ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ನಾಡಿಗೆ ಉನ್ನತ ಇತಿಹಾಸ: ಬೈರತಿ ಬಸವರಾಜ

ಕರ್ನಾಟಕ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ
Last Updated 2 ನವೆಂಬರ್ 2022, 6:40 IST
ಅಕ್ಷರ ಗಾತ್ರ

ದಾವಣಗೆರೆ: ಸುತ್ತಲಿನ ರಾಜ್ಯಗಳಿಗಿಂತ ಕನ್ನಡ ನಾಡಿಗೆ ಉನ್ನತ ಇತಿಹಾಸ, ಭವ್ಯ ಪರಂಪರೆ, ಶ್ರೇಷ್ಠ ಸಂಸ್ಕೃತಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ನಡುವಿನ ಭಿನ್ನತೆಗಳನ್ನು ತೊಡೆದು ಹಾಕಿ, ಕೀಳರಿಮೆಯನ್ನು ಬಿಟ್ಟು ಎಲ್ಲರೂ ಒಂದಾಗಿ ಭವ್ಯ ಕರ್ನಾಟಕವನ್ನು ನಿರ್ಮಾಣ ಮಾಡಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

‘ವರ್ತಮಾನದ ವಿಶೇಷ ಸಾಧನೆಗಳೊಂದಿಗೆ ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ಮನನ ಮಾಡಿಕೊಡುವ ಮೂಲಕ ಅವರಲ್ಲಿ ನಾಡು ನುಡಿಯ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಕನ್ನಡಿಗರಿಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ಕ್ರಿಸ್ತಪೂರ್ವ 3ನೇ ಶತಮಾನದದಲ್ಲಿ ಮೌರ್ಯರ ಕಾಲದ ಸಾಮ್ರಾಟ ಅಶೋಕನ ಶಿಲಾಶಾಸನಗಳಲ್ಲಿ ಕನ್ನಡ ಪದಗಳು ಕಾಣಸಿಗುತ್ತವೆ. ಶಾತವಾಹನದ ಆಳ್ವಿಕೆಯ ಕಾಲದಲ್ಲಿಯೂ ಕನ್ನಡ ಭಾಷೆ ಬಳಕೆಯಾಗಿದೆ. ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ, ಮೈಸೂರು ಒಡೆಯರು ಹೀಗೆ ಕನ್ನಡದ ಎಲ್ಲ ರಾಜಮನೆತನಗಳು ಕನ್ನಡ ಭಾಷೆಯನ್ನು ಬೆಳೆಸಿದವು ಎಂದು ವಿವರಿಸಿದರು.

ಆದಿಕವಿ ಪಂಪ, ಮಹಾಕವಿ ರನ್ನ, ಜನ್ನ, ಹರಿಹರ, ರಾಘವಾಂಕ, ವಚನಕಾರರು, ದಾಸರು, ಸೂಫಿಗಳು ಕನ್ನಡಿಗರಿಗೆ ಸನ್ಮಾರ್ಗ ತೋರಿದರು. ಇಂಥ ಇತಿಹಾಸ ಇರುವ ಕನ್ನಡ ನಾಡು ಬ್ರಿಟಿಷರ ಕಾಲಾವಧಿಯಲ್ಲಿ ಮೈಸೂರು ಪ್ರಾಂತ್ಯ, ಬಾಂಬೆ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಮದ್ರಾಸ್‌ ಕರ್ನಾಟಕ ಎಂದು ಹಲವಾರು ವಿಂಗಡನೆಗಳಾಗಿದ್ದವು. ಸ್ವಾತಂತ್ರ್ಯಾನಂತರ 1956ರಲ್ಲಿ ಮತ್ತೆ ಏಕೀಕರಣಗೊಂಡವು ಎಂದು ಮಾಹಿತಿ ನೀಡಿದರು.

ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದ ರಾಜ್ಯ ನಮ್ಮದು ಎಂದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಅಧ್ಯಕ್ಷತೆ ವಹಿಸಿದ್ದರು. ಮೇಯರ್‌ ಜಯಮ್ಮ ಗೋಪಿನಾಯ್ಕ್, ಧೂಡಾ ಅಧ್ಯಕ್ಷ ಕೆ.ಎಂ ಸುರೇಶ್, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಬಸವರಾಜ್ ನಾಯ್ಕ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಠಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಹಲವು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪ್ರೇಮಿಗಳು ಭಾಗವಹಿಸಿದ್ದರು.

....

ಭುವನೇಶ್ವರಿ ಮೆರವಣಿಗೆ

ಕಾರ್ಯಕ್ರಮಕ್ಕಿಂತ ಮೊದಲು ಹೈಸ್ಕೂಲ್ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಯಿತು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪುಷ್ಪ ನಮನ ಸಲ್ಲಿಸುವ ಮೂಲಕ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು, ವೀರಗಾಸೆ, ಕೀಲುಕುದುರೆ, ಕೊಂಬು, ವೀರಗಾಸೆ, ಗೊಂಬೆ ಕುಣಿತ, ಮಹಿಳೆಯಿಂದ ಪೂರ್ಣಕುಂಭ ಮೆರವಣಿಗೆಗಳು ಭುವನೇಶ್ವರಿ ದೇವಿಗೆ ಸಾಥ್‌ ನೀಡಿದವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ. ಚನ್ನಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಹಲವರು ಇದ್ದರು.

.....

ಸಚಿವರಿಗೆ ಕಷ್ಟ ನೀಡಿದ ಹಳಗನ್ನಡ

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಭಾಷಣವನ್ನು ವಾಚಿಸಿದರು. ಅದರಲ್ಲಿ ಇದ್ದ ಹಳಗನ್ನಡ ಪದಗಳು ಸಚಿವರಿಗೆ ಕಷ್ಟ ನೀಡಿದವು.

‘ಸಾಧುಂಗೆ ಸಾಧುಂ, ಮಾಧುರ್ಯಂಗೆ ಮಾಧುರ್ಯಂ, ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್‌, ಮಾಧವನೀತನ್‌ ಪೆನರಲ್ಲ’, ‘ಕನ್ನಡಿಗರ್‌ ಚದುರರ್‌ ನಿಜದಿಂ ಕುರಿತೋದದೆಯೇ ಕಾವ್ಯ ಪ್ರಯೋಗ ಪರಿಣಿತಮತಿಗಳ್‌’ ಮುಂತಾದ ವಾಕ್ಯಗಳು, ರಾಜರತ್ನಂ ಅವರ ‘ನರಕ್ಕಕ್ಕಿಳಿಸಿ, ನಾಲ್ಗೆ ಸೀಳ್ಸಿ, ಬಾಯಿ ಹೊಲಿಸಿ ಹಾಕಿದ್ರನೂ ಮೂಗಲ್ಲಿ ಕನ್ನಡ ಪದವಾಡ್ತೀನಿ’ ಮುಂತಾದ ವಾಕ್ಯಗಳು ಸಚಿವರನ್ನು ತಡವರಿಸುವಂತೆ ಮಾಡಿದವು.

............

51 ಮಂದಿ ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ 51 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಎನ್‌.ಎಸ್‌. ವೀರಪ್ಪ, ಜಿ.ಸಿ. ಚಂದ್ರಪ್ಪ (ವೀರಗಾಸೆ), ಭಾಗ್ಯಮ್ಮ (ಸೋಬಾನೆ), ಎಚ್‌ ಶಶಿಧರ್‌, ಬಿ.ಎಸ್‌. ಶಾಂತವೀರಪ್ಪ (ಭಜನೆ), ಬಿ.ಇ. ಮಾಹಂತೇಶ್‌ (ಕಹಳೆ),
ಟಿ. ಮಂಜುನಾಥ ಗೌಡ, ಮಂಜುನಾಥ ಪಿ., ಸಂತೋಷ್ ಕುಮಾರ್‌ ಆರ್‌., ಆದಾಪುರ ನಾಗರಾಜಪ್ಪ, ಎಚ್‌. ಸುಧಾಕರ್‌, ಉಮಾ ತೋಟಪ್ಪ (ಕನ್ನಡಪರ ಹೋರಾಟ), ಶಿಲ್ಪಿ ಕಲಿವೀರಾಚಾರಿ, ಎಚ್‌.ಎಂ. ಬಸವಣ್ಣಾಚಾರ್‌, ವೀರೇಶ್‌ ಬಡಿಗೇರ್‌ (ಶಿಲ್ಪಕಲೆ), ಎನ್‌.ಕೆ. ಕೊಟ್ರೇಶಿ, ಉಮೇಶ್‌ ಇ., ಪ್ರಕಾಶ್‌ ಪಿ.ಕುರ್ಡೇಕರ್‌ (ಕ್ರೀಡೆ), ಟಿ. ಕುಮಾರಸ್ವಾಮಿ (ಪತ್ರಿಕಾವಿತರಕ), ಆರ್‌. ರವಿಬಾಬು (ಮಾಧ್ಯಮ), ಶೇಖ್‌ ದಾದಾಪೀರ್‌ ಶೇಟ್‌, ಸೈಯದ್‌ ನೌಷದ್‌ ಕುಂದವಾಡ ಮಂಜುನಾಥ, ಚೇತನಾ ಶಿವಕುಮಾರ್‌, ಬಸವರಾಜ್‌ ಸಾಗರ್‌, ರಾಜೇಂದ್ರ ಕುಮಾರ್‌ ಜೆ. (ಸಮಾಜಸೇವೆ), ವಿಠೋಬ ರಾವ್‌ ನಲ್ವಡೆ, ನಾಗರಾಜ ಮುತ್ತಿಗೆ, ಸಾವಿತ್ರಿ ರಿತ್ತಿ, ಸರೋಜಮ್ಮ, ಬಡ್ಡಪ್ಪ ಟಿ., ಸಿದ್ದರಾಜು ಎಸ್‌.ಎಸ್‌. (ರಂಗಭೂಮಿ), ಪಿ.ಎಂ. ಸಿದ್ದಯ್ಯ, ಡಾ. ಡಿ. ಫ್ರಾನ್ಸಿಸ್‌, ಬಿ. ರುದ್ರಮ್ಮ, ಪ್ರೊ.ಎಂ. ಬಸವರಾಜ್‌, (ಸಾಹಿತ್ಯ), ಕೆ.ಆರ್‌. ಕೊಂಡಯ್ಯದಾಸ್‌, ಲೀಲಾ ಎನ್‌.ಬಿ., ಡಿ. ಮಹೇಶ್ವರಪ್ಪ, ಎಂ. ಹಾಲೇಶ (ಸಂಗೀತ), ಟಿ.ವಿ. ರುದ್ರೇಶ್‌, ಕುಂದೂರು ಮಂಜಪ್ಪ (ಕೃಷಿ), ರೇವಣಸಿದ್ಧಪ್ಪ (ಪರಿಸರ), ರುದ್ರಮುನಿ ಹಿರೇಮಠ, ಜೆ.ಕೆ. ಹುಸೇನ್‌ ಮಿಯ್ಯಾಸಾಬ್‌, ಮೀನಾಕ್ಷಿ ವೆಂಕಟೇಶ್‌, ಬಸವರಾಜ ಯಳಮಲ್ಲಿ,
ಕೆ.ಎಸ್‌. ಅಮರೇಶ್‌, ಆಂಟೋನಿ, ಮಹಡಿಮನೆ ಶಿವಕುಮಾರ್‌ (ಸಂಕೀರ್ಣ) ಸನ್ಮಾನಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT