ದಾವಣಗೆರೆ: ಬಂದ್‌ ಪೂರ್ಣ, ವಹಿವಾಟು, ಬಸ್‌ ಸಂಚಾರ ವ್ಯತ್ಯಯ

7
ಕಾಂಗ್ರೆಸ್‌, ಜೆಡಿಎಸ್‌, ಸಿಪಿಐ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ

ದಾವಣಗೆರೆ: ಬಂದ್‌ ಪೂರ್ಣ, ವಹಿವಾಟು, ಬಸ್‌ ಸಂಚಾರ ವ್ಯತ್ಯಯ

Published:
Updated:
Deccan Herald

ದಾವಣಗೆರೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯನ್ನು ಖಂಡಿಸಿ ಸೋಮವಾರ ಕರೆ ನೀಡಿದ್ದ ‘ಭಾರತ್‌ ಬಂದ್‌’ ಜಿಲ್ಲೆಯಲ್ಲಿ ಬಹುತೇಕ ಪೂರ್ಣವಾಗಿದೆ. ಬಂದ್‌ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಜಿಲ್ಲೆಯಲ್ಲಿ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನಗರದಲ್ಲಿ ಬೆಳಿಗ್ಗೆಯಿಂದಲೇ ಸರ್ಕಾರಿ ಹಾಗೂ ಖಾಸಗಿ ಬಸ್‌ ಸಂಚಾರ ಸ್ಥಗಿತಗೊಂಡಿದ್ದವು. ಬಹುತೇಕ ಅಂಗಡಿಗಳು ಮುಚ್ಚಿದ್ದರಿಂದ ವ್ಯಾಪಾರ– ವಹಿವಾಟು ನಡೆಯಲಿಲ್ಲ. ಕೆಲವೇ ಆಟೊಗಳು ಮಾತ್ರ ಸಂಚರಿಸಿತು.

ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಹೊರ ಊರಿಗೆ ತೆರಳಾಗದೇ ಮನೆಗೆ ವಾಪಸ್‌ ತೆರಳುತ್ತಿದ್ದರು. ನಗರಕ್ಕೆ ಬೆಳಿಗ್ಗೆ ಬಂದಿದ್ದ ಜನ ಹೆಚ್ಚಿನ ಹಣ ಕೊಟ್ಟು ಆಟೊದಲ್ಲಿ ಸಂಚರಿಸುವಂತಾಯಿತು. ಜನಸಾಮಾನ್ಯರು ನಡೆದುಕೊಂಡೇ ಸಾಗುತ್ತಿರುವ ದೃಶ್ಯ ಕಂಡು ಬಂತು.

ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿರುವ ಮಂಡಿಪೇಟೆ, ಚಾಮರಾಜಪೇಟೆ, ಚೌಕಿಪೇಟೆ, ಅಶೋಕ ರಸ್ತೆ, ಎವಿಕೆ ಕಾಲೇಜು ರಸ್ತೆ ಸೇರಿ ನಗರದ ಬಹುತೇಕ ಕಡೆ ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿರುವುದು ಕಂಡು ಬಂತು. ಬಹುತೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ವಹಿವಾಟು ನಿಲ್ಲಿಸಲಾಗಿತ್ತು. ಬೀದಿ ಬದಿಯಲ್ಲಿ ಬೆರಳೆಣಿಕೆಯಷ್ಟು ವ್ಯಾಪಾರಿಗಳು ತರಕಾರಿ, ಹೂವು– ಹಣ್ಣು ಮಾರಾಟ ಮಾಡಿದರು. ಮಧ್ಯಾಹ್ನ 2 ಗಂಟೆಯ ಬಳಿಕ ಬಸ್‌ ಸಂಚಾರ ಆರಂಭಗೊಂಡಿತು. ವ್ಯಾಪಾರಿಗಳು ಅಂಗಡಿಗಳನ್ನು ತೆರೆಯತೊಡಗಿದರು. ಸಂಜೆಯ ವೇಳೆಗೆ ಸಹಜ ಸ್ಥಿತಿಗೆ ಬಂತು.

ಕಾಂಗ್ರೆಸ್‌ ಪ್ರತಿಭಟನೆ

ಕಾಂಗ್ರೆಸ್‌ ಕಾರ್ಯಕರ್ತರು ಬೆಳಿಗ್ಗೆ ಪಾಲಿಕೆ ಕಚೇರಿ ಬಳಿ ಸೇರಿದರು. ಬಳಿಕ ಬೈಕ್‌ ರ‍್ಯಾಲಿ ಆರಂಭಿಸಿದರು. ಹೊಸ ಬಸ್‌ನಿಲ್ದಾಣ, ಪಿ.ಬಿ. ರಸ್ತೆ, ಎ.ವಿ.ಕೆ ಕಾಲೇಜು ರಸ್ತೆ, ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತ, ಮಂಡಿಪೇಟೆ, ಶಿವಾಜಿನಗರದ ದುರ್ಗಾಂಬಿಕಾ ದೇವಸ್ಥಾನ, ಬೇತೂರು ರಸ್ತೆ, ಚಾಮರಾಜಪೇಟೆ, ಗಾಂಧಿ ಸರ್ಕಲ್‌ ಮೂಲಕ ಪಾಲಿಕೆ ಕಚೇರಿ ಎದುರು ಬಂದರು. ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿಯೊಂದಿಗೆ ಮೆರವಣಿಗೆಯಲ್ಲಿ ಗಾಂಧಿ ಸರ್ಕಲ್‌ಗೆ ಬಂದು ದಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ‘ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿದ್ದರೂ ಪೆಟ್ರೋಲ್‌– ಡೀಸೆಲ್‌ ಬೆಲೆ ಕಡಿಮೆ ಇತ್ತು. ಆದರೆ, ಈಗ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್‌– ಡೀಸೆಲ್‌ ಬೆಲೆಯನ್ನು ಹೆಚ್ಚಿಸುತ್ತಿದೆ. ಪಾಕಿಸ್ತಾನ, ಬಾಂಗ್ಲಾ ದೇಶಕ್ಕೆ ಕಡಿಮೆ ಬೆಲೆಯಲ್ಲಿ ರಫ್ತು ಮಾಡಲಾಗುತ್ತಿದೆ. ಈ ಸರ್ಕಾರ ಬಡವರಿಗೆ ಅನುಕೂಲ ಮಾಡಿಕೊಡುತ್ತಿಲ್ಲ. ಅದಾನಿ, ಅಂಬಾನಿಯಂತಹ ಉದ್ಯಮಿಗಳ ಪರ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

ಉಪ ಮೇಯರ್‌ ಚಮನ್‌ಸಾಬ್‌, ಪಾಲಿಕೆ ಸದಸ್ಯರಾದ ಎಂ. ಹಾಲೇಶ್‌, ದಿನೇಶ್‌ ಶೆಟ್ಟಿ, ಎ. ನಾಗರಾಜ್‌, ಅಯೂಬ್‌ ಪೈಲ್ವಾನ್‌, ಸಾಧಿಕ್‌ ಪೈಲ್ವಾನ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಇನ್ನೊಂದೆಡೆ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಅವರು ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಜಯದೇವ ವೃತ್ತದಿಂದ ಗಾಂಧಿ ಸರ್ಕಲ್‌ವರೆಗೆ ಸ್ಕೂಟರ್‌ ತಳ್ಳಿಕೊಂಡು ಹೋಗುವ ಮೂಲಕ ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದರು.

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ

ರಾಜ್ಯ ಘಟಕದ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಗಾಂಧಿ ಸರ್ಕಲ್‌ನಲ್ಲಿ ಪ್ರತಿಭಟಿಸಿದರು. ಕಲ್ಲು ಜೋಡಿಸಿಟ್ಟು ಒಲೆ ಹಾಕಿ ಚಹಾ ಮಾಡಿ ಕುಡಿಯುವ ಮೂಲಕ ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿದರು.

ಚಕ್ಕಡಿಯಿಂದ ಆಟೊ ಎಳೆದು ಪ್ರತಿಭಟನೆ

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌. ರಾಮೇಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಚಕ್ಕಡಿ ಗಾಡಿಯಿಂದ ಆಟೊ ಎಳೆಯುವ ಮೂಲಕ ಗಮನ ಸೆಳೆದರು.

ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ

ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ನಾಯ್ಕ ಎಚ್‌.ಕೆ. ನೇತೃತ್ವದಲ್ಲಿ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಾಕಿ ಪ್ರತಿಭಟಿಸಿದರು. ತಕ್ಷಣವೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕರ್ನಾಟಕ ರಾಜ್ಯ ಔಷಧಿ ಮಾರಾಟ ಪ್ರತಿನಿಧಿಗಳ ಸಂಘದ ಸದಸ್ಯರು ಎಡಪಕ್ಷಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !