ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದೌರ್ಜನ್ಯದ ಅರಿವು ಅಗತ್ಯ: ಸಿಇಒ

Last Updated 14 ಸೆಪ್ಟೆಂಬರ್ 2021, 7:17 IST
ಅಕ್ಷರ ಗಾತ್ರ

ದಾವಣಗೆರೆ: ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಹಾಗೂ ಮಕ್ಕಳ ನೆರವಿಗೆ ಧಾವಿಸುವ ಸಹಾಯವಾಣಿ, ಸಾಂತ್ವನ ಕೇಂದ್ರ ಸೇರಿದಂತೆ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗ್ಗೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕವಾಗಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಸಾಂತ್ವನ ಯೋಜನೆ, ಸ್ತ್ರೀ ಶಕ್ತಿ ಯೋಜನೆ ಮತ್ತು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ತಡೆಗಟ್ಟುವ ಕಾವಲು ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕೌಟುಂಬಿಕ ಕಲಹ, ವರದಕ್ಷಿಣೆ, ಲೈಂಗಿಕ ಕಿರುಕುಳ, ಮಹಿಳೆಯರ ಮತ್ತು ಮಕ್ಕಳ ಸಾಗಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಾನೂನುಗಳನ್ನು ರೂಪಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ನೆರವಿಗೆ ಸ್ವಯಂ ಸೇವಾ ಸಂಸ್ಥೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ‘ಮಹಿಳೆಯರ ನೆರವಿಗಾಗಿ ಈಗಾಗಲೇ ಕರಪತ್ರ, ಪ್ರದರ್ಶನ ಫಲಕಗಳನ್ನು ಗ್ರಾಮ ಪಂಚಯಿತಿಗಳಲ್ಲಿ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಪ್ರಚಾರ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಸಾಂತ್ವನ ಯೋಜನೆಯಡಿ ಜಗಳೂರು ತಾಲ್ಲೂಕಿನಲ್ಲಿ 24, ಚನ್ನಗಿರಿ 68, ಹರಿಹರ 51, ಹೊನ್ನಾಳಿ 26 ಸೇರಿ ಒಟ್ಟು 169 ಮಹಿಳೆಯರು ಕೌಟುಂಬಿಕ ಸಲಹೆ ಪಡೆದುಕೊಂಡಿದ್ದಾರೆ. ಈ ಪೈಕಿ ಹರಿಹರ ತಾಲ್ಲೂಕಿನ 8 ಮಹಿಳೆಯರಿಗೆ ಆರ್ಥಿಕ ಪರಿಹಾರ ದೊರಕಿದೆ. ಹೊನ್ನಾಳಿಯ ಒಬ್ಬರಿಗೆ ಉದ್ಯೋಗ ಲಭಿಸಿದೆ. ಒಟ್ಟು ಸಾಂತ್ವನ ಯೋಜನೆಯಡಿ ಒಟ್ಟು 178 ಜನರು ವಿವಿಧ ಸೌಲಭ್ಯ ಅಥವಾ ಪರಿಹಾರವನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಂತ್ವನ ಯೋಜನೆಯಡಿ ಜಗಳೂರು ತಾಲ್ಲೂಕಿನಲ್ಲಿ 29 ಪ್ರಕರಣ ದಾಖಲಾಗಿದ್ದು 24 ಪ್ರಕರಣಗಳು ಇತ್ಯರ್ಥಗೊಂಡಿವೆ. ಚನ್ನಗಿರಿಯಲ್ಲಿ 71 ಪ್ರಕರಣ ದಾಖಲಾಗಿದ್ದು 69 ಪ್ರಕರಣಗಳು ಇತ್ಯರ್ಥವಾಗಿವೆ. ಹರಿಹರದಲ್ಲಿ 63 ಪ್ರಕರಣ ದಾಖಲಾಗಿದ್ದು 61 ಇತ್ಯರ್ಥವಾಗಿವೆ. ಹೊನ್ನಾಳಿಯಲ್ಲಿ 29ರಲ್ಲಿ 16 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರು.

ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ 196 ಕಾವಲು ಸಮಿತಿಯನ್ನು ರಚಿಸಲಾಗಿದ್ದು, ಅಕ್ರಮವಾಗಿ ಸಾಗಾಣಿಕೆ ಮಾಡಿರುವ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಎಂದು ತಿಳಿಸಿದರು.

ದೇಶದಲ್ಲಿ ನಿಮಿಷಕ್ಕೊಂದು ಅತ್ಯಚಾರವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮರ್ಯಾದೆಗೆ ಅಂಜಿ ಪ್ರಕರಣ ಬಯಲು ಮಾಡಲು ಮುಂದೆ ಬರುವುದಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಸಂತ್ರಸ್ತರಿಗೆ ಇಷ್ಟ ಇಲ್ಲದೇ ಇದ್ದರೆ ಬೇಡ. ಜಾಗೃತಿ ಮಾತ್ರ ಮೂಡಿಸಿ ಎಂದು ಸಿಇಒ ಸಲಹೆ ನೀಡಿದರು.

ಬಾಡಾ ಕ್ರಾಸ್ ಬಳಿ ಲಿಂಗತ್ವ ಅಲ್ಪಸಂಖ್ಯಾತರ ಹಾವಳಿ ಹೆಚ್ಚಾಗಿದ್ದು, ಸುತ್ತಮುತ್ತ ಶಾಲಾ-ಕಾಲೇಜುಗಳು ಹೆಚ್ಚಾಗುವುದರಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿದೆ. ಪೊಲೀಸ್ ವಾಹನಗಳು ಸಮೀಪಿಸುತ್ತಿದ್ದಂತೆ ತಪ್ಪಿಸಿಕೊಳ್ಳುತ್ತಾರೆ. ಬೀದಿ ದೀಪ ಅಳವಡಿಸಿದರೆ ಅದನ್ನು ಒಡೆದು ಹಾಕುತ್ತಾರೆ. ಬೆಂಗಳೂರಿನಿಂದ ಬಂದವರೇ ಅಲ್ಲಿ ಹೆಚ್ಚಿದ್ದಾರೆ ಎಂದು ವಿಜಯ್‍ಕುಮಾರ್ ಮಾಹಿತಿ ನೀಡಿದರು.

ಅಲೆಮಾರಿ ಸಮುದಾಯದಲ್ಲಿ ಜನ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದು ಇವರ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ಕೋವಿಡ್ ಪರಿಣಾಮದಿಂದ ಶಾಲೆಗಳಿಲ್ಲದೇ ಯಾರು ಭಿಕ್ಷಾಟನೆ ಮಾಡುತ್ತಿದ್ದಾರೆ, ಯಾರು ಬಾಲ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಖಚಿತ ಮಾಹಿತಿ ದೊರೆಯುತ್ತಿಲ್ಲ ಎಂದರು.

ಡಿಎಚ್‍ಒ ಡಾ.ನಾಗರಾಜ್, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಸುಂಕದ್, ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿ ಕೊಟ್ರೇಶ್ ಟಿ.ಎಂ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT