ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆಗಳು; ಗುಂಡಿಗಳ ಕಾರುಬಾರು

ಪ್ರಸ್ತವರ್ಷ ಸುರಿದ ಭಾರಿ ಮಳೆ; ಶೋಚನಿಯ ಸ್ಥಿತಿಗೆ ತಲುಪಿದ ಗ್ರಾಮೀಣ ರಸ್ತೆಗಳ ಸ್ಥಿತಿ
Last Updated 21 ನವೆಂಬರ್ 2022, 5:30 IST
ಅಕ್ಷರ ಗಾತ್ರ

ದಾವಣಗೆರೆ: ನಗರ ಪ್ರದೇಶ ದಾಟಿಕೊಂಡು ಗ್ರಾಮೀಣ ಭಾಗದತ್ತ ಮುಖ ಮಾಡಿದರೆ ಮೊದಲು ಆಹ್ವಾನಿಸುವುದು ಗುಂಡಿ ಬಿದ್ದ ರಸ್ತೆಗಳು. ಅಲ್ಲಲ್ಲಿ ಚೂರು ಪಾರು ಡಾಂಬರ್‌ ಮೆತ್ತಿಕೊಂಡ ಕೊರಕಲು ಬಿದ್ದ ಮಣ್ಣಿನ ಮಾರ್ಗಗಳು. ಆ ರಸ್ತೆಯಲ್ಲೇ ಪ್ರಯಾಸಪಟ್ಟು ಸಾಗಬೇಕಾದ ಅನಿವಾರ್ಯತೆ ಗ್ರಾಮೀಣ ಜನರದ್ದು.

ಪ್ರಸಕ್ತ ವರ್ಷ ವಾಡಿಕೆಗಿಂತಲೂ ಶೇ 77ರಷ್ಟು ಹೆಚ್ಚು ಮಳೆ ಬಿದ್ದ ಪರಿಣಾಮ ಗ್ರಾಮೀಣ ಭಾಗದ ರಸ್ತೆಗಳು ಬಹುತೇಕ ಹಾಳಾಗಿವೆ. ಅವುಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಾದ ಸವಾಲು ಸರ್ಕಾರಕ್ಕಿದೆ. ಜಿಲ್ಲಾ ಕೇಂದ್ರ ದಾವಣಗೆರೆಯ ಪ್ರಮಖ ರಸ್ತೆಗಳೇ ಗುಂಡಿ ಬಿದ್ದು ನಾಗರಿಕರ ಓಡಾಟ ದುಸ್ತರವಾಗಿದೆ. ಇನ್ನು ಗ್ರಾಮೀಣ ರಸ್ತೆಗಳ ಸ್ಥಿತಿ ಅದಕ್ಕಿಂತಲೂ ಶೋಚನೀಯವಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮೇ ತಿಂಗಳಿಂದ ನವೆಂಬರ್‌ವರೆಗೆ ಮಳೆ ಸುರಿದ ಪರಿಣಾಮ ಒಟ್ಟು 355 ಕಿ.ಮೀ. ಗ್ರಾಮೀಣ ರಸ್ತೆಗಳಿಗೆ ಹಾನಿಯಾಗಿದೆ. ಅದರಲ್ಲಿ ಸಿಂಹಪಾಲು ದಾವಣಗೆರೆ ಗ್ರಾಮಾಂತರ ವ್ಯಾಪ್ತಿಯದ್ದು. ಈ ಭಾಗದಲ್ಲೇ 130 ಕಿ.ಮೀ.ನಷ್ಟು ರಸ್ತೆ ಹದಗೆಟ್ಟಿದೆ. ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆಗಳು ಬಹಳಷ್ಟು ಹಾನಿಗೊಳಗಾಗಿವೆ. ಅಲ್ಲಲ್ಲಿ ರಸ್ತೆಗಳಿಗೆ ಕಿರು ಸೇತುವೆಗಳ ಬಳಿ ಕೊರಕಲು ಬಿದ್ದು ಹಾಳಾಗಿದ್ದು, ಬಹುತೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಮೀಕ್ಷೆ ನಡೆಸಿದ್ದು, ಈ ರಸ್ತೆಗಳ ದುರಸ್ತಿಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌) ನಿಯಮದ ಪ್ರಕಾರ ₹ 2.13 ಕೋಟಿ ಅನುದಾನಕ್ಕಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದೆ. ಕೆಲವು ಕಡೆ ದುರಸ್ತಿ ಕಾರ್ಯ ನಡೆಯುತ್ತಿದೆ.

ಪ್ರಸಕ್ತ ವರ್ಷ ಭಾರಿ ಮಳೆ ಸುರಿದ ಪರಿಣಾಮ ಹಿಂದಿನ ವರ್ಷಕ್ಕಿಂತಲೂ ಹೆಚ್ಚು ರಸ್ತೆಗಳು ಹದಗೆಟ್ಟಿವೆ. ಅಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ವ್ಯವಸ್ಥೆ ಇರದ
ಕಾರಣ ಬಹುತೇಕ ಗ್ರಾಮೀಣ ರಸ್ತೆಗಳು ಕೊರಕಲು ಬೀಳುತ್ತವೆ. ರಸ್ತೆ ಅಕ್ಕಪಕ್ಕ ಇರುವ ಕುರುಚಲು ಗಿಡಗಳು, ಜಾಲಿ ಗಿಡಗಳು ಹರಿಯುವ ನೀರನ್ನು ತಡೆಯುತ್ತವೆ. ಆಗ ಸಹಜವಾಗಿ ಕೊರಕಲು, ಗುಂಡಿಗಳ ಪ್ರಮಾಣ ಹೆಚ್ಚಾಗುತ್ತದೆ. ಕೆಲವೆಡೆ ಚರಂಡಿಗಳು ಇದ್ದರೂ ಅವುಗಳ ಸರಿಯಾದ ನಿರ್ವಹಣೆ ಇಲ್ಲದ ಕಾರಣ ರಸ್ತೆ ಮೇಲೆ ಮಳೆ ನೀರು ಹರಿದು ಮಾರ್ಗಗಳು ಹಾಳಾಗುತ್ತವೆ.

‘ಮಳೆಗಾಲದ ಆರಂಭಕ್ಕೂ ಮುನ್ನ ಹಾಗೂ ಮಳೆಗಾಲ ಮುಗಿದ ಬಳಿಕ ರಸ್ತೆ ಇಕ್ಕೆಲಗಳಲ್ಲಿ ಇರುವ ಗಿಡಗಳನ್ನು ತೆರವುಗೊಳಿಸಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಹೀಗೆ ಮಾಡಿದರೆ ಗ್ರಾಮೀಣ ರಸ್ತೆ ಹಾಳಾಗುವ ಪ್ರಮಾಣವನ್ನು ತಗ್ಗಿಸಬಹುದು’ ಎಂಬ ಸಲಹೆ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌ ಅವರದ್ದು.

ಬಿಡುಗಡೆಯಾದ ಹಣಪರ್ಸಂಟೇಜ್‌ಗೆ ಬಲಿ

ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಿದ್ದು, ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಬಹುತೇಕ ರಸ್ತೆಗಳಲ್ಲಿ ವಾಹನ ಸಂಚರಿಸದಂತಹ ಸ್ಥಿತಿ ಇದೆ. ಶೀಘ್ರ ಈ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ದುರಸ್ತಿಗೆ ಬಿಡುಗಡೆಯಾದ ಅನುದಾನಕ್ಕೆ ಪರ್ಸಂಟೇಜ್‌ ಹಾವಳಿ ಹೆಚ್ಚಾಗಿದೆ. ಒಂದು ಕಿ.ಮೀ ರಸ್ತೆ ನಿರ್ಮಿಸಲು ಒಂದು ಲಕ್ಷ ಬಿಡುಗಡೆಯಾಗಿದೆ ಎಂದರೆ ಅದರಲ್ಲಿ ಶೇ 60ರಷ್ಟು ಲಂಚಕ್ಕೆ ಹಣ ಕೊಡಬೇಕು. ಉಳಿದದ್ದು ಶೇ 40 ಮಾತ್ರ. ಈ ಹಣದಲ್ಲಿ ಮೇಲ್ಮೈಗೆ ತೇಪೆ ಹಾಕಿ ರಸ್ತೆ ದುರಸ್ತಿ ಮಾಡಲಾಗುತ್ತದೆ. ಅದು ಮೂರ್ನಾಲ್ಕು ತಿಂಗಳೂ ಬಾಳಿಕೆ ಬರುವುದಿಲ್ಲ. ಮುಂದಿನ ಮಳೆಗಾಲಕ್ಕೆ ಮತ್ತೆ ರಸ್ತೆ ಕಿತ್ತು ಹೋಗುತ್ತದೆ. ಪ್ರತಿ ವರ್ಷ ಇದು ಪುನರಾವರ್ತನೆಯಾಗುತ್ತದೆ. ಈ ಕ್ರಮ ಸರಿಯಲ್ಲ. ಶಾಶ್ವತ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.

– ಬಲ್ಲೂರು ರವಿಕುಮಾರ್‌,ಕಾರ್ಯದರ್ಶಿ, ರಾಜ್ಯ ರೈತ ಸಂಘ

ಗ್ರಾಮೀಣ ರಸ್ತೆಗಳು ಓಡಾಡಲು; ವಾಹನ ಸಂಚಾರಕ್ಕಲ್ಲ

ಇನಾಯತ್‌ ಉಲ್ಲಾ ಟಿ.

ಹರಿಹರ: ಅತಿಯಾದ ಮಳೆ ಹಾಗೂ ಕಳಪೆ ಕಾಮಗಾರಿಯ ಪರಿಣಾಮ ತಾಲ್ಲೂಕಿನ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಸಂಚಾರ ಯೋಗ್ಯವಾಗಿಲ್ಲ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ತಾಲ್ಲೂಕಿನಲ್ಲಿ 160 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ ಇದೆ. ಈ ಪೈಕಿ 76 ಕಿ.ಮೀ. ರಸ್ತೆ ಹಾನಿಗೊಳಗಾಗಿದೆ. ಈ ರಸ್ತೆಗಳ ದುರಸ್ತಿ ಹಾಗೂ ಮರು ಡಾಂಬರೀಕರಣಕ್ಕೆ ₹ 1.39 ಕೋಟಿ ಪ್ರಸ್ತಾವವನ್ನು ಇಲಾಖೆಯಿಂದ ಸಲ್ಲಿಸಲಾಗಿದೆ.

ಇನ್ನು ಪಂಚಾಯತ್ ರಾಜ್ ಎಂಜಿನಿಯಂರಿಂಗ್ ಇಲಾಖೆ ವ್ಯಾಪ್ತಿಯ 16 ಕಿ.ಮೀ. ರಸ್ತೆ ಹಾನಿಗೊಳಗಾಗಿದೆ. ಇದರ ದುರಸ್ತಿಗೆ ₹ 76.50 ಲಕ್ಷ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಬೆಳ್ಳೂಡಿ ಸೇತುವೆ ಬಂದ್: ನಗರದಿಂದ 7 ಕಿ.ಮೀ. ಅಂತರದಲ್ಲಿರುವ ಬೆಳ್ಳೂಡಿ ಸಮೀಪ ಸೂಳೆಕೆರೆ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಕೂಡು ರಸ್ತೆ ಈಚೆಗೆ ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿದೆ. ಪರಿಣಾಮ ಬೆಳ್ಳೂಡಿ ಗ್ರಾಮದ ಇನ್ನೊಂದು ಭಾಗದಲ್ಲಿರುವ ರಾಮತೀರ್ಥ, ನಾಗೇನಹಳ್ಳಿ, ಭಾನುವಳ್ಳಿ, ಹೊಸಹಳ್ಳಿ, ಕಮಲಾಪುರ, ಹೊಳೆಸಿರಿಗೆರೆ ಗ್ರಾಮಗಳ ಜೊತೆ ಸಂಪರ್ಕ ತಪ್ಪಿದೆ.

ಈ ಗ್ರಾಮಗಳ ಜನ ಹರಿಹರಕ್ಕೆ ಬಂದು ಹೋಗಲು 10 ಕಿ.ಮೀ. ಸುತ್ತಿ, ಹರಗನಹಳ್ಳಿ ಅಥವಾ ಎಕ್ಕೆಗೊಂದಿ ಮಾರ್ಗ ಬಳಸಬೇಕಿದೆ.

ಕೊಂಡಜ್ಜಿ ಸೇತುವೆ ಸ್ಥಗಿತ: ಇನ್ನು ತಾಲ್ಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ಸೇತುವೆ ಆಗಿರುವ ಕೊಂಡಜ್ಜಿ– ಒಡೆಯರ ಬಸಾಪುರ ನಡುವಿನ ಹಳ್ಳದ ಸೇತುವೆಗೆ ಜೋಡಣೆಯಾದ ರಸ್ತೆಯೂ ಕೊಚ್ಚಿ ಹೋಗಿದೆ. ಇದರಿಂದ ಸುತ್ತಲಿನ ನಾಲ್ಕಾರು ಗ್ರಾಮಗಳ ಸಂಣಪರ್ಕ ಕಡಿತವಾಗಿದೆ. ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ಏಳೆಂಟು ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕಿದೆ.

ಉಳಿದಂತೆ ಕರ್ಲಹಳ್ಳಿ–ಕ್ಯಾಂಪ್, ಸಾರಥಿ–ಗಂಗನರಸಿ, ಲಕ್ಕಶೆಟ್ಟಿಹಳ್ಳಿ–ಕ್ಯಾಂಪ್, ಮಲೆಬೆನ್ನೂರು ಚಾನಲ್ ರಸ್ತೆಯಿಂದ–ಮುದ್ದಪ್ಪನ ಕೆರೆ, ಕೊಪ್ಪ–ಹೊಳೆಹೊನ್ನೂರು ರಸ್ತೆ, ಹಳೆ ಹರ್ಲಾಪುರ– ಹೆದ್ದಾರಿವರೆಗಿನ ರಸ್ತೆ, ವಾಸನ– ಹೊಸಪಾಳ್ಯ, ಹೊಳೆಸಿರಿಗೆರೆ– ಜಿಗಳಿ ರಸ್ತೆ ಸೇರಿದಂತೆ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ಬಹುತೇಕ ಪ್ರಮುಖ ರಸ್ತೆಗಳು ಈವರೆಗೂ ಡಾಂಬರೀಕರಣ ಕಂಡಿಲ್ಲ.

ಮಳೆಗೆ ಹಾಳಾದ ರಸ್ತೆಗಳು

ಎನ್‌.ಕೆ. ಆಂಜನೇಯ

ಹೊನ್ನಾಳಿ: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ.

ತಾಲ್ಲೂಕಿನ ಉಜ್ಜಿನಿಪುರದಿಂದ ವಿಜಯಪುರ, ಬೆನಕನಹಳ್ಳಿ, ಹುಣಸೇಹಳ್ಳಿ ಕ್ರಾಸ್‌ವರೆಗೆ 4 ಕಿ.ಮೀ.ವರೆಗಿನ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಅದೇ ರೀತಿ ಕುಳಗಟ್ಟೆಯಿಂದ ಚನ್ನೇನಹಳ್ಳಿ ಭಾಗದ ಜಿಲ್ಲಾ ಮುಖ್ಯರಸ್ತೆ, ಕಮ್ಮಾರಗಟ್ಟೆಯಿಂದ ಆಂಜನೇಯಪುರ, ಘಂಟ್ಯಾಪುರ, ತರಗನಹಳ್ಳಿ, ಅರಕೆರೆ ಎ.ಕೆ. ಕಾಲೊನಿವರೆಗಿನ 9 ಕಿ.ಮೀ. ಉದ್ದದ ರಸ್ತೆ ಹಾಳಾಗಿದೆ.

ಹೊಸಹಳ್ಳಿ, ಹುರುಳೇಹಳ್ಳಿ, ಭಾಗೇವಾಡಿ, ಲಿಂಗಾಪುರ, ಚನ್ನಮುಂಭಾಪುರ, ಹುಣಸಘಟ್ಟ, ತ್ಯಾಗದಕಟ್ಟೆವರೆಗಿನ ಸುಮಾರು 15 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಗಳು ಹಾಳಾಗಿವೆ ಎಂದು ಎಂದು ಲೋಕೋಪಯೋಗಿ ಎಂಜಿನಿಯರ್ ಶಿವರಾಂ ಮಾಹಿತಿ ನೀಡಿದರು.

ತಾಲ್ಲೂಕಿನ ಹನುಮಸಾಗರ ರಸ್ತೆ, ಬಳ್ಳೇಶ್ವರ ಮಾರ್ಗದ ಕಾಂಕ್ರೀಟ್ ರಸ್ತೆಯ ಸೈಡ್‌ವಾಲ್ ಕಿತ್ತು ಹೋಗಿದ್ದು, ಅಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಿದೆ ಎಂದು ಎಂಜಿನಿಯರ್ ಶ್ರೀಧರ್ ಮಾಹಿತಿ ನೀಡಿದರು.

ಗೊಲ್ಲರಹಳ್ಳಿ, ಕೋಣನತಲೆ, ಹೊಸದೇವರಹೊನ್ನಾಳಿ, ಹಳೇದೇವರಹೊನ್ನಾಳಿ ಭಾಗದ 1 ಕಿ.ಮೀ. ಉದ್ದದ ರಸ್ತೆ ಕೂಡಾ ಹಾಳಾಗಿದೆ. ದೇವನಾಯಕನಹಳ್ಳಿ ಮುಸೇನಾಳ ರಸ್ತೆ, ನಲ್ಲೂರು ಸಾಸ್ವೇಹಳ್ಳಿ ಭಾಗದ ಜಿಲ್ಲಾ ಮುಖ್ಯ ರಸ್ತೆ ಹಾಳಾಗಿದೆ. ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಚನ್ನಗಿರಿ: ಸಣ್ಣ ಸೇತುವೆಗಳಿಗೆ ಹಾನಿ

ಎಚ್.ವಿ. ನಟರಾಜ್

ಚನ್ನಗಿರಿ: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆಯಿಂದಾಗಿ ತಾಲ್ಲೂಕಿನ ಹಲವಾರು ಪ್ರಮುಖ ರಸ್ತೆಗಳು ಹದಗೆಟ್ಟಿವೆ.

ವಿವಿಧ ಗ್ರಾಮಗಳಲ್ಲಿ ಒಟ್ಟು 2 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ಜತೆಗೆ 5ಕ್ಕಿಂತ ಹೆಚ್ಚು ಸಣ್ಣ ಸೇತುವೆಗಳಿಗೆ ಹಾನಿಯಾಗಿದೆ.

ನೀತಿಗೆರೆ ಹಾಗೂ ಯರಗಟ್ಟಿಹಳ್ಳಿ ಗ್ರಾಮದ ಬಳಿ 1.40 ಕಿ.ಮೀ. ರಸ್ತೆ ಹಾಳಾಗಿದೆ. ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2.5 ಕಿ.ಮೀ. ರಸ್ತೆ ಹಾಳಾಗಿದ್ದು, ಪ್ರಕೃತಿ ವಿಕೋಪ ಪರಿಹಾರ ಯೋಜನೆ ಅಡಿ ರಸ್ತೆಗಳನ್ನು ನಿರ್ಮಿಸಲು ₹ 2.45 ಕೋಟಿ ಅನುದಾನ ಬಿಡುಗಡೆಯಾಗಿದೆ.

‘ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದೆ. ಹದಿನೈದು– ಇಪ್ಪತ್ತು ದಿನಗಳೊಳಗೆ ಕಾಮಗಾರಿ ಆರಂಭಿಸಲಾಗುವುದು. ಹಾಗೆಯೇ ಮಲ್ಪೆ– ಮೊಳಕಾಲ್ಮೂರು ರಾಜ್ಯ ಹೆದ್ದಾರಿ– 65 ಹಾಗೂ ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿ– 76ರಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದೆ. ಉಬ್ರಾಣಿ ಹೋಬಳಿಯ ನೆಲ್ಲಿಹಂಕಲು–ಹನುಮಲಾಪುರ– ಶಂಕರಿಪುರ ರಸ್ತೆ ಕೂಡಾ ಹಾಳಾಗಿದ್ದು, ಈಗಾಗಲೇ ₹ 4.70 ಕೋಟಿ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಆರಂಭಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್ ತಿಳಿಸಿದ್ದಾರೆ.

ರಸ್ತೆ ಗುಂಡಿಗೆ ಬಲಿಯಾದ ಜೀವಗಳು

ಡಿ.ಶ್ರೀನಿವಾಸ್

ಜಗಳೂರು: ಸರ್ಕಾರದ ನಿರ್ವಹಣಾ ವೈಫಲ್ಯ ಹಾಗೂ ಅಧಿಕ ಮಳೆಯ ಪರಿಣಾಮ ತಾಲ್ಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ವಾಹನ ಸವಾರರಿಗೆ ಪ್ರಾಣಾಂತಿಕವಾಗಿ ಪರಿಣಮಿಸಿವೆ.

ವರ್ಷಗಳೇ ಉರುಳಿದರೂ ಡಾಂಬರೀಕರಣ ಇಲ್ಲದೆ ರಸ್ತೆಗಳಲ್ಲಿ ಹೆಜ್ಜೆಹೆಜ್ಜೆಗೆ ಅಸಂಖ್ಯಾತ ಗುಂಡಿಗಳು ನಿರ್ಮಾಣವಾಗಿವೆ. ಸಣ್ಣ ಮಳೆಗೂ ಗುಂಡಿಗಳು ನೀರಿನಿಂದ ತುಂಬಿಕೊಂಡು ರಸ್ತೆಯಲ್ಲಿ ಗುಂಡಿಗಳೋ ಅಥವಾ ಗುಂಡಿಗಳಲ್ಲಿ ರಸ್ತೆಯೋ ಎನ್ನುವಂತಹ
ಸ್ಥಿತಿ ಇದೆ.

ತಾಲ್ಲೂಕು ಕೇಂದ್ರವಾದ ಪಟ್ಟಣದ ಚಳ್ಳಕೆರೆ ರಸ್ತೆ, ದಾವಣಗೆರೆ ರಸ್ತೆ ಸೇರಿದಂತೆ ಒಳಭಾಗದ ಬಹುತೇಕ ರಸ್ತೆಗಳು ಕಿತ್ತುಹೋಗಿದ್ದು ತೀವ್ರ ಸಮಸ್ಯೆಯಾಗಿದೆ.

ಭರಮಸಮುದ್ರ ಗ್ರಾಮದ ಸಮೀಪ ಚಳ್ಳಕೆರೆ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಸಮಯದಲ್ಲಿ ರಸ್ತೆಯಲ್ಲಿರುವ
ಗುಂಡಿಗಳನ್ನು ತಪ್ಪಿಸಲು ಹೋಗಿ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿತ್ತು.
ಅಪಘಾತದಲ್ಲಿ ಮುಸ್ಟೂರು ಗ್ರಾಮದಪಶು ಆಸ್ಪತ್ರೆ ಸಿಬ್ಬಂದಿ ಹೊಸಕೆರೆ ಗ್ರಾಮದಹರೀಶ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರೆ ಎದುರು ಬೈಕ್ ಸವಾರನ ಎರಡೂ ಕಾಲು ಮುರಿದುಹೋಗಿವೆ.

ಇದೇ ರೀತಿ ಹಲವು ಅಪಘಾತಗಳಾಗಿವೆ. ಸಿದ್ದಮ್ಮನಹಳ್ಳಿ ಗ್ರಾಮದ ಶಿವರಾಜ್, ಕಸವನಹಳ್ಳಿ ಗ್ರಾಮದ
ಬೈಕ್ ಸವಾರರು ಗುಂಡಿ ತಪ್ಪಿಸಲು ಹೋಗಿ ನಾಲ್ಕು ದಿನದಹಿಂದೆ ಮುಖಾಮುಖಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇಬ್ಬರೂ ದಾವಣಗೆರೆಯ ಆಸ್ಪತ್ರೆಯಲ್ಲಿಕೋಮಾ ಸ್ಥಿತಿಯಲ್ಲಿದ್ದಾರೆ.ಮತ್ತಷ್ಟು ಅಮಾಯಕ ಜೀವಗಳು ಬಲಿಯಾಗುವ ಮುನ್ನ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ವಿವಿಧ ಹಳ್ಳಿಗಳನ್ನು ಸಂಪರ್ಕಿಸುವಅಣಬೂರು ರಸ್ತೆ, ಸೊಕ್ಕೆ ರಸ್ತೆ, ಪಲ್ಲಾಗಟ್ಟೆ ರಸ್ತೆ,ಹಿರೇಮಲ್ಲನಹೊಳೆ, ಮಲ್ಲಾಪುರ, ಗುರುಸಿದ್ದಾಪುರ ರಸ್ತೆಗಳು ಹಾಳಾಗಿದ್ದು, ಹೊಂಡಗಳು ಬಲಿಗಾಗಿ ಬಾಯ್ತೆರೆದು ಕುಳಿತಿವೆ.

ಗ್ರಾಮೀಣ ರಸ್ತೆಗಳ ದುರಸ್ತಿಗೆ ಅನುದಾನ ಕೋರಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಾಗಲೇ ಹಲವೆಡೆ ರಸ್ತೆಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಮಳೆ ಇಲ್ಲದ್ದರಿಂದ ನವೆಂಬರ್‌ ಮೊದಲ ವಾರದಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.‌

–ಡಾ.ಎ.ಚನ್ನಪ್ಪ, ಜಿಲ್ಲಾ ಪಂಚಾಯಿತಿ ಸಿಇಒ

ಗ್ರಾಮೀಣ ರಸ್ತೆಗಳ ದುರಸ್ತಿ ಕಾರ್ಯವನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ನಿರ್ವಹಿಸಿದರೆ ಇತರ ಇಲಾಖೆಗಳ ಹೊರೆ ಕಡಿಯಾಗುತ್ತದೆ. ಜತೆಗೆ ತ್ವರಿತ ರಸ್ತೆ ದುರಸ್ತಿಗೂ ಸಹಕಾರಿಯಾಗುತ್ತದೆ. ಅಪಘಾತ ವಲಯಗಳಲ್ಲಿ ನಾಮಫಲಕ ಹಾಕಬೇಕು. ––ಎಂ.ಜಿ.ಶ್ರೀಕಾಂತ್‌, ಸಾಮಾಜಿಕ ಕಾರ್ಯಕರ್ತ, ದಾವಣಗೆರೆ

ಗ್ರಾಮೀಣ ಭಾಗದ ರಸ್ತೆಗಳ ನಿರ್ಮಾಣ ಗುತ್ತಿಗೆ ಬಹುತೇಕ ಪ್ರಭಾವಿ ಜನಪ್ರತಿನಿಧಿಗಳ ಹಿಂಬಾಲಕರಿಗೆ ದೊರೆಯುತ್ತಿರುವುದರಿಂದ ಸಹಜವಾಗಿ ಕಾಮಗಾರಿ ಗುಣಮಟ್ಟ ಕಳಪೆಯಾಗುತ್ತಿದೆ. ಕಾಮಗಾರಿ ಕಳಪೆ ಆಗಿದ್ದರೂ ಸಂಬಂಧಿತ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಇರಬೇಕಿದೆ.

–ನಾಗೇಂದ್ರಪ್ಪ, ಬೆಳ್ಳೂಡಿ ಗ್ರಾಮ, ಹರಿಹರ

ನೀತಿಗೆರೆ ಹಾಗೂ ಯರಗಟ್ಟಿಹಳ್ಳಿ ಗ್ರಾಮದ ಬಳಿ ಮಳೆಯಿಂದಾಗಿ 1.5 ಕಿ.ಮೀ.ಗಿಂತಲೂ ಹೆಚ್ಚು ರಸ್ತೆ ಹಾಳಾಗಿದೆ. ಐದಾರು ತಿಂಗಳಿಂದಲೂ ಹಾಳಾದ ರಸ್ತೆಯಲ್ಲೇ ಓಡಾಡಬೇಕಾದ ಅನಿವಾರ್ಯತೆ ನಮ್ಮದಾಗಿದೆ. ಇದುವರೆಗೂ ಯಾವ ಅಧಿಕಾರಿಗಳೂ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿಲ್ಲ.

–ಪದ್ಮಮ್ಮ, ನೀತಿಗೆರೆ, ಚನ್ನಗಿರಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT