ್ಮನಿರ್ಭರ ಕೃಷಿ ಮತ್ತು ಸಿರಿ ಧಾನ್ಯಗಳ ವರ್ಷಾಚರಣೆ ಮೇಳ

ಆತ್ಮನಿರ್ಭರದಿಂದ ಕೃಷಿ ಉದ್ಯಮವಾಗಿಸಲು ಯತ್ನ: ಈರಣ್ಣ ಕಡಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ರೈತರ ಸ್ಥಿತಿಯನ್ನು ಸುಧಾರಿಸಲು ಆತ್ಮನಿರ್ಭರ ಕೃಷಿಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ. ಕೃಷಿಯನ್ನು ಉದ್ಯಮವನ್ನಾಗಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ರೈತರಿಗೆ ತಲುಪಿಸಲು ಕಾರ್ಯಕರ್ತರು ಮುಂದಾಗಬೇಕು’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ ಸಲಹೆ ನೀಡಿದರು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆಶ್ರಯದಲ್ಲಿ ನಗರದ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆತ್ಮನಿರ್ಭರ ಕೃಷಿ ಮತ್ತು ಸಿರಿ ಧಾನ್ಯಗಳ ವರ್ಷಾಚರಣೆ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಶೇ 48ರಷ್ಟು ಜನ ಕೃಷಿ ಹಾಗೂ ಕೃಷಿ ಸಂಬಂಧಿತ ಚುಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರೈತರ ತಲಾ ಆದಾಯವು ಕೇವಲ ₹ 80 ಸಾವಿರ ಇತ್ತು. ಹತ್ತು ವರ್ಷಗಳ ಹಿಂದೆ ದೇಶದ ಜಿಡಿಪಿಗೆ ರೈತರ ಕೊಡುಗೆ ಶೇ 11ರಷ್ಟು ಮಾತ್ರ ಇತ್ತು. 70 ಸಾವಿರ ಕೋಟಿ ಮೊತ್ತದಷ್ಟು ಖಾದ್ಯ ತೈಲವನ್ನು (ಶೇ 60) ಆಮದು ಮಾಡಿಕೊಳ್ಳಲಾಗುತ್ತಿದೆ. ರೈತರ ಸ್ಥಿತಿ ಸುಧಾರಣೆಯಾಗದ ಹೊರತು ದೇಶ ಮುಂದೆ ಬರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಘೋಷಿಸಿದರು. ಆತ್ಮನಿರ್ಭರ ಕೃಷಿಗೂ ಒತ್ತು ನೀಡಿದ್ದಾರೆ’ ಎಂದು ಹೇಳಿದರು.

‘ಹತ್ತು ವರ್ಷಗಳ ಹಿಂದೆ ಬಜೆಟ್‌ನಲ್ಲಿ ಕೇವಲ ₹ 21,933 ಕೋಟಿಯನ್ನು ಕೃಷಿ ವಲಯಕ್ಕೆ ಮೀಸಲಿಡಲಾಗುತ್ತಿತ್ತು. ನಮ್ಮ ಸರ್ಕಾರ ಬಂದ ಬಳಿಕ ಕೃಷಿ ಒತ್ತು ನೀಡಿದ್ದು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹ 1,32,523 ಕೋಟಿ ಮೀಸಲಿಡಲಾಗಿದೆ. ಮಣ್ಣಿನ ಆರೋಗ್ಯ ಕಾರ್ಡ್‌, ಕೃಷಿ ಸಿಂಚಾಯಿ ಯೋಜನೆ ಜಾರಿಗೆ ತರಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆ ತಗ್ಗಿಸಲು ರಾಸಾಯನಿಕ ಕೃಷಿಯ ಬದಲು ಸಾವಯವ ಕೃಷಿಗೆ ಒತ್ತು ನೀಡಲಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ₹ 10 ಸಾವಿರ ಸಹಾಯಧನ ನೀಡಲಾಗುತ್ತಿದೆ. ಕೃಷಿಯನ್ನು ಉದ್ಯಮವಾಗಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಈರಣ್ಣ ಕಡಾಡಿ ಮಾಹಿತಿ ನೀಡಿದರು.

ಮೌಲ್ಯವರ್ಧನೆಗೆ ಒತ್ತು: ‘ಮೊದಲು ರೈತರು ಎತ್ತಿನ ಗಾಣದ ಮೂಲಕ ಕುಸಬಿ, ಸೂರ್ಯಕಾಂತಿ, ಶೇಂಗಾ, ತೆಂಗಿನಎಣ್ಣೆಗಳನ್ನು ತಯಾರಿಸುತ್ತಿದ್ದರು. ಆದರೆ, ಇಂದು ಬ್ರಾಂಡ್‌ಗೆ ಮೊರೆಹೋಗಿ ಯಾವುದೋ ಪ್ಯಾಕೆಟ್‌ಗಳಲ್ಲಿ ಬರುವ ಖಾದ್ಯ ತೈಲವನ್ನು ಖರೀದಿಸಲಾಗುತ್ತಿದೆ. ₹ 2 ಲಕ್ಷರಿಂದ ₹ 3 ಲಕ್ಷದಲ್ಲಿ ಯಂತ್ರವನ್ನು ಹಾಕಿಕೊಂಡರೆ ರೈತರು ಖಾದ್ಯ ತೈಲವನ್ನು ತಯಾರಿಸಬಹುದಾಗಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡಲು ಇನ್ನೊಂದು ನಿರ್ದೇಶನಾಲಯ ರಚಿಸಲಾಗಿದೆ. ರೈತರು ತಾವು ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕೃಷಿ ಉತ್ಪನ್ನಗಳ ರಫ್ತಿಗೂ ಒತ್ತು ನೀಡಲಾಗಿದೆ. ಪೆಟ್ರೋಲ್‌ ಮೇಲಿನ ಅವಲಂಬನೆಯನ್ನು ತಗ್ಗಿಸಲು ಶೇ 20ರಷ್ಟು ಎಥೆನಾಲ್‌ ಅನ್ನು ಪೆಟ್ರೋಲ್‌ ಜೊತೆಗೆ ಮಿಶ್ರಣ ಮಾಡಲು ಅನುಮತಿ ನೀಡಲಾಗಿದೆ. ಈ ಮೊದಲು 38 ಲಕ್ಷ ಲೀಟರ್‌ ಉತ್ಪಾದನೆಯಾಗುತ್ತಿತ್ತು. ಈಗ 195 ಲಕ್ಷ ಲೀಟರ್‌ ಎಥೆನಾಲ್‌ ಉತ್ಪಾದನೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ’ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ರೈತರು ಆತ್ಮ ಗೌರವದಿಂದ ಜೀವಿಸಬೇಕು, ಸ್ವಾವಲಂಬಿಗಳಾಗಬೇಕು ಎಂದು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಿರಿಧಾನ್ಯಗಳಿಗೆ ಹೆಚ್ಚು ಪ್ರಾಧಾನ್ಯೆ ನೀಡಿದ್ದಾರೆ. ಮುಂದಿನ 8–10 ತಿಂಗಳಲ್ಲಿ ಚುನಾವಣೆ ಬರಲಿದ್ದು, ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು’ ಎಂದು ಹೇಳಿದರು. 

ಶಾಸಕ ಎಸ್‌.ಎ. ರವೀಂದ್ರನಾಥ್‌, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್‌. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಹನಗವಾಡಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್‌ ಲೋಕಿಕೆರೆ, ಬಿ.ಎಂ. ಸತೀಶ್‌, ಅಣಬೇರು ಜೀವನಮೂರ್ತಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌, ಶಾಮನೂರು ಲಿಂಗರಾಜ್‌, ಮೇಯರ್‌ ಆರ್‌. ಜಯಮ್ಮ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು