ಡಾ. ಬಗಾದಿ ಗೌತಮ್‌ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ

7
ವಿಧಾನಸಭೆ ಚುನಾವಣೆ ಸುಗಮ ನಡೆಸಿರುವುದಕ್ಕೆ ಆಯೋಗದಿಂದ ಪ್ರಶಂಸೆ

ಡಾ. ಬಗಾದಿ ಗೌತಮ್‌ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ

Published:
Updated:
Prajavani

ದಾವಣಗೆರೆ: ಕಳೆದ ಮೇ ತಿಂಗಳಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಿರುವ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಅವರ ಕಾರ್ಯವನ್ನು ಪ್ರಶಂಸಿಸಿರುವ ಭಾರತೀಯ ಚುನಾವಣಾ ಆಯೋಗವು, ಕಲಬುರ್ಗಿ ವಿಭಾಗದ ‘ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ’ ಪ್ರಶಸ್ತಿಯನ್ನು ಅವರಿಗೆ ನೀಡಿದೆ.

ಹೊಸಪೇಟೆಯ ಹಂಪಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಅಶೋಕ್‌ ಲಾವಸ ಅವರು ಡಾ. ಬಗಾದಿ ಗೌತಮ್‌ ಅವರಿಗೆ ಸೋಮವಾರ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದ್ದಾರೆ.

2018ರ ಏಪ್ರಿಲ್‌–ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ನಡೆದಾಗ ಬಗಾದಿ ಗೌತಮ್‌ ಅವರು ರಾಯಚೂರು ಜಿಲ್ಲಾಧಿಕಾರಿಯಾಗಿದ್ದರು. ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮೊದಲ ಪ್ರಯತ್ನದಲ್ಲೇ ಅವರು ಪ್ರಶಸ್ತಿಗೆ ಭಾಜನರಾಗುವ ಮೂಲಕ ತಮ್ಮ ದಕ್ಷ ಆಡಳಿತಕ್ಕೆ ಕನ್ನಡಿ ಹಿಡಿದಿದ್ದಾರೆ.

‘ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ನಿಯಮಿತವಾಗಿ ತರಬೇತಿ ನೀಡಲಾಗಿತ್ತು. ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಚುನಾವಣೆ ವೇಳೆ ಇವಿಎಂ ಕಾರ್ಯನಿರ್ವಹಿಸದ ಪ್ರಮಾಣ ಅತಿ ಕಡಿಮೆ ವರದಿಯಾಗಿತ್ತು. ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸಿದ ಪರಿಣಾಮ ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಿತು’ ಎಂದು ಬಗಾದಿ ಗೌತಮ್‌ ‘ಪ್ರಜಾವಾಣಿ’ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡರು.

‘ಚುನಾವಣೆಯನ್ನು ಸುಗಮವಾಗಿ ನಡೆಸುವಲ್ಲಿ ವಿಶೇಷವಾಗಿ ಮತಗಟ್ಟೆ ಅಧಿಕಾರಿಗಳ ಹಾಗೂ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿತ್ತು. ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದು ತಂಡವಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಈ ಪ್ರಶಸ್ತಿಯ ಗೌರವವು ನಮ್ಮ ಇಡೀ ತಂಡಕ್ಕೆ ಸಲ್ಲುತ್ತದೆ’ ಎಂದು ಅವರು ತಮ್ಮೊಂದಿಗೆ ಕೆಲಸ ಮಾಡಿದವರ ಕೊಡುಗೆಯನ್ನೂ ಸ್ಮರಿಸಿದರು.

‘ಮುಂಬರುವ ಲೋಕಸಭಾ ಚುನಾವಣೆಯನ್ನೂ ದಾವಣಗೆರೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಿರ್ವಹಿಸುವ ಸವಾಲು ನಮ್ಮೆದುರಿಗೆ ಇದೆ. ಈಗಿನಿಂದಲೇ ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇವಿಎಂ ಹಾಗೂ ವಿ.ವಿ ಪ್ಯಾಟ್‌ ಯಂತ್ರಗಳನ್ನು ಹೊರತೆಗೆದು ಸ್ವಚ್ಛಗೊಳ್ಳಿಸುವ ಕೆಲಸ ಆರಂಭಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಬಗಾದಿ ಗೌತಮ್‌ ಅವರು ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ‘ನರೇಗಾ’ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವುದಕ್ಕೆ ಹಾಗೂ ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಕೆಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವುದಕ್ಕೆ ಕೇಂದ್ರ ಸರ್ಕಾರದಿಂದ ಪ್ರಶಸ್ತಿಗಳು ಲಭಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !