ಶನಿವಾರ, ನವೆಂಬರ್ 23, 2019
17 °C
ಬಂಜಾರ ವಿದ್ಯಾರ್ಥಿ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ

‘ಉತ್ತಮ ವಿದ್ಯಾಭ್ಯಾಸ ಪಡೆದು ಭವಿಷ್ಯ ರೂಪಿಸಿಕೊಳ್ಳಿ’

Published:
Updated:
Prajavani

ಶಿವಮೊಗ್ಗ: ‘ಬಡತನದ ಕಾರಣದಿಂದಾಗಿ ಪೋಷಕರು ಕೂಲಿ ಕೆಲಸ ಮಾಡಿರಬಹುದು. ಹಾಗೆಂದು ಮಕ್ಕಳೂ ಅದೇ ಕೆಲಸದಲ್ಲಿ ಮುಂದುವರಿಯದೆ ಉತ್ತಮ ವಿದ್ಯಾಭ್ಯಾಸ ಪಡೆಯುವುದರ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. 

ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಮತ್ತು ನಿವೃತ್ತ ಯೋಧರಿಗೆ ಸನ್ಮಾನ ಹಾಗೂ ವಿಚಾರ ಸಂಕಿರಣ, ಯುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಹಿಂದುಳಿದ ಹಾಗೂ ದಲಿತ ಸಮಾಜದಲ್ಲಿ ಜನಿಸಿದ್ದೇನೆ ಎಂದು ಕೀಳರಿಮೆ ಇಟ್ಟುಕೊಳ್ಳದೆ. ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು. ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಬೇಕು’ ಎಂದು ಸಲಹೆ ನೀಡಿದರು. 

‘ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡುವತ್ತ ಸರ್ಕಾರ ಹೆಜ್ಜೆ ಇಟ್ಟಿದೆ. ಅಲ್ಲದೇ, ಬಂಜಾರ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಬಂಜಾರ ಅಭಿವೃದ್ಧಿ ನಿಗಮ ಪ್ರಾರಂಭ ಮಾಡಿದ್ದು ಬಿಜೆಪಿ ಸರ್ಕಾರ. ಸಮಾಜದ ಪ್ರಮುಖರು ಜನಾಂಗದ ಅಭಿವೃದ್ಧಿಗೆ ಕೆಲವೊಂದು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಜನಾಂಗದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಸಂಪೂರ್ಣ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾಜದ ಸಾಧಕರು ಹಾಗೂ ನಿವೃತ್ತ ಯೋಧರನ್ನು ಅಭಿನಂದಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿವೃತ್ತ ಅಕಾರಿ ಈಶ್ವರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹೃಷಿಕುಮಾರ ಸ್ವಾಮೀಜಿ, ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ದೇವರಾಜ್ ಮಂಡೇನಕೊಪ್ಪ, ಅನಂತ ನಾಯ್ಕ, ಗಿರೀಶ್, ರುದ್ರಾನಾಯ್ಕ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)