ಬುಧವಾರ, ಜುಲೈ 28, 2021
25 °C
ಪರೀಕ್ಷೆ ಮುಂದೂಡುವಂತೆ ಬಾಪೂಜಿ ದಂತ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಒತ್ತಾಯ

ದಾವಣಗೆರೆ: ಪರೀಕ್ಷಾ ವೇಳಾಪಟ್ಟಿ ತಂದಿಟ್ಟ ಆತಂಕ

ಕಲಾವತಿ ಬೈಚಬಾಳ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಷಯಗಳ ವಿಶ್ವವಿದ್ಯಾಲಯವು (ಆರ್‌.ಜಿ.ಯು.ಎಚ್‌.ಎಸ್‌) ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಕೋರ್ಸ್‍ಗಳ ಪರೀಕ್ಷೆಯನ್ನು ಜುಲೈ ತಿಂಗಳಲ್ಲಿ ನಡೆಸಲು ತೀರ್ಮಾನಿಸಿದ್ದು, ಈಗಾಗಲೇ ವೇಳಾಪಟ್ಟಿಯನ್ನು ಹೊರಡಿಸಿದೆ.

ದೇಶದಾದ್ಯಂತ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿವೆ. ಹೊರ ರಾಜ್ಯಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಜಿಲ್ಲೆಗೆ ಬರಲು ಆತಂಕ ವ್ಯಕ್ತಪಡಿಸಿದ್ದಾರೆ. ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜುಲೈ 28ರಿಂದ ಪರೀಕ್ಷೆಗಳು ಪಾರಂಭವಾಗಲಿವೆ. ಹೀಗಾಗಿ ಇಲ್ಲಿನ ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ವಿವಿಧೆಡೆಯ ವಿದ್ಯಾರ್ಥಿಗಳು ಪರೀಕ್ಷೆಯನ್ನು ಮುಂದೂಡಿ ಎಂದು ಟ್ವೀಟರ್‌ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ. (#StudentsLivesMatter #justiceforRGUHSstudents, #RGUHSUniversity).

ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮಬಂಗಾಳ ಸೇರಿ ಇತರೆ ರಾಜ್ಯಗಳಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ವಿದ್ಯಾರ್ಥಿಗಳು ತಮ್ಮ ತವರು ರಾಜ್ಯಗಳಿಗೆ ತೆರಳಿದ್ದು, ಕಂಟೈನ್ಮೆಂಟ್ ವಲಯಗಳಲ್ಲಿದ್ದಾರೆ. ಅಲ್ಲಿರುವ ವಿದ್ಯಾರ್ಥಿಗಳು ರಾಜ್ಯಕ್ಕೆ ಬರಲು, ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರಿಂದಾಗಿ ಪರೀಕ್ಷೆ ಬರೆಯುವ ಅವಕಾಶ ಕೈತಪ್ಪುವ ಆತಂಕಕ್ಕೆ ವಿದ್ಯಾರ್ಥಿಗಳು ಒಳಗಾಗಿದ್ದಾರೆ.

ಇದೇ ಅಂತಿಮ ವೇಳಾಪಟ್ಟಿಯಲ್ಲ

‘ಪರೀಕ್ಷೆಗಳನ್ನು ನಡೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿ ಹೊರಡಿಸಿದ್ದೇವೆ. ಆದರೆ, ಇದೇ ಅಂತಿಮ ವೇಳಾಪಟ್ಟಿಯಲ್ಲ. ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರದ ಮೇಲೆ ವೇಳಾಪಟ್ಟಿಯಲ್ಲಿ ಬದಲಾವಣೆಗಳಾಗಬಹುದು ಅಥವಾ ಪರೀಕ್ಷೆ ಮುಂದೂಡಲೂಬಹುದು. ಒಂದು ವೇಳೆ ಪರಿಸ್ಥಿತಿ ತಿಳಿಗೊಂಡರೆ ನಿಗದಿತ ದಿನಾಂಕಗಳಂದೇ ಪರೀಕ್ಷೆ ನಡೆಯಬಹುದು. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗಬಾರದು. ವಿದ್ಯಾರ್ಥಿಗಳಿಗೆ ತೊಂದರೆಯಾಗವಂತಹ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವುದಿಲ್ಲ’ ಎಂದು ಆರ್‌.ಜಿ.ಯು.ಎಚ್‌.ಎಸ್‌ ಕುಲಪತಿ ಡಾ.ಎಸ್.ಸಚ್ಚಿದಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇರೆ ಬೇರೆ ರಾಜ್ಯಗಳಿಂದ ಕಂಟೈನ್ಮೆಂಟ್ ವಲಯಗಳಿಂದ ಬರುವ ಜನರನ್ನು ಕ್ವಾರಂಟೈನ್‍ಗೆ ಒಳಪಡಿಸಲು ರಾಜ್ಯ ಸರ್ಕಾರ ಬೇರೆ ಬೇರೆ ಮಾನದಂಡಗಳನ್ನು ವಿಧಿಸಿದೆ. ಮಹಾರಾಷ್ಟ್ರದಿಂದ ಬರುವವರಿಗೆ 21 ದಿನಗಳ ಕಾಲ ಕ್ವಾರಂಟೈನ್‍ಗೆ ಒಳಪಡಿಸಿದರೆ, ಇತರೆ ರಾಜ್ಯದ ಜನರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮತ್ತು ಏಳು ದಿನಗಳ ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ನಿಗದಿತ ದಿನಾಂಕದಂದೇ ಪರೀಕ್ಷೆ ನಡೆದರೆ, ಅನ್ಯ ರಾಜ್ಯದ ವಿದ್ಯಾರ್ಥಿಗಳು ಸಹ ಸರ್ಕಾರದ ಸೂಚನೆಗಳಂತೆ ಕ್ವಾರಂಟೈನ್‍ಗೆ ಒಳಪಡಬೇಕಾಗುತ್ತದೆ. ಹೊರ ರಾಜ್ಯದಿಂದ ಬರುವವರಿಗಾಗಿ ಸರ್ಕಾರ ಹಾಸ್ಟೆಲ್‌, ಶಾಲೆ, ಹೋಟೆಲ್‍ಗಳು ಸೇರಿ ಹಲವೆಡೆ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಿದೆ. ಆದರೆ, ಪರೀಕ್ಷೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಸರ್ಕಾರದ ನಿರ್ಧಾರದ ಮೇಲೆ ಪರೀಕ್ಷೆ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು