ಶನಿವಾರ, ಸೆಪ್ಟೆಂಬರ್ 24, 2022
24 °C

ಈಗ ಬೇಕಿರುವುದು ವಿಚಾರ ಕ್ರಾಂತಿ: ಬಂಕಾಪುರದ ಚನ್ನಬಸಪ್ಪ

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಅದು 1972ನೇ ಇಸವಿ. 25ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸಂದರ್ಭ ಜನರಲ್ಲಿ ದೇಶಾಭಿಮಾನವಿತ್ತು. ಜನನಾಯಕರಲ್ಲಿ ಸೇವಾ ಮನೋಭಾವ ಇತ್ತು. ಸಾರ್ವಜನಿಕರ ಕೆಲಸಗಳು ಆಗುತ್ತಿದ್ದವು. 1997ರಲ್ಲಿ ಆಚರಿಸಲಾದ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಸಂದರ್ಭ ಇದು ಕೊಂಚ ಕಡಿಮೆಯಾಯಿತು. ಈಗ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಜನರಲ್ಲಿ ದೇಶಾಭಿಮಾನವೇ ಇಲ್ಲದಂತಾಗಿದೆ’ ಎಂದು ಅಭಿಪ್ರಾಯಪಟ್ಟರು ಕನ್ನಡಪರ ಹೋರಾಟಗಾರರಾದ ಬಂಕಾಪುರದ ಚನ್ನಬಸಪ್ಪ.

1951ರಲ್ಲಿ ಜನಿಸಿರುವ ಅವರು ಸ್ವಾತಂತ್ರ್ಯದ 25 ಹಾಗೂ 50ನೇ ವರ್ಷದ ಸಂಭ್ರಮವನ್ನು ಕಂಡಿದ್ದಾರೆ, ಆಚರಿಸಿದ್ದಾರೆ. 75ನೇ ವರ್ಷದ ಆಚರಣೆಯನ್ನು ನೋಡುತ್ತಿರುವ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

‘ಅಂದಿನ ಹಾಗೂ ಇಂದಿನ ದಿನಗಳಲ್ಲಿ ಅಜಗಜಾಂತರವಿದೆ. 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರೆಲ್ಲರೂ ಉತ್ಸಾಹದಿಂದ ತೆರಳುತ್ತಿದ್ದರು. ಈಗ ಶಾಲೆ- ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸರ್ಕಾರಿ ಅಧಿಕಾರಿಗಳು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಅದೂ ಅವರಿಗೆ ಕಡ್ಡಾಯ ಆಗಿರುವುದರಿಂದ ಮಾತ್ರ. ಇಂದಿನ ಆಚರಣೆಯು ಕಾಟಾಚಾರಕ್ಕಷ್ಟೇ ಎಂಬಂತಾಗಿದೆ. ಹಿಂದೆ ಸ್ವಾತಂತ್ರ್ಯೋತ್ಸವದಂದು ಸಿಹಿ ವಿತರಣೆ ಇರುತ್ತಿತ್ತು. ಈಗ ಕೆಲವೆಡೆ ಅದೂ ಇಲ್ಲದಂತಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಇಂದಿನ ಪೀಳಿಗೆಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ನಿಜ ಅರ್ಥವೇ ಗೊತ್ತಿಲ್ಲದಂತಿದೆ. ಮಾನವ ಹಕ್ಕುಗಳ ಬಗ್ಗೆ ಮಾತನಾಡುವವರೂ, ಬುದ್ಧಿಜೀವಿಗಳು ಎಂದೆನಿಸಿಕೊಂಡವರೂ ಮತದಾನ ಮಾಡಲೂ ಹೋಗುತ್ತಿಲ್ಲ. ಆದರೆ, ಕೊಳೆಗೇರಿಯಲ್ಲಿರುವ ಜನ ತಪ್ಪದೇ ಮತದಾನದ ತಮ್ಮ ಹಕ್ಕನ್ನು ಚಲಾಯಿಸುತ್ತಾರೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮತದಾನವನ್ನು ಕಡ್ಡಾಯ ಮಾಡಬೇಕು. ಶೇ 100ರಷ್ಟು ಮತದಾನ ದಾಖಲಾದಾಗ ಮಾತ್ರ ನಿಜವಾದ ಜನಾಭಿಪ್ರಾಯ ಹೊರಹೊಮ್ಮುತ್ತದೆ. ‘ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ...’ ಎಂಬ ಹಾಡು ಇಂದಿನ ಪರಿಸ್ಥಿತಿಗೆ ಸರಿಯಾಗಿ ಹೊಂದುತ್ತದೆ’ ಎಂದು ಅವರು ವಿವರಿಸಿದರು.

‘ಇಂದಿನ ಸಾಮಾಜಿಕ ಪರಿಸ್ಥಿತಿ ಹದಗೆಡಲು ಪ್ರಮುಖ ಕಾರಣರು ರಾಜಕಾರಣಿಗಳು. ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಕೆಲಸ ಮಾಡುವ  ರಾಜಕಾರಣಿಗಳಲ್ಲಿ ನೈಜ ಕಾಳಜಿ ಎಂಬುದು ಗೋಚರಿಸುತ್ತಿಲ್ಲ. ಜನರಲ್ಲಿ ಹೋರಾಟದ ಮನೋಭಾವವೂ ಕಾಣುತ್ತಿಲ್ಲ. ದೊಡ್ಡ ಕುಟುಂಬಗಳು ಒಡೆದು ಚಿಕ್ಕ ಕುಟುಂಬಗಳ ರಚನೆಯಿಂದಾಗಿ ಚಳವಳಿ, ಹೋರಾಟಕ್ಕೆ ಹೋಗಲೂ ಜನ ಮುಂದಾಗುವುದಿಲ್ಲ. ವೈಯಕ್ತಿಕ ಜೀವನದ ಬಗ್ಗೆ ಗಮನ ಹರಿಸುವುದೇ ಆಗಿದೆ. ದೇಶದಲ್ಲಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಎಲ್ಲವೂ ಆಗಿವೆ. ನಿಜವಾಗಿ ಆಗಬೇಕಾಗಿರುವುದು ವಿಚಾರ ಕ್ರಾಂತಿ’ ಎಂದು ಹೇಳಿದರು.

‘ಲಾಲ್ ಬಹಾದ್ದೂರ್ ಶಾಸ್ತ್ರಿ, ಅಟಲ್‌ ಬಿಹಾರಿ ವಾಜಪೇಯಿ, ಎಸ್‌.ನಿಜಲಿಂಗಪ್ಪ, ಜೆ.ಎಚ್. ಪಟೇಲ್ ಸೇರಿದಂತೆ ಕೆಲವರಿಗೆ ಜನಪರ ಕಾಳಜಿ ಇತ್ತು. ಉಳಿದಂತೆ ಹಲವರು ತಮ್ಮ ಸ್ವಾರ್ಥಕ್ಕಾಗಿಯೇ ಕೆಲಸ ಮಾಡುತ್ತಾರೆ. ಕರಪತ್ರ ಹಂಚುವ ಮಾದರಿಯಲ್ಲೇ ನೋಟುಗಳನ್ನು ಹಂಚುವುದನ್ನು ನೋಡಿದರೆ ಬೇಸರವಾಗುತ್ತದೆ. ಇಂಥ ಸಂದಿಗ್ಧತೆಯ ಕಾಲಘಟ್ಟದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಪಠ್ಯಗಳಲ್ಲಿ ದೇಶಾಭಿಮಾನ ಮೂಡಿಸುವ ಬರಹಗಳು ಇರುವಂತೆ ನೋಡಿಕೊಳ್ಳಬೇಕಿದೆ. ಆಗಲೇ ಜನರು ಅದರಲ್ಲೂ ಯುವಪೀಳಿಗೆಯವರು ಸುಧಾರಿಸುತ್ತಾರೆ. ಜನ ಸುಧಾರಿಸಿದರೆ ಸಹಜವಾಗಿಯೇ ಜನನಾಯಕರೂ ಬದಲಾಗಬಹುದು’ ಎಂದು ಅವರು ಸಲಹೆ ನೀಡಿದರು.

‘ಹರ್ ಘರ್ ತಿರಂಗಾ’ ತಂದ ಉತ್ಸಾಹ
ಹರ್ ಘರ್ ತಿರಂಗಾ ಉತ್ತಮ ಕಾರ್ಯಕ್ರಮ. ಮನೆ–ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿದರೆ ಜನರಲ್ಲಿ ಉತ್ಸಾಹ, ದೇಶಾಭಿಮಾನ ಮೂಡುತ್ತದೆ. ಪಠ್ಯಪುಸ್ತಕಗಳಲ್ಲೂ ದೇಶಾಭಿಮಾನ ಇರುವಂಥ ಪಾಠಗಳು ಇರಲಿ. ಆಗಲೇ ಮಕ್ಕಳಿಗೆ ಬಾಲ್ಯದಿಂದಲೇ ದೇಶದ ಬಗ್ಗೆ ಪ್ರೀತಿ ಮೂಡಲು ಸಾಧ್ಯ.
-–ಬಂಕಾಪುರದ ಚನ್ನಬಸಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು