ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಧನದ ಮೇಲೆ ಸಾಲ ನೀಡಿದ ಬ್ಯಾಂಕ್‌

ಫಲಾನುಭವಿಗಳಿಗೆ ಸಿಬಿಲ್‌:: ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ತೇಜಸ್ವಿ ಪಟೇಲ್‌ ಆಕ್ರೋಶ
Last Updated 18 ಅಕ್ಟೋಬರ್ 2019, 14:25 IST
ಅಕ್ಷರ ಗಾತ್ರ

ದಾವಣಗೆರೆ: ವಿವಿಧ ಅಭಿವೃದ್ಧಿ ನಿಗಮಗಳ ಫಲಾನುಭವಿಗಳಿಗೆ ಸಹಾಯಧನಕ್ಕೆ ಸಾಲ ಸೌಲಭ್ಯ ನೀಡುವಾಗ ಬ್ಯಾಂಕ್‌ ಅಧಿಕಾರಿಗಳು ಸಹಾಯಧನ (ಸಬ್ಸಿಡಿ) ಮೇಲೆ ಸಾಲ ನೀಡಿದ್ದಾರೆ. ಇದು ಅಪರಾಧ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಕುಕ್ಕುವಾಡದಲ್ಲಿ ಹಲವು ಬ್ಯಾಂಕ್‌ಗಳಲ್ಲಿ ಪಶುಭಾಗ್ಯ ಯೋಜನೆ ಫಲಾನುಭವಿಗಳಿಗೆ ಸಾಲ ನೀಡುವಾಗ ಸಬ್ಸಿಡಿ ಮೇಲೆ ಸಾಲ ನೀಡಿದ್ದಾರೆ. ಸಹಾಯಧನವನ್ನೇ ಠೇವಣಿ ಆಗಿ ಇಟ್ಟುಕೊಂಡು ಸಾಲ ನೀಡಿದ್ದಾರೆ. (₹1 ಲಕ್ಷಕ್ಕೆ ₹ 25 ಸಾವಿರ ಸಹಾಯಧನ ಇದ್ದರೆ, ₹ 75 ಸಾವಿರ ಕೊಡುವಲ್ಲಿ ₹ 25 ಸಾವಿರ ಮಾತ್ರ ಸಾಲ ನೀಡಿದ್ದಾರೆ.) ಇದು ಅಪರಾಧವಾಗುತ್ತದೆ‘ ಎಂದು ದೂರಿದರು.

ಅಲ್ಲದೇ ಸಾಲ ನೀಡುವಾಗ ಸಿಬಿಲ್‌ (CIBIL) ಸ್ಕೋರ್‌ ಕಡ್ಡಾಯ ಮಾಡಿದ್ದಾರೆ. ಫಲಾನುಭವಿಗಳು ಆರ್ಥಿಕವಾಗಿ ಹಿಂದುಳಿದ ಕಾರಣ ಸಾಲಕ್ಕಾಗಿ ಬ್ಯಾಂಕ್‌ ಹೋಗುತ್ತಾರೆ. ಇಂತಹವರಿಗೆ ಸಿಬಿಲ್‌ ಕಡ್ಡಾಯ ಏಕೆ. ಹಲವರು ಬ್ಯಾಂಕ್‌ ಮುಖ ನೋಡುವುದೇ ಇಂತಹ ಸಂದರ್ಭದಲ್ಲಿ. ಹೀಗಿರುವಾಗ ಸಿಬಿಲ್‌ ಸ್ಕೋರ್‌ ಕೇಳಿದರೆ ಅವರು ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಅವರ ಸಿಬಿಲ್‌ ನೋಡದೆ ಸಿವಿಲ್‌ ಸ್ಕೋರ್‌ (ಸಾಮಾಜಿಕ ಸ್ಥಿತಿ) ನೋಡಬೇಕು ಎಂದರು.

ಈ ಬಗ್ಗೆ ಉತ್ತರಿಸಿದ ಲೀಡ್‌ ಬ್ಯಾಂಕ್‌ ಅಧಿಕಾರಿ, ‘ಸಬ್ಸಿಡಿ ಮೇಲೆ ಸಾಲ ನೀಡಿದ್ದರೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಿಬಿಲ್‌ ಸ್ಕೋರ್‌ ಆರ್‌ಬಿಐ ನಿಯಮಾವಳಿಗೆ ಒಳಪಟ್ಟಿದೆ. ಸಾಲ ನೀಡುವ ಬಗ್ಗೆ ಸಂಬಂಧಿಸಿದ ಬ್ಯಾಂಕ್‌ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲು ಅವಕಾಶ ಇದೆ‘ ಎಂದು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ಸಸಿ ಹಾಕಲು ರೈತರು ಅರ್ಜಿ ಸಲ್ಲಿಸಿದರೆ ಬರುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅರ್ಜಿ ವಜಾಗೊಳಿಸಿದ್ದಾರೆ. ಖಾತ್ರಿ ಅಡಿ ಏಕೆ ಸಸಿ ಹಾಕಲು ಬರುವುದಿಲ್ಲ ಎಂಬುದನ್ನು ತಿಳಿಸಬೇಕು ಎಂದು ಸದಸ್ಯ ಡಿ.ಜಿ. ವಿಶ್ವನಾಥ ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌, ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕು ಅರೆ ಮಲೆನಾಡು ಪ್ರದೇಶಕ್ಕೆ ಬರುವ ಕಾರಣ ಅಲ್ಲಿ ಮಾತ್ರ ಅವಕಾಶ ಇದೆ ಎಂದರು.

ಇದಕ್ಕೆ ಉತ್ತರಿಸಿದ ಸಿಇಒ ಪದ್ಮ ಬಸವಂತಪ್ಪ,‘ಖಾತ್ರಿ ಅಡಿ ಅಡಿಕೆ ಹಾಕಲು ಬರುವುದೇ ಇಲ್ಲ ಎಂದು ಹೇಳಿಲ್ಲ. ಗೋರಕ್‌ ಸಿಂಗ್‌ ವರದಿ ಪ್ರಕಾರ ಕೆಲ ಪ್ರದೇಶಗಳಲ್ಲಿ ಮಾತ್ರ ಅಡಿಕೆ ಬೆಳೆಯಲು ಅವಕಾಶ ಇದೆ. ಈ ಬಗ್ಗೆ ಲಿಖಿತ ನಿರ್ದೇಶನ ಇಲ್ಲ. ದಾವಣಗೆರೆಯ ಉಳಿದ ಪ್ರದೇಶಗಳಲ್ಲೂ ಬೆಳೆಯಬಹುದೇ ಎಂಬ ಬಗ್ಗೆ ನಿರ್ದೇಶನ ನೀಡುವಂತೆ ತೋಟಗಾರಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೇಂದ್ರ ನರೇಗಾ ಯೋಜನೆ ಘಟಕಕ್ಕೆ ಪತ್ರ ಬರೆಯಲಾಗಿದೆ. ಉತ್ತರದ ಬಳಿಕ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಜಿಲ್ಲೆಯಲ್ಲಿ ಸರ್ಕಾರದ ಅನುದಾನದಡಿ ನಡೆಯುತ್ತಿರುವ ಖಾಸಗಿ ಎಸ್‌.ಸಿ. ಎಸ್‌.ಟಿ ಹಾಸ್ಟೆಲ್‌ಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಕೆಲವೆಡೆ ಹಾಸ್ಟೆಲ್‌ಗಳೇ ಇಲ್ಲ. ಆದರೂ ಅನುದಾನ ಪಡೆಯಲಾಗುತ್ತಿದೆ. ಸುಳ್ಳು ದಾಖಲೆ ತೋರಿಸಿ ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಸದಸ್ಯ ಬಸವಂತಪ್ಪ ಗಮನ ಸೆಳೆದರು.

‘ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಟ್ರಂಕ್‌ಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಲೆಕ್ಕ ತೋರಿಸಿದ್ದಾರೆ. ನಾವು ಭೇಟಿ ನೀಡುವ ವಿಷಯ ತಿಳಿದು ಕೆಲವರು ಹಾಸ್ಸೆಲ್‌ ಬಂದ್‌ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಇಷ್ಟು ವರ್ಷ ಸರ್ಕಾರದ ಅನುದಾನ ಬಳಸಿಕೊಂಡು ಈಗ ವಸತಿ ನಿಲಯ ಮುಚ್ಚುತ್ತೇವೆ ಎನ್ನುವುದು ಯಾವ ನ್ಯಾಯ’ ಈ ಬಗ್ಗೆ ಪೊಲೀಸ್‌ ಇಲಾಖೆಯಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರು, ಅಧಿಕಾರಿಗಳ ಸಮಿತಿ ರಚಿಸಿ ಅವರು ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲಿ. ಆ ಬಳಿಕ ಅಗತ್ಯವಿದ್ದರೆ ಪೊಲೀಸರಿಗೆ ಒಪ್ಪಿಸೋಣ ಎಂದು ಅಧ್ಯಕ್ಷೆ ಶೈಲಜಾ ಹೇಳಿದರು.

ವೀರಶೇಖರಯ್ಯ, ‘ಅಧಿಕಾರಿಗಳಿಗೆ ತಮ್ಮ ಕ್ಷೇತ್ರದ ಬದಲಾದ ಕಾಮಗಾರಿಗೆ ಅರ್ಜಿ ನೀಡಿದ್ದರೂ ಚೇಂಜ್ ಆಫ್ ವರ್ಕ್ ಆಗಿಲ್ಲ. ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೊರಗುತ್ತಿಗೆ ಆಧಾರದಲ್ಲಿ ಸೇವೆ ನೀಡುವ ಏಜೆನ್ಸಿಗಳಿಗೆ ಸಿಬ್ಬಂದಿಗಳ ಕನಿಷ್ಠ ಮೂರು ತಿಂಗಳ ವೇತನವನ್ನು ಠೇವಣಿ ಇರಿಸುವ ಷರತ್ತಿಗೊಳಪಟ್ಟು ಟೆಂಡರ್ ನೀಡಬೇಕೆಂದು ಸದಸ್ಯರು ಒತ್ತಾಯಿಸಿದರು.

ಸಭೆಯಲ್ಲಿ ಹಿಂದಿನ ಸಭಾ ನಡವಳಿ ಕುರಿತು ಚರ್ಚಿಸಲಾಯಿತು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರನಾಯಕ್‌, ಉಪ ಕಾರ್ಯದರ್ಶಿ ಆನಂದ, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT