ಬುಧವಾರ, ನವೆಂಬರ್ 13, 2019
23 °C
ಕನ್ನಡ ವಿಜ್ಞಾನ ಸಮ್ಮೇಳನ ಉದ್ಘಾಟಿಸಿದ ಕುಲಪತಿ ಡಾ. ಇಂದ್ರೇಶ್‌

ವಿಜ್ಞಾನದಿಂದ ಪ್ರಕೃತಿಯ ಅರಿವು: ದಾವಣಗೆರೆ ವಿವಿ ಕುಲಪತಿ ಡಾ. ಇಂದ್ರೇಶ್‌

Published:
Updated:
Prajavani

ದಾವಣಗೆರೆ: ಪ್ರಕೃತಿಯನ್ನು ಅರಿಯಲು ವಿಜ್ಞಾನದ ಕೊಡುಗೆ ಅಪಾರ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಕುಲಪತಿ ಡಾ. ಕೆ.ಎಂ. ಇಂದ್ರೇಶ್ ಹೇಳಿದರು.

ಬೆಂಗಳೂರು ‘ಸ್ವದೇಶಿ ವಿಜ್ಞಾನ ಆಂದೋಳನ’, ದಾವಣಗೆರೆ ವಿಶ್ವವಿದ್ಯಾಲಯದ ಆಶ್ರಯದಲ್ಲಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆರಂಭಗೊಂಡ ಎರಡು ದಿನಗಳ 15ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯ ರಚನೆ, ಬೆಳವಣಿಗೆ, ಸುತ್ತಲಿನ ವಾತಾವರಣವನ್ನು ಅರ್ಥ ಮಾಡಿಕೊಳ್ಳಲು, ನಿಸರ್ಗದ ಆಂತರ್ಯವನ್ನು ತಿಳಿಯಲು ವಿಜ್ಞಾನ ಸಹಾಯ ಮಾಡಿದೆ. ಆದರೆ, ಎಷ್ಟೇ ಸಂಶೋಧನೆಗಳು ನಡೆದಿದ್ದರೂ ಪ್ರಕೃತಿಯು ಇನ್ನೂ ಚಿದಂಬರ ರಹಸ್ಯಗಳನ್ನು ಉಳಿಸಿಕೊಂಡಿದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.

‘ವಿಜ್ಞಾನ, ತಂತ್ರಜ್ಞಾನವನ್ನು ಕನ್ನಡದಲ್ಲಿ ಅಳವಡಿಸಿಕೊಂಡು ಜನರಿಗೆ ತಿಳಿವಳಿಕೆ ನೀಡುವುದು ಬಹಳ ಮುಖ್ಯ. ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೆಲವು ಡಿ‍ಪ್ಲೊಮಾ ಕೋರ್ಸ್‌ಗಳನ್ನು ಈಗಾಗಲೇ ಕನ್ನಡ ಮಾಧ್ಯಮದಲ್ಲಿ ತಂದಿದ್ದೇವೆ. ಕನ್ನಡ ಸಶಕ್ತ, ಶ್ರೀಮಂತ ಭಾಷೆಯಾಗಿರುವುದರಿಂದ ಕನ್ನಡದಲ್ಲಿ ವಿಜ್ಞಾನ ಬೋಧಿಸುವುದರಿಂದ ಭಾಷೆಗೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ’ ಎಂದು ವಿವರಿಸಿದರು.

ಸ್ವದೇಶಿ ವಿಜ್ಞಾನ ಆಂದೋಳನದ ಕಾರ್ಯಾಧ್ಯಕ್ಷ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್, ‘ಹಿರಿಯರು ನಡೆದ ಜಾಡಿನಲ್ಲಿ ನಾವು ನಡೆಯಬೇಕಿದೆ. ಗೆಲಿಲಿಯೊ ಟೆಲೆಸ್ಕೋಪ್‌ ಕಂಡು ಹುಡುಕಿದ ನಂತರ ನಮಗೆ ನವಗ್ರಹ ಮಂಡಲ ಗೊತ್ತಾಗಿದ್ದಲ್ಲ. ನಮ್ಮ ದೇವಸ್ಥಾನಗಳಲ್ಲಿ ಹಿಂದೆಯೇ ನವಗ್ರಹ ಮಂಡಲ ಇತ್ತು’ ಎಂದು ವಿಶ್ಲೇಷಿಸಿದರು.

‘ಮನುಷ್ಯ ಪ್ರಕೃತಿಯ ಜತೆಗೆ ಹೆಜ್ಜೆ ಹಾಕಿದ್ದನ್ನು ನಾವು ಸಂಸ್ಕೃತಿ ಎಂದು ಕರೆದೆವು. ನಮ್ಮಲ್ಲಿ ಬೇರೆ ಬೇರೆ ಮನೆಗಳಲ್ಲಿ ಬೇರೆ ಬೇರೆ ನಂಬಿಕೆಗಳಿವೆ. ನಮ್ಮನ್ನಾಳಿದ ಪಾಶ್ಚಾತ್ಯರು ಮೂಢನಂಬಿಕೆ ಎಂದು ಕರೆದರು. ನಾವು ವಿಮರ್ಶೆಗೆ ಹೋಗದೇ ಒಪ್ಪಿಕೊಂಡು ಬಿಟ್ಟೆವು. ಲೋಕದ ಬಗ್ಗೆ, ಪ್ರಪಂಚದ ಬಗ್ಗೆ ಪಾಶ್ಚಾತ್ಯರು ಹೇಳಿದ್ದಷ್ಟೇ ವಿಜ್ಞಾನ, ನಾವು ಅದನ್ನು ಮೊದಲೇ ಹೇಳಿದ್ದರೂ ಅದು ಮೌಢ್ಯ ಹೇಗಾಯಿತು’ ಎಂದು ಪ್ರಶ್ನಿಸಿದರು.

ಇದನ್ನೆಲ್ಲ ಇಟ್ಟುಕೊಂಡೇ ‘ಸ್ವದೇಶಿ ವಿಜ್ಞಾನ ಆಂದೋಳನ’ 15 ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿದೆ. ಕನ್ನಡದಲ್ಲಿ ಹೇಳಿದರೆ ಜನಸಾಮಾನ್ಯರಿಗೆ ಅರ್ಥವಾಗುತ್ತದೆ ಎಂಬ ಕಾರಣಕ್ಕೆ ಕನ್ನಡ ಭಾಷೆಯನ್ನು ಆರಿಸಿಕೊಂಡಿದ್ದೇವೆ’ ಎಂದರು.

ಸ್ವದೇಶಿ ವಿಜ್ಞಾನ ಆಂದೋಳನದ ಅಧ್ಯಕ್ಷ, ನಿವೃತ್ತ ಕುಲಪತಿಪ್ರೊ. ಈ.ಟಿ. ಪುಟ್ಟಯ್ಯ, ‘ದೇಶದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಬೇಕಿದ್ದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮೊದಲಾಗಬೇಕು. ವಿಜ್ಞಾನದಲ್ಲಿ ಮುಂದಿರುವ ದೇಶಗಳನ್ನೇ ಅಭಿವೃದ್ಧಿ ಹೊಂದಿದ ದೇಶಗಳೆಂದು ಕರೆಯಲಾಗುತ್ತಿದೆ. ನಾವು ಎಷ್ಟೇ ಸಂಶೋಧನೆಗಳನ್ನು ಮಾಡಿದ್ದರೂ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲೇ ಇದ್ದೇವೆ’ ಎಂದರು.

‘ನಮ್ಮ ಕವಿಗಳು ವೈಜ್ಞಾನಿಕವಾಗಿ ಚಿಂತಿಸಿದ್ದಾರೆ. ಹರಿಹರನ ಪುಷ್ಪ ರಗಳೆಯಲ್ಲಿ 80ಕ್ಕೂ ಅಧಿಕ ಹೂವುಗಳ ಬಗ್ಗೆ ವಿವರಣೆಗಳು ಸಿಗುತ್ತವೆ. ಹೀಗಿರುವಾಗ ವಿಜ್ಞಾನದ ವಿದ್ಯಾರ್ಥಿಗಳು ಇನ್ನಷ್ಟು ವೈಜ್ಞಾನಿಕವಾಗಿ ಇರಬೇಕಲ್ವ’ ಎಂದು ಪ್ರಶ್ನಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಸ್ವದೇಶಿ ವಿಜ್ಞಾನ ಆಂದೋಳನದ ಪ್ರೊ. ಕೆ.ಐ. ವಾಸು, ರಮೇಶ್‌ ಉಪಸ್ಥಿತರಿದ್ದರು. ಬೆಂಗಳೂರು ನಿಮ್ಹಾನ್ಸ್‌ ನಿರ್ದೇಶಕ ಡಾ.ಬಿ.ಎನ್‌. ಗಂಗಾಧರ್‌ ಅವರಿಗೆ ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ ಪ್ರದಾನ ಮಾಡಲಾಯಿತು.

ಕುಲಸಚಿವ ಡಾ. ಬಸವರಾಜ ಬಣಕರ್‌ ಸ್ವಾಗತಿಸಿದರು. ಡೀನ್‌ ಡಾ. ಗಾಯತ್ರಿ ದೇವರಾಜ್‌ ವಂದಿಸಿದರು. ಡಾ. ರಾಜಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

‘ಜ್ಞಾನದ ಕೀಲಿಕೈ ಸಂಸ್ಕೃತ ಅಂದರೆ ಕೋಮುವಾದಿ’

‘ನಮ್ಮ ಜ್ಞಾನ ಭಂಡಾರದ ಕೀಲಿಕೈ ಸಂಸ್ಕೃತ. ಹಾಗಂತ ಹೇಳಿದರೆ ನಮ್ಮನ್ನು ಕೋಮುವಾದಿ ಎಂದು ಪಟ್ಟ ಕಟ್ಟುತ್ತಾರೆ’ಎಂದು ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಹೇಳಿದರು.

‘ಜಗತ್ತು ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸಬೇಕು ಎಂದು ತಿಳಿಯುವ ಮೊದಲೇ ನಮ್ಮಲ್ಲಿ ಜ್ಞಾನ, ವಿಜ್ಞಾನ ಬೆಳೆದಿತ್ತು. ಅಂಥ ಜ್ಞಾನವನ್ನು ಒಳಗೆ ಇಟ್ಟುಕೊಂಡು ನಮ್ಮಲ್ಲಿ ಏನಿಲ್ಲ ಎಂದು ಕೊರಗುತ್ತಿದ್ದೇವೆ’ ಎಂದರು.

ಪ್ರತಿಕ್ರಿಯಿಸಿ (+)