ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ರ್‍ಯಾಂಕ್‌ : ಪ್ರತಿ ತರಗತಿಯಲ್ಲೂ ಮೊದಲ ಸ್ಥಾನದಲ್ಲಿದ್ದ ಅವಿನಾಶ್

ಇಂಡಿಯನ್‌ ಫಾರಿನ್‌ ಸರ್ವೀಸ್‌ನಲ್ಲಿ ಸೇವೆ ಮಾಡುವ ಆಸಕ್ತಿ
Last Updated 31 ಮೇ 2022, 3:32 IST
ಅಕ್ಷರ ಗಾತ್ರ

ದಾವಣಗೆರೆ: ಬಾಲ್ಯದಿಂದ ಇಲ್ಲಿಯವರೆಗೆ ಓದಿದ ಪ್ರತಿ ತರಗತಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಅವಿನಾಶ್‌ ವಿ. 2021ರ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 31ನೇ ರ್‍ಯಾಂಕ್‌ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಕಾನೂನು ಪದವಿ ಓದುತ್ತಿರುವಾಗ ಹುಟ್ಟಿದ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ.

ಜನತಾ ಲಾಡ್ಜ್‌, ಜನತಾ ಡಿಲಕ್ಸ್‌, ಆನಂದ ರೆಸಿಡೆನ್ಸಿ ಮಾಲೀಕರಾದ ವಿಠಲರಾವ್‌-ಸ್ಮಿತಾ ದಂಪತಿಯ ಅವಳಿ ಮಕ್ಕಳಲ್ಲಿ ಒಬ್ಬರಾಗಿರುವ ಅವಿನಾಶ್‌ ಅವರು ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ, ತೋಳಹುಣಸೆಯ ಪಿಎಸ್‌ಎಸ್‌ಇಎಂಆರ್‌ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದರು. ಧವನ್‌ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯು ಮುಗಿಸಿದ್ದರು. ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯಲ್ಲಿ ಐದು ವರ್ಷಗಳ ಕಾನೂನು ಪದವಿಯನ್ನು ಪಡೆದಿದ್ದರು. ಈ ಎಲ್ಲ ಕಡೆಗಳಲ್ಲಿ ಮೊದಲ ಸ್ಥಾನವನ್ನು ಅವಿನಾಶ್‌ ಪಡೆದಿದ್ದರು.

ಟೆನಿಸ್‌ ಆಡುವ, ಬೀದಿನಾಟಕಗಳನ್ನು ಮಾಡುವ ಹವ್ಯಾಸವನ್ನು ಹೊಂದಿರುವ ಅವಿನಾಶ್‌ ಎಲ್ಲ ಸಮಯಗಳಲ್ಲಿ ಓದಿನ ಬಗ್ಗೆ ಚಿಂತೆ ಮಾಡಿದವರಲ್ಲ. ಆದರೆ ಪರೀಕ್ಷೆ ಹತ್ತಿರ ಇರುವಾಗ ದಿನಕ್ಕೆ 6–7 ಗಂಟೆ ಓದಿಗಾಗಿಯೇ ಮೀಸಲಿಟ್ಟವರು. ಯುಪಿಎಸ್‌ಸಿ ಪರೀಕ್ಷೆಗೂ ಒಂದು ವರ್ಷಗಳ ಕಾಲ ಪ್ರತಿದಿನ 6–7 ಗಂಟೆ ಓದಿದ್ದರು.

‘ಕಾನೂನು ಪದವಿ ಪಡೆಯುತ್ತಿರುವ ಸಮಯದಲ್ಲಿ ಇಂಟರ್ನಿಯಾಗಿ ಭಾರತದ ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆಗ ಸುಷ್ಮಾ ಸ್ವರಾಜ್‌ ಅವರು ವಿದೇಶಾಂಗ ಸಚಿವರಾಗಿದ್ದರು. ನಾನೂ ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡಬೇಕು ಎಂಬ ಕನಸು ಅಲ್ಲಿ ಹುಟ್ಟಿತು. ರಾಯಭಾರಿಯಾಗಬೇಕು, ದೇಶ ಸೇವೆ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದೆ’ ಎಂದು ‘ಪ್ರಜಾವಾಣಿ’ ಜತೆಗೆ ಕನಸು ಹಂಚಿಕೊಂಡರು.

‘ಅವಿನಾಶ್‌ಗೆ ಎಲ್ಲವನ್ನೂ ತಿಳಿದುಕೊಳ್ಳುವ ಹಂಬಲ. ಹೊಸತನ್ನು ತಿಳಿದುಕೊಂಡು ಬಂದು ನನಗೆ ಹೇಳುತ್ತಿದ್ದ. ಜತೆಗೆ ನನಗೂ ಸ್ಫೂರ್ತಿ ತುಂಬುತ್ತಿದ್ದ. ಅವನಿಗೆ ರ‍್ಯಾಂಕ್‌ ಬರುತ್ತದೆ ಎಂಬ ವಿಶ್ವಾಸ ನನಗೆ ಇತ್ತು’ ಎಂದು ಎಂಬಿಬಿಎಸ್ ಮುಗಿಸಿ ಎಂಡಿ ಮಾಡುತ್ತಿರುವ, ಅವಿನಾಶ್‌ ಜತೆಗೆ ಅವಳಿಯಾಗಿ ಹುಟ್ಟಿರುವ ಅರ್ಪಿತಾ ಅಭಿಪ್ರಾಯಪಟ್ಟರು.

‘ಕಷ್ಟಪಟ್ಟು ಕಟ್ಟಿದ ಹೋಟೆಲ್‌ ಉದ್ಯಮವನ್ನು ಅವಿನಾಶ್‌ ಮುಂದುವರಿಸಲಿ ಎಂಬುದು ನಮ್ಮ ಇಚ್ಛೆಯಾಗಿತ್ತು. ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂಬುದು ಅವನ ಆಸೆಯಾಗಿತ್ತು. ಈಗ ರಾಜ್ಯಕ್ಕೇ ಮೊದಲ ಸ್ಥಾನ ಪಡೆದು ಕೀರ್ತಿ ತಂದಿದ್ದಾನೆ’ ಎಂದು ಅವಿನಾಶ್‌ ಅವರ ಅಜ್ಜ, 94 ವರ್ಷದ ಆನಂದರಾವ್‌ ಸಂತಸ ವ್ಯಕ್ತಪಡಿಸಿದರು.

‘ಯುಪಿಎಸ್‌ಸಿಯಲ್ಲಿ ರ‍್ಯಾಂಕ್‌ ಬರುತ್ತದೆ ಎಂಬುದು ನಮಗಿಂತ ಅವನಿಗೆ ನಿರೀಕ್ಷೆ ಇತ್ತು. ಐಎಎಸ್‌ ಅಧಿಕಾರಿಯಾದರೆ ರಾಜಕೀಯದ ಹಸ್ತಕ್ಷೇಪ ಹೆಚ್ಚಿರುತ್ತದೆ. ಅದಕ್ಕೆ ಐಎಫ್‌ಎಸ್‌ ಮಾಡಬೇಕು ಎಂಬುದು ಅವನ ಇಚ್ಛೆಯಾಗಿತ್ತು. 31ನೇ ರ‍್ಯಾಂಕ್ ಪಡೆದಿರುವುದರಿಂದ ಐಎಫ್‌ಎಸ್‌ ಅಧಿಕಾರಿಯಾಗಲು ಅವಕಾಶವಿದೆ’ ಎಂದು ತಂದೆ ವಿಠಲರಾವ್‌, ತಾಯಿ ಸ್ಮಿತಾ ಸಂಭ್ರಮಿಸಿದರು.

ಕುಟುಂಬದ ಹಿನ್ನೆಲೆ: ಅವಿನಾಶ್‌ನ ಅಜ್ಜ ಆನಂದ ರಾವ್ ಅವರು ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಕುಂಭಾಶಿಯವರು. ಬಂಕಾಪುರ, ಹುಬ್ಬಳ್ಳಿ ಸಹಿತ ವಿವಿಧೆಡೆ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಾ 1960ರಲ್ಲಿ ದಾವಣಗೆರೆಗೆ ಬಂದಿದ್ದರು. ಇಲ್ಲಿ ಹಳೇ ದಾವಣಗೆರೆಯಲ್ಲಿ ಸುಜಾತಾ ಎಂಬ ಹೋಟೆಲ್‌ ಆರಂಭಿಸಿದ್ದರು. ಬಳಿಕ ಪುತ್ರರಾದ ನಾಗರಾಜ ರಾವ್‌, ವಿಠಲರಾವ್‌ ಜತೆಗೆ ಜನತಾ ಲಾಡ್ಜ್‌, ಜನತಾ ಡಿಲಕ್ಸ್‌, ಆನಂದ ರೆಸಿಡೆನ್ಸಿ ಆರಂಭಿಸಿ ಹೋಟೆಲ್ ಉದ್ಯಮದಲ್ಲಿ ತಮ್ಮದೇ ಛಾಪು
ಮೂಡಿಸಿದ್ದಾರೆ.

*
ಯಾವುದೇ ಪರೀಕ್ಷೆ ಬರೆಯುವವರು ಏಕಾಗ್ರತೆಯಿಂದ ನಿತ್ಯ ಆರೇಳು ಗಂಟೆ ಓದಬೇಕು. ಆಗ ಸಾಧನೆ ಮಾಡಲು ಸಾಧ್ಯ.
-ಅವಿನಾಶ್‌ ವಿ., ಯುಪಿಎಸ್‌ಸಿ 31ನೇ ರ‍್ಯಾಂಕ್‌ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT