ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದರಸಾಗಳು ಏಕೆ ಬೇಕು? ಅವುಗಳನ್ನು ನಿಷೇಧಿಸಿ: ರೇಣುಕಾಚಾರ್ಯ

Last Updated 27 ಮಾರ್ಚ್ 2022, 11:08 IST
ಅಕ್ಷರ ಗಾತ್ರ

ಹೊನ್ನಾಳಿ: ‘ಮದರಸಾಗಳು ಏಕೆ ಬೇಕು? ಮದರಸಾಗಳಲ್ಲಿ ದೇಶದ್ರೋಹದ ಪಾಠ ಮಾಡುತ್ತಾರೆ. ಅವುಗಳನ್ನು ನಿಷೇಧ ಮಾಡಬೇಕು’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೂ ಮಠ, ಮಂದಿರಗಳಲ್ಲಿ ಎಲ್ಲಾ ಧರ್ಮೀಯರಿಗೂ ಪೂಜೆ, ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶಗಳಿವೆ. ಆದರೆ ನಿಮ್ಮ ಮದರಸಾ, ಮಸೀದಿಗಳಲ್ಲಿ ಯಾಕಿಲ್ಲ’ ಎಂದು ಪ್ರಶ್ನಿಸಿದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯರು. ಅವರ ಬಗ್ಗೆ ಅಪಾರ ಗೌರವವಿದೆ. ಅವರು ಹಿಜಾಬ್‌ ವಿವಾದಲ್ಲಿ ವಿನಾಕಾರಣ ಮಠಾಧೀಶರನ್ನು ಎಳೆತರುವ ಪ್ರಯತ್ನ ಮಾಡಿದ್ದಾರೆ’ ಎಂದು ದೂರಿದರು.

‘ಈ ನೆಲದ ಕಾನೂನನ್ನು ಗೌರವಿಸಬೇಕಾದದ್ದು ಇಲ್ಲಿನ ಪ್ರತಿಯೊಬ್ಬರ ಕರ್ತವ್ಯ. ಕೋರ್ಟ್ ತೀರ್ಪು ಕೊಟ್ಟರೂ, ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿರುವುದು ಸರಿಯೇ? ಬಹಿಷ್ಕರಿಸುವಂತೆ ಯಾರೂ ಹೇಳಿದ್ದರು’ ಎಂದು ಪ್ರಶ್ನಿಸಿದರು.

ಹಿಜಾಬ್ತೀರ್ಪು ವಿರೋಧಿಸಿ ಪಿಎಫ್‍ಐ ಸೇರಿ ಇತರೆ ಸಂಘಟನೆಗಳು ರಾಜ್ಯ ಬಂದ್‌ಗೆ ಕರೆ ಕೊಟ್ಟಿವೆ. ಇದೇನು ಬಾಂಗ್ಲಾದೇಶನಾ, ಪಾಕಿಸ್ತಾನವಾ ಎಂದ ಅವರು, ಇದನ್ನು ಕಾಂಗ್ರೆಸ್ ಮುಖಂಡರು ಬೆಂಬಲಿಸುತ್ತಿರುವುದು ಸರಿಯಲ್ಲ ಎಂದರು.

‘ಹಿಂದೂ ಧರ್ಮದ ಮಹಿಳೆಯರು ತಾಳಿ, ಅರಿಶಿನ, ಕುಂಕುಮ, ಬಳೆ ಧರಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ, ಆ ಬಗ್ಗೆ ಪ್ರಶ್ನಿಸಿದರೆ ಸರಿ ಇರುವುದಿಲ್ಲ. ಭಗವದ್ಗೀತೆ, ಹಿಜಾಬ್ ಮತ್ತು ಕಾಶ್ಮೀರಿ ಫೈಲ್ಸ್ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಿದರೆ ಸಂಪೂರ್ಣ ಮುಳುಗಿ ಹೋಗುತ್ತದೆ’ ಎಂದರು.

‘ಜೇಮ್ಸ್ ಸಿನಿಮಾಕ್ಕೆ ಯಾವುದೇ ತೊಂದರೆ ನೀಡಿಲ್ಲ. ರಾಜ್‍ಕುಮಾರ್ ಕುಟುಂಬದ ಮೇಲೆ ಅಪಾರವಾದ ಗೌರವವಿದೆ’ ಎಂದು ಹೇಳಿದರು.

‘ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ವಿನಾ ಕಾರಣ ನನ್ನ ಮಗಳ ಹೆಸರನ್ನು ಎಳೆದು ತರುತ್ತಿದ್ದಾರೆ. ನನ್ನ ಮಗಳು ಮೂರು ಬಿಲ್ಲೆಯನ್ನೂ ಪಡೆದಿಲ್ಲ. ಯಾರೋ ಚೇತನಾ ಹಿರೇಮಠ್ ಅವರು ಸಾಲ ಪಡೆದಿದ್ದಾರೆ. ಅವರಿಗೂ ನನಗೂ ಸಂಬಂಧವಿಲ್ಲ. ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಖದ್ದಮೆ ಹೂಡುತ್ತೇನೆ’ ಎಂದು ಹೇಳಿದರು.

ತಾಲ್ಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಖಂಡರು ಇದ್ದರು.

ಪ್ರತಿಭಟನೆಗೆ ಮಾಜಿ ಶಾಸಕರ ಕುಮ್ಮಕ್ಕು

‘ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರು ನೇರವಾಗಿ ನನ್ನ ವಿರುದ್ಧ ಪ್ರತಿಭಟನೆ ಮಾಡಲಿ, ರೇಣುಕಾಚಾರ್ಯ ದಲಿತರ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು, ಅದನ್ನು ಬಿಟ್ಟು ಹಿಂಬಾಗಿಲಿನಿಂದ ನನ್ನ ಮೇಲೆ ಪ್ರತಿಭಟನೆ ಮಾಡುವಂತೆ ಕೆಲವರನ್ನು ಛೂ ಬಿಡುತ್ತಿದ್ದಾರೆ. ಮಾಜಿ ಶಾಸಕರೇ ನನ್ನ ವಿರುದ್ಧ ಪ್ರತಿಭಟನೆ ಮಾಡಬಹುದಲ್ಲವೇ, ಪತ್ರಿಕಾಗೋಷ್ಠಿ ಮಾಡಲಿ’ ಎಂದು ಹೇಳಿದರು.

‘ನಾನು ದಲಿತರ ಮೀಸಲಾತಿಯನ್ನು ಕಸಿದುಕೊಂಡಿದ್ದರೆ ಅದನ್ನು ಪ್ರಶ್ನಿಸಲಿ. ಮೀಸಲಾತಿಯನ್ನು ನಾನು ಪಡೆದರೆ ಅದು ತಪ್ಪು. ಆದರೆ ನಾನು ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT