ದಾವಣಗೆರೆ: ಸಾಧನೆ ಮಾಡುವ ಮನಸ್ಸು, ಬದ್ಧತೆ ಮತ್ತು ಶ್ರಮ ಇದ್ದರೆ ಅಂಗವೈಕಲ್ಯವೂ ಸೇರಿ ಯಾವುದೂ ಅಡ್ಡಿಯಾಗದು ಎಂಬುದಕ್ಕೆ ಸಾಕ್ಷಿಯಂತಿದ್ದಾರೆ ಚನ್ನಗಿರಿ ತಾಲ್ಲೂಕು ಕಂಚುಗಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಅಶೋಕ್. ಅವರ ಸಾಧನೆಗಾಗಿಯೇ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಕಂಚುಗಾರನಹಳ್ಳಿ ಶಾಲೆಯ ಗೋಡೆಗಳು ಅವರ ಸಾಧನೆಯನ್ನು ಸಾರುತ್ತಿವೆ. ಇಡೀ ಶಾಲೆ ರೈಲಿನಂತಿದೆ. ಅದರ ಆವರಣಗೋಡೆಗಳು ವರ್ಲಿಚಿತ್ರದಿಂದ ಕಂಗೊಳಿಸುತ್ತಿವೆ.
‘ಮೊದಲು ನಾನೇ ₹ 4,000 ಕೈಯಿಂದ ಹಾಕಿ ಪೇಂಟ್ ತಂದು ಶಾಲೆಯ ಗೋಡೆಗಳ ಮೇಲೆ ಚಿತ್ರಬಿಡಿಸಿದೆ. ಅದನ್ನು ನೋಡಿ ಶಾಲೆಯ ಸಿಬ್ಬಂದಿ, ಊರಿನವರು ಪ್ರೋತ್ಸಾಹ ನೀಡಿದರು. ಅವರ ದೇಣಿಗೆಯಿಂದ ಸುಮಾರು ₹ 25 ಸಾವಿರ ವೆಚ್ಚದಲ್ಲಿ ಶಾಲೆಗೆ ಬೇರೆ ಸ್ವರೂಪ ನೀಡಿದೆ’ ಎಂದು ಅಶೋಕ್ ನೆನಪಿಸಿಕೊಂಡರು.
‘ಚುಕ್ಕಿ ಚಿತ್ರಗಳು, ತೈಲವರ್ಣ ಚಿತ್ರಗಳು, ವರ್ಲಿ ಚಿತ್ರಗಳನ್ನು ಬಿಡಿಸಿದ್ದೇನೆ. ಮಕ್ಕಳಿಗೆ ಚಿತ್ರಕಲೆಯ ಜತೆಗೆ ಚಂದದ ಬರವಣಿಗೆ ಬಗ್ಗೆ ಹೇಳಿಕೊಡುತ್ತಿದ್ದೇನೆ. ಸಚಿನ್ ಪಿ. ಎಂಬ ನನ್ನ ಒಬ್ಬ ವಿದ್ಯಾರ್ಥಿ ಕಳೆದ ವರ್ಷ ಕನಕದಾಸ ಜಯಂತಿ ದಿನ ಕನಕದಾಸರ ಚಿತ್ರವನ್ನು ಬಿಡಿಸಿ ಜಿಲ್ಲಾಡಳಿತದಿಂದ ಪ್ರಮಾಣಪತ್ರ ಪಡೆದಿದ್ದಾನೆ’ ಎಂದು ಹೆಮ್ಮೆಪಟ್ಟುಕೊಂಡರು.
‘ಮಕ್ಕಳಿಗೆ ನಕ್ಷೆ, ಶಾಲಾ ಪಠ್ಯಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಸರಳ ಮತ್ತು ಸುಲಭವಾಗಿ ಹೇಗೆ ಬಿಡಿಸುವುದು ಎಂಬುದನ್ನು ಹೇಳಿಕೊಡುತ್ತಿದ್ದೇನೆ’ ಎಂದು ತಿಳಿಸಿದರು.
ಜ್ವರ ತಂದ ಅಂಗವೈಕಲ್ಯ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿಯ ಧರ್ಮಣ್ಣ–ತಿಪ್ಪವ್ವ ದಂಪತಿಯ ನಾಲ್ವರು ಮಕ್ಕಳಲ್ಲಿ ಎರಡನೇಯವರೇ ಅಶೋಕ್. ಹುಟ್ಟಿ ಮೂರು ವರ್ಷದ ನಂತರ ಒಂದು ದಿನ ಜ್ವರ ಬಂದಿತ್ತು. ಮರುದಿನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಜ್ವರಕ್ಕೆ ಔಷಧ ಮತ್ತು ಪೋಲಿಯೋ ಇಂಜೆಕ್ಷನ್ ಕೊಟ್ಟಿದ್ದರು. ಆನಂತರ ಬಲಗಾಲಿನ ಸ್ವಾಧೀನ ಕಳೆದುಕೊಂಡರು. ಎರಡು ವರ್ಷ ಮಲಗಿದ್ದಲ್ಲೇ ಇದ್ದರು. ತಂದೆ–ತಾಯಿಯ ನಿರಂತರ ಪ್ರಯತ್ನದಿಂದಾಗಿ ಒಂದು ಕಾಲು ಎಳೆದುಕೊಂಡು ನಡೆಯುಂತಾಗಿತ್ತು.
ಮನಗೂಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದಿದ ಅಶೋಕ್ ಅವರಿಗೆ ಚಿತ್ರ ಬಿಡಿಸುವ ಬಗ್ಗೆ ಅಪಾರ ಆಸಕ್ತಿ ಇತ್ತು. ಹಾಗಾಗಿ ಬಸವನಬಾಗೇವಾಡಿಯ ರಾಜಾ ರವಿವರ್ಮ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಐದು ವರ್ಷಗಳ ಚಿತ್ರಕಲಾ ಕೋರ್ಸ್ ಮಾಡಿದರು. 2005ರಲ್ಲಿ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಕಿಟ್ಟ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾದರು. 2008ರಲ್ಲಿ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿ ಚನ್ನಗಿರಿಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ತಾಲ್ಲೂಕಿನ ಕಂಚುಗಾರನಹಳ್ಳಿ ಪ್ರೌಢಶಾಲೆಗೆ ಬಂದರು. ಹೊನ್ನಾಳಿಯಲ್ಲಿ ಉಳಿದುಕೊಂಡು ಅವರು ಕೆಲಸ ಮಾಡಿಕೊಂಡಿದ್ದು, ಪತ್ನಿ ಅನಸೂಯ ಮತ್ತು ಮೂವರು ಮಕ್ಕಳು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಅವರ ಸಾಧನೆಯನ್ನು ಗುರುತಿಸಿ ಹೊನ್ನಾಳಿ ಹಿರೇಕಲ್ಮಠ, ಹೊನ್ನಾಳಿ ಬಿಆರ್‌ಸಿ, ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ. ಈಗ ಜಿಲ್ಲಾ ಪ್ರಶಸ್ತಿ ಬಂದಿದೆ.
*********
ಸಂಸ್ಥೆಯನ್ನು ತನ್ನದೇ ಮನೆ ಎಂಬಂತೆ ತಿಳಿದುಕೊಂಡು ಅತ್ಯುತ್ತಮ ಚಿತ್ರಗಳನ್ನು ಬಿಡಿಸಿ, ಶಾಲೆಗೆ ಹೆಸರು ತಂದಿದ್ದಾರೆ.
ವೆಂಕಟೇಶ್ ನಾಯ್ಕ್, ಮುಖ್ಯಶಿಕ್ಷಕ,
ಕಂಚುಗಾರನಹಳ್ಳಿ ಸರ್ಕಾರಿ ಪ್ರೌಢಶಾಲೆ
*****
ಪ್ರತಿಭಾವಂತ, ಬುದ್ಧಿಶಾಲಿ ಶಿಕ್ಷಕ. ಅವರ ಚಿತ್ರಗಳನ್ನು ನೋಡಲು ಬೇರೆ ಬೇರೆ ಕಡೆಯಿಂದ ಜನ ಬರುತ್ತಾರೆ. ಮಕ್ಕಳಿಗೆ ಹೊಸತನ ಕಲಿಸುತ್ತಿದ್ದಾರೆ.
ಕೆ.ಆರ್.ಚಂದ್ರಶೇಖರಪ್ಪ, ಊರಿನ ಮುಖಂಡ
******
ಅಂಗವೈಕಲ್ಯ ಮೀರಿ ಚಿತ್ರಕಲೆಯಲ್ಲಿ ಸಾಧನೆ ಮಾಡಿದ್ದಾರೆ. ಈ ಬಾರಿಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಅವರ ಸಾಧನೆಗೆ ಸಲ್ಲಿಸಿದ ಗೌರವ.
ಚಂದ್ರಶೇಖರ್, ಶಿಕ್ಷಕ ಮತ್ತು ಸ್ನೇಹಿತ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.