ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ, ಟ್ಯಾಕ್ಸಿ ಸವಾರಿ ಈಗ ದುಬಾರಿ...

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ತಂದ ಸಂಕಷ್ಟ
Last Updated 22 ನವೆಂಬರ್ 2021, 4:34 IST
ಅಕ್ಷರ ಗಾತ್ರ

ದಾವಣಗೆರೆ:ಜಿಲ್ಲೆಯಲ್ಲಿ ಟ್ಯಾಕ್ಸಿ, ಟ್ರಾವೆಲ್ಸ್‌, ಆಟೊ ಬಾಡಿಗೆ ದರ ಏರಿಕೆಯಾಗಿದ್ದು, ಜನರು ಹೈರಾಣಾಗಿದ್ದಾರೆ. ಕೋವಿಡ್‌ ನಂತರ ಚೇತರಿಸಿಕೊಳ್ಳುತ್ತಿರುವ ಜನರಿಗೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಜತೆ ಟ್ಯಾಕ್ಸಿ, ಆಟೊ ಪ್ರಯಾಣ ದರವನ್ನೂ ಏರಿಕೆ ಮಾಡಿರುವುದು ಸಂಕಷ್ಟ ತಂದಿದೆ.

ನಗರ ಸೇರಿ ಜಿಲ್ಲೆಯ ಹಲವು ಪ್ರಯಾಣಿಕರು ದೂರದ ಊರು, ಶುಭ ಕಾರ್ಯಕ್ರಮ, ಧಾರ್ಮಿಕ ಕ್ಷೇತ್ರಗಳು, ಯಾತ್ರೆ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಟ್ಯಾಕ್ಸಿ, ಟ್ರಾವೆಲ್ಸ್‌ ಅವಲಂಬಿಸಿದ್ದಾರೆ. ‍ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿದ ನಂತರ ಬಾಡಿಗೆ ದರ ಹೆಚ್ಚಾಗಿದ್ದು, ದರ ಕೇಳಿ ಕೆಲವರು ಪ್ರಯಾಣವನ್ನು ಮುಂದೂಡುತ್ತಿದ್ದಾರೆ. ಕೆಲವರು ದರ ಕಡಿಮೆ ಮಾಡಲು ಚೌಕಾಸಿ ಮಾಡುತ್ತಾರೆ. ಇಲ್ಲವೇ ಪರಿಚಯದವರ ಬಳಿ ಕಡಿಮೆ ಬಾಡಿಗೆಗೆ ಬರುವಂತೆ ಕೇಳುತ್ತಿದ್ದಾರೆ.

ಮಕ್ಕಳನ್ನು ಹಿಂದೆ ಆಟೊ, ಆಮ್ನಿಯಲ್ಲಿ ಶಾಲೆಗೆ ಕಳುಹಿಸುತ್ತಿದ್ದ ಕೆಲಪೋಷಕರು ದರ ಹೆಚ್ಚಳದಿಂದ ಕಂಗಾಲಾಗಿದ್ದು, ಬೈಕ್‌ಗಳಲ್ಲಿ ತಾವೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.

ಕೊರೊನಾದಿಂದ ಜೀವನ ನಿರ್ವಹಣೆ ಸಂಕಷ್ಟ ಕಂಡಿರುವ ಕೆಲ ಚಾಲಕರು ಹೆಚ್ಚು ಕಡಿಮೆ ಮಾಡಿ ಗ್ರಾಹಕರು ಹೇಳಿದ ಬಾಡಿಗೆಗೆ ಒಪ್ಪಿ ಹೋಗುತ್ತಿದ್ದಾರೆ. ಇನ್ನು ಕೆಲವರು ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿದ್ದಾರೆ.

ಬಾಡಿಗೆಗಳು ಇಲ್ಲದಂತಹ ಸಮಯದಲ್ಲಿ ಕೆಲ ಚಾಲಕರು ಒಂದಿಷ್ಟು ಹೆಚ್ಚುವರಿ ಹಣದ ಆಸೆಗಾಗಿ ಕಿಲೋಮೀಟರ್‌ ಹೆಚ್ಚಿಸುತ್ತಿದ್ದು, ಇದು ಪ್ರಯಾಣಿಕರು, ಚಾಲಕರ ನಡುವೆ ಸಂಘರ್ಷಕ್ಕೂ ಕಾರಣವಾದ ಉದಾಹರಣೆ ಇದೆ.

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಟ್ಯಾಕ್ಸಿ ನಿಲ್ದಾಣ ಇದೆ. ಹೆಚ್ಚಿನ ವಾಹನಗಳು ನಿಂತಿದ್ದರೂ ದರ ಹೆಚ್ಚಳದ ಕಾರಣ ಬಹುತೇಕರಿಗೆ ಬಾಡಿಗೆ ಸಿಗುತ್ತಿಲ್ಲ.ಆಟೊ ನಿಲ್ದಾಣಗಳಲ್ಲಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಆಟೊ ಬಾಡಿಗೆ ದರ ಏರಿಕೆ:

ಜಿಲ್ಲೆಯಲ್ಲಿ ‘ಮೀಟರ್’ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಚಾಲಕರು ಕೇಳಿದಷ್ಟು ಬಾಡಿಗೆ ಕೊಟ್ಟು ಹೋಗುವಂಥ ಪರಿಸ್ಥಿತಿ ಇದೆ.

‘ಮೀಟರ್‌ ಹಾಕಿದರೆ ಪ್ರಯಾಣಿಕರಿಗೇ ತೊಂದರೆ. ಈಗ ಬಸ್‌ ನಿಲ್ದಾಣದಿಂದ ಸರಸ್ವತಿ ನಗರ, ವಿದ್ಯಾನಗರ, ಚಾಮರಾಜಪೇಟೆ ಮಾರ್ಕೆಟ್‌ನಿಂದ ₹ 60, ₹ 70 ಬಾಡಿಗೆ ಕೇಳುತ್ತೇವೆ. ಮೀಟರ್‌ ಹಾಕಿದರೆ ಹೆಚ್ಚಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೀಟರ್‌ ಅಳವಡಿಸಿಲ್ಲ’ ಎಂಬುದು ಆಟೊ ಚಾಲಕರ ಸಮಜಾಯಿಷಿ.

ಚಾಲಕರು ₹ 70ಕ್ಕಿಂತ ಹೆಚ್ಚು ಕೇಳಿದರೆ, ಚೌಕಾಸಿ ಮಾಡಿ ಪ್ರಯಾಣಿಕರು ಆಟೊ ಹತ್ತುತ್ತಿದ್ದಾರೆ. ಕೆಲವರು ನಗರ ಸಾರಿಗೆ ಬಸ್‌ಗಳಿಗೆ ಕಾಯುತ್ತಾರೆ. ಬಸ್‌ ಇಲ್ಲದ ಕಡೆ ದರ ಕಡಿಮೆ ಮಾಡಿ ಹೋಗುತ್ತಿದ್ದಾರೆ.

ಆಟೊ ಮೀಟರ್‌ ಅಳವಡಿಸದ ಆಟೊಗಳಿಗೆ ದಂಡ ವಿಧಿಸುವ ಅಧಿಕಾರ ಅಧಿಕಾರಿಗಳಿಗೆ ಇದೆ. ಆದರೆ, ಜಿಲ್ಲೆಯಲ್ಲಿ ಇದು ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನ.

‘ವಿದ್ಯಾನಗರದಿಂದ ಮಾರುಕಟ್ಟೆಗೆ ಹೋಗಲು ಆಟೊದವರು ₹ 70, ₹ 80 ಕೇಳುತ್ತಾರೆ. ಅಗತ್ಯ ಇದ್ದ ಸಂದರ್ಭ ಬಿಟ್ಟು ಈಗೀಗ ನಗರ ಸಾರಿಗೆ ಬಸ್‌ ಅನ್ನೇ ಹೆಚ್ಚು ಅವಲಂಬಿಸಿದ್ದೇನೆ’ ಎಂದು ವಿದ್ಯಾನಗರದ ಸುರೇಶ್ ಹೇಳಿದರು.

‘ಬಾಡಿಗೆಯನ್ನು ತುಂಬಾ ಹೆಚ್ಚಿಗೆ ಮಾಡಿಲ್ಲ. ಈಗ ಇರುವ ದರಕ್ಕಿಂತ ₹ 10 ಹೆಚ್ಚು ಕೇಳುತ್ತಿದ್ದೇವೆ. ಆದರೆ, ಜನರು ಇದನ್ನು ಒಪ್ಪುತ್ತಿಲ್ಲ. ಪೆಟ್ರೋಲ್‌, ಡೀಸೆಲ್‌, ಅನಿಲ ದರ ಹೆಚ್ಚಳದಿಂದ ನಮಗೂ ದರ ಏರಿಕೆ ಮಾಡುವ ಅನಿವಾರ್ಯ ಇದೆ. ಇಲ್ಲದಿದ್ದರೆ ನಮ್ಮ ಜೀವನ ನಡೆಯಬೇಕಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಆಟೊ ಚಾಲಕ ವೆಂಕಣ್ಣ.

‘ಆಟೊಕ್ಕಾಗಿ ಮಾಡಿದ ಸಾಲ ತೀರಿಸಬೇಕು. ತಿಂಗಳಿಗೆ ವಿಮೆ, ಸಾಲದ ಕಂತು ಸೇರಿ ₹ 10 ಸಾವಿರದಿಂದ ₹ 12 ಸಾವಿರ ಬರುತ್ತದೆ. ನಮ್ಮ ಸಮಸ್ಯೆ ಕೇಳುವವರಿಲ್ಲ. ಸರ್ಕಾರದಿಂದಲೂ ಉತ್ತೇಜನ ಇಲ್ಲ. ಅನಿವಾರ್ಯವಾಗಿ ದರ ಹೆಚ್ಚಿಗೆ ಮಾಡಿದ್ದೇವೆ. ದುಡಿಮೆ ಇಲ್ಲದಾಗ ಗ್ರಾಹಕರು ಕೇಳಿದ ದರಕ್ಕೆ ಹೋಗುತ್ತೇವೆ. ಹೊಂದಾಣಿಕೆ ಇರಬೇಕಲ್ಲ’ ಎನ್ನುತ್ತಾರೆ ಆಟೊ ಚಾಲಕರಾದ ರಂಗಪ್ಪ, ಮಂಜುನಾಥ್.

‘ಡೀಸೆಲ್, ಪೆಟ್ರೋಲ್‌ ದರ ಹೆಚ್ಚಳಕ್ಕಿಂತ ಸರ್ಕಾರದ ನೀತಿ ಸಂಕಷ್ಟ ತಂದಿದೆ.20 ಸೀಟಿನವರೆಗಿನ ಟೂರಿಸ್ಟ್‌ ಬಸ್‌ಗಳಿಗೆ ಒಂದು ತೆರಿಗೆ 24 ಸೀಟ್‌ನವರಿಗೆ ಒಂದು ತೆರಿಗೆ ಇದೆ. ಇದು ಅನ್ಯಾಯ. ಸರ್ಕಾರಕ್ಕೆ ತೆರಿಗೆ ಕಟ್ಟಿದರೂ ಟೋಲ್‌ಗಳಲ್ಲಿ ಹೆಚ್ಚು ಶುಲ್ಕ ಪಾವತಿಸಬೇಕಿದೆ. ಇದು ಸರಿಯಲ್ಲ. ಅನಿವಾರ್ಯವಾಗಿ ಬಾಡಿಗೆ ದರ ಹೆಚ್ಚಳ ಮಾಡಿದ್ದೇವೆ’ ಎಂದರು ದಾವಣಗೆರೆ ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಡಿ. ದೀಕ್ಷಿತ್.

‘ಈಗ ಎಲ್ಲದರ ದರ ಹೆಚ್ಚಳವಾಗಿದೆ. ಇಂಧನ ದರ ಏರಿಕೆ ಜತೆ ವಾಹನಗಳ ಬಿಡಿ ಭಾಗಗಳ ದರವೂ ದುಪ್ಪಟ್ಟಾಗಿದೆ. ದರ ಹೆಚ್ಚಳ ನಮಗೆ ಅನಿವಾರ್ಯ. ಮೊದಲಿಗಿಂತ ₹ 1 ಹೆಚ್ಚಳ ಮಾಡಿದ್ದು, ಪ್ರಯಾಣಿಕರಿಗೂ ತೊಂದರೆ ಆಗದಂತೆ ಹೆಚ್ಚು ಕಡಿಮೆ ಮಾಡಿ ಬಾಡಿಗೆಗೆ ಹೋಗುತ್ತಿದ್ದೇವೆ’ ಎಂದರು ದಾವಣಗೆರೆ ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಾಜಣ್ಣ.

ಬಾಡಿಗೆ ದರ ಹೆಚ್ಚಳ: ಪೋಷಕರು ಹೈರಾಣ

ದಾವಣಗೆರೆ ನಗರದ ಶಾಲೆಗಳಿಗೆ ಬರಲು ತಾಲ್ಲೂಕಿನ ಕೆಲ ಗ್ರಾಮಗಳಿಂದ ವಿದ್ಯಾರ್ಥಿಗಳು ಆಟೊಗಳಲ್ಲಿ ಬರುತ್ತಿದ್ದರು. ಆದರೀಗ ಪೋಷಕರು ತಮ್ಮ ಮಕ್ಕಳನ್ನು ಬೈಕ್‌ನಲ್ಲಿ ಶಾಲೆಗಳಿಗೆ ಕರೆದುಕೊಂಡು ಬರುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬಾಡಿಗೆ ದರ ದುಪ್ಪಟ್ಟು ಹೆಚ್ಚಳ ಮಾಡಿರುವುದು.

‘ನಮ್ಮೂರಿನಿಂದ ಮಕ್ಕಳು ಒಂದೇ ವ್ಯಾನಿನಲ್ಲಿ ನಗರದ ಶಾಲೆಗೆ ಬರುತ್ತಿದ್ದರು. ಮುಂಚೆ ತಿಂಗಳಿಗೆ ₹ 500 ಕೊಡುತ್ತಿದ್ದೆವು. ಈಗ ತಿಂಗಳಿಗೆ ₹ 1 ಸಾವಿರ ಕೇಳುತ್ತಿದ್ದಾರೆ. ಶಾಲೆ ಈಗಷ್ಟೇ ಆರಂಭವಾಗಿರುವುದರಿಂದ ಮನೆಯವರೇ ಬೈಕಿನಲ್ಲಿ ಬಿಡುತ್ತಿದ್ದಾರೆ. ಕೋವಿಡ್‌ ನಂತರ ಬಡವರು, ಮಧ್ಯಮ ವರ್ಗದವರು ಮಕ್ಕಳನ್ನು ಓದಿಸುವುದು ದೊಡ್ಡ ಸವಾಲಾಗಿದೆ’ ಎನ್ನುತ್ತಾರೆ ತೋಳಹುಣಸೆಯ ಹನುಮಂತಪ್ಪ.

ಇಂಧನ ಬೆಲೆ ಏರಿಕೆ: ಪ್ರಯಾಣ ದರ ಹೆಚ್ಚಳ

ಚನ್ನಗಿರಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕಡಿಮೆ ಇದ್ದಾಗ ಆಟೊ ಹಾಗೂ ಟ್ಯಾಕ್ಸಿಗಳಿಗಾಗಿ ಜನರು ಕಾಯುವಂತಹ ಪರಿಸ್ಥಿತಿ ಇತ್ತು. ಆದರೆ, ಬೆಲೆ ಏರಿಕೆಯಾದ ಮೇಲೆ ಆಟೊ ಹಾಗೂ ಟ್ಯಾಕ್ಸಿಗಳು ಜನರಿಗಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಆಟೊ ಹಾಗೂ ಟ್ಯಾಕ್ಸಿ ಚಾಲಕರು ಹೈರಾಣಾಗಿ ಹೋಗಿದ್ದಾರೆ. ಆಗಾಗಿ ಆಟೊ ಹಾಗೂ ಟ್ಯಾಕ್ಸಿ ಬಾಡಿಗೆ ದರಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಜನ ಸಾಮಾನ್ಯರಿಗೆ ಬರೆ ಬಿದ್ದಂತಾಗಿದೆ. ಆಟೊ ಹತ್ತಿದರೆ ಸಾಕು ಪ್ರಯಾಣಿಕರು ₹ 40 ಕೊಡಬೇಕಾಗಿದೆ. ಇನ್ನು ದೂರದ ಸ್ಥಳಗಳಿಗೆ ಹೋಗಲು ಹೆಚ್ಚಿನ ದರವನ್ನು ನೀಡಬೇಕಾಗಿದೆ.

ಬೆಲೆ ಏರಿಕೆ ಪರಿಣಾಮವಾಗಿ ಆಟೊಗಳು ಜನರಿಗಾಗಿ ಗಂಟೆಗಟ್ಟಲೇ ಸರದಿಯಲ್ಲಿ ನಿಂತು ಕಾಯಬೇಕಾಗಿದೆ. ಜನರು ಕೂಡಾ ದರ ಏರಿಕೆಯಿಂದ ಆಟೊಗಳಲ್ಲಿ ಪ್ರಯಾಣಿಸದೇ ನಡೆದುಕೊಂಡೇ ಹೋಗುವಂತಾಗಿದೆ.

‘ಅನಿವಾರ್ಯವಾಗಿ ಬಾಡಿಗೆ ದರವನ್ನು ಹೆಚ್ಚಳ ಮಾಡಲಾಗಿದೆ. ಆದರೆ, ಜನರು ಬಾಡಿಗೆ ಹೆಚ್ಚಳದಿಂದಾಗಿ ಬಾಡಿಗೆ ನೀಡಲು ಚೌಕಾಸಿ ಮಾಡುತ್ತಾ ಗಲಾಟೆ ಮಾಡುತ್ತಾರೆ. ದರ ಕಡಿಮೆ ಇದ್ದಾಗ ದಿನಕ್ಕೆ ₹ 1,000 ದಿಂದ ₹ 1,200 ದುಡಿಮೆ ಮಾಡುತ್ತಿದ್ದೆವು. ಆದರೆ, ದರ ಏರಿಕೆಯಾದ ಮೇಲೆ ಕೇವಲ ದಿನಕ್ಕೆ ₹ 500ರಿಂದ ₹ 800 ಮಾತ್ರ ದುಡಿಮೆಯಾಗುತ್ತಿದೆ. ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಇಳಿಸಿದರೆ ಮಾತ್ರ ಅಟೊಗಳು ಉಳಿಯುತ್ತವೆ. ಇಲ್ಲದಿದ್ದರೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆಟೊ ಓಡಿಸಿ ಅದರಿಂದ ಬಂದ ಹಣದಿಂದ ಕುಟುಂಬ ನಿರ್ವಹಣೆ ಮಾಡುತ್ತಿರುವ ನಮಗೆ ಕಷ್ಟವಾಗುತ್ತದೆ’ ಎಂದು ಆಟೊ ಚಾಲಕ ಸಂತೋಷ್ ಹೇಳಿದರು.

‘ಬೆಲೆ ಏರಿಕೆಯ ಪರಿಣಾಮ ಶಾಲಾ ವಾಹನಗಳ ಮೇಲೂ ಕೂಡಾ ಆಗಿದೆ. ಕಳದ ವರ್ಷ ನನ್ನ ಮಗನನ್ನು ಚನ್ನಗಿರಿಯ ಶಾಲೆಗೆ ಕರೆದುಕೊಂಡು ಹೋಗಿ ಮತ್ತೆ ಮನೆಗೆ ವಾಪಾಸ್ ಬಿಡಲು ₹ 6 ಸಾವಿರ ಹಣವನ್ನು ಟ್ಯಾಕ್ಸಿಗೆ ಕೊಡುತ್ತಿದ್ದೆ‌ವು. ಆದರೆ ಬೆಲೆ ಏರಿಕೆಯಾದ ಮೇಲೆ ₹ 10 ಸಾವಿರ ಹಣವನ್ನು ಟ್ಯಾಕ್ಸಿಗಳ ಮಾಲೀಕರು ನಿಗದಿ ಮಾಡಿದ್ದಾರೆ. ಹಾಗಾಗಿ ನಮ್ಮ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದುಕೊಂಡು ಹೋಗಿ ಬಿಡುವಂತಾಗಿದೆ. ಇನ್ನು ಕೆಲವು ಪೋಷಕರು ಕೆಎಸ್‌ಆರ್‌ಟಿಸಿ ಬಸ್ ಪಾಸ್ ಮಾಡಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ’ ಎಂದು ಪಾಂಡೋಮಟ್ಟಿ ಗ್ರಾಮದ ಪೋಷಕ ಶಿವಲಿಂಗಪ್ಪ ಹೇಳಿದರು.

ಬಾಡಿಗೆ ದರ ಹೆಚ್ಚಳ: ಸ್ವಂತ ವಾಹನ ಬಳಕೆ

ಹರಪನಹಳ್ಳಿ: ಡೀಸೆಲ್, ಪೆಟ್ರೋಲ್ ದರ ಏರಿಕೆ ಪರಿಣಾಮ ಖಾಸಗಿ ವಾಹನಗಳಿಗೆ ಕಾಯಂ ಸಿಗುತ್ತಿದ್ದ ಬಾಡಿಗೆಗಳು ಕೈತಪ್ಪಿದ್ದ ಪರಿಣಾಮ ಆಟೊ ಚಾಲಕರು ಪರಿತಪಿಸುವಂತಾಗಿದೆ. ಇಂಧನ ದರ ಏರಿಕೆ ಆಟೊ, ಟ್ಯಾಕ್ಸಿ ದರ ಹೆಚ್ಚಳಕ್ಕೆ ಕಾರಣವಾಗಿದೆ.

ಪಟ್ಟಣ ವಿದ್ಯಾಕೇಂದ್ರವಾಗಿ ಮಾರ್ಪಟ್ಟಿದ್ದು, ಪೂರ್ವ ಪ್ರಾಥಮಿಕ ತರಗತಿಯಿಂದ ಉನ್ನತ ಪದವಿವರೆಗೂ ಶಿಕ್ಷಣ ಸಂಸ್ಥೆಗಳು ತೆರೆದುಕೊಂಡಿವೆ. ಇದಕ್ಕೆ ಪೂರಕವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು, ಆರಂಭದಿಂದಲೂ ಬಾಡಿಗೆ ಆಟೊಗಳನ್ನು ಕಾಯ್ದಿರಿಸಿಕೊಂಡಿದ್ದರು. ಆದರೆ ಡೀಸೆಲ್ ಮತ್ತು ಪೆಟ್ರೋಲ್‌ ದರ ಏರಿಕೆ ಪರಿಣಾಮ ಆಟೊ ಚಾಲಕರು ಬಾಡಿಗೆ ಹಣ ಹೆಚ್ಚಿಸಿಕೊಂಡಿದ್ದಾರೆ. ತಿಂಗಳಿಗೆ ₹ 300 ಇದ್ದ ಬಾಡಿಗೆ ಈಗ ₹ 400 ಆಗಿದೆ. ₹ 600 ಇದ್ದ ಕಡೆಯಲ್ಲಿ ₹ 800 ಆಗಿದೆ. ಇದರಿಂದ ಪೋಷಕರು ಹೈರಾಣಾಗಿದ್ದಾರೆ.

ಶಾಲೆಗಳ ಪುನರ್ ಆರಂಭದ ಬಳಿಕ ಪೋಷಕರೇ ತಮ್ಮ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ವಿದ್ಯಾಸಂಸ್ಥೆಗಳ ಸಾರಿಗೆ ಬಸ್‌ಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿರುವುದು ಕಂಡುಬರುತ್ತಿದೆ.

‘ನಾನು ಸಮಯ ಹೊಂದಾಣಿಕೆ ಮಾಡಿಕೊಂಡು 10 ವಿದ್ಯಾರ್ಥಿಗಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಬಿಟ್ಟು ಬರುತ್ತಿದ್ದೆ. ಕಾಯಂ ಆಗಿ ಬಾಡಿಗೆ ಬರುತ್ತಿದ್ದರಿಂದ ತಿಂಗಳಿಗೊಮ್ಮೆ ಉತ್ತಮ ಆದಾಯ ಗಳಿಸುತ್ತಿದೆ. ಆದರೆ ಈಗ ವಿದ್ಯಾರ್ಥಿಗಳ ಸಂಖ್ಯೆ 4ಕ್ಕೆ ಇಳಿಕೆಯಾಗಿದೆ’ ಎಂದು ಆಟೊ ಚಾಲಕ ಆದರ್ಶ ತಿಳಿಸಿದರು.

‘ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಶುಲ್ಕ ಕಟ್ಟಿ ಸಾರಿಗೆ ಬಸ್‌ನಲ್ಲಿ ಸಂಚರಿಸುತ್ತಿದ್ದರು. ಆದರೆ ಈಗ ಪೋಷಕರೇ ಶಾಲೆಗೆ ಬಿಟ್ಟು ಹೋಗುತ್ತಿದ್ದಾರೆ’ ಎಂದು ಖಾಸಗಿ ಶಾಲೆಯ ಮುಖ್ಯಶಿಕ್ಷಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT