ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಾಪಟ್ಟಣ, ಮುಖ್ಯ ರಸ್ತೆಯ ಚರಂಡಿ ದುರಸ್ತಿಗೆ ಗ್ರಾಮಸ್ಥರ ಆಗ್ರಹ

Published 2 ಆಗಸ್ಟ್ 2024, 15:32 IST
Last Updated 2 ಆಗಸ್ಟ್ 2024, 15:32 IST
ಅಕ್ಷರ ಗಾತ್ರ

ಬಸವಾಪಟ್ಟಣ: ಒಂದು ತಿಂಗಳ ಹಿಂದೆ ಇಲ್ಲಿನ ಮುಖ್ಯ ರಸ್ತೆಯ ಚರಂಡಿಯನ್ನು ಸ್ವಚ್ಛಗೊಳಿಸಲು ತೆಗೆದ ಕಲ್ಲುಗಳನ್ನು ಮುಚ್ಚದೇ ಇರುವುದರಿಂದ, ಚರಂಡಿಯಿಂದ ದುರ್ವಾಸನೆ ಜತೆಗೆ ಸೊಳ್ಳೆಗಳೂ ಹೆಚ್ಚಿದ್ದು, ಕೂಡಲೇ ದುರಸ್ತಿ ಕೈಗೊಳ್ಳಬೇಕು ಗ್ರಾಮಸ್ಥರು ಮತ್ತು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಈ ಮುಖ್ಯ ರಸ್ತೆಯ ಎರಡೂ ಕಡೆಗಳಲ್ಲಿ ದಿನಸಿ, ತರಕಾರಿ, ಔಷಧಿ, ಬಟ್ಟೆ, ಬೆಳ್ಳಿ, ಬಂಗಾರ ಮತ್ತು ಟೈಲರಿಂಗ್‌ ಅಂಗಡಿಗಳಿವೆ. ವಾಸದ ಮನೆಗಳೂ ಇವೆ. ಚರಂಡಿ ಕಲ್ಲುಗಳನ್ನು ಕಿತ್ತು ಹಾಕಿರುವುದರಿಂದ ರಸ್ತೆ ಕಿರಿದಾಗಿ ವಾಹನ ಸವಾರರು ಚರಂಡಿಯಲ್ಲಿ ಬೀಳುತ್ತಿದ್ದಾರೆ. ದೊಡ್ಡ ಅಪಘಾತಗಳಾಗಿ ಸಾವು ನೋವು ಉಂಟಾಗುವ ಮೊದಲು ಈ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಗ್ರಾಮಸ್ಥರಾದ ಅಂಜುಂ, ಸೈಯದ್‌ ರಫಿ, ಎಚ್‌.ಹೊನ್ನಪ್ಪ, ಸೈಯದ್‌ ಸುಫಿಯಾನ್‌ ಒತ್ತಾಯಿಸಿದ್ದಾರೆ.

ಕುಡಿಯುವ ನೀರಿನ ಪೈಪ್‌ಗಳಲ್ಲಿ ಕೊಳಚೆ ನೀರು ಸೇರುತ್ತಿರುವುದನ್ನು ತಡೆಯಲು ಕಾಮಗಾರಿ ಕೈಗೊಳ್ಳಲಾಗಿದ್ದು, ಚರಂಡಿಯ ಕಲ್ಲುಗಳನ್ನು ಮೇಲೆತ್ತಿ ಕೊಳಚೆ ತೆರವುಗೊಳಿಸಿ, ಕುಡಿಯುವ ನೀರಿನ ಸರಬರಾಜು ಸರಿಪಡಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜಿ.ಸಚಿನ್‌ ತಿಳಿಸಿದ್ದಾರೆ.

‘ಚರಂಡಿ ಹಾಳಾಗಿದ್ದು, ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ತಳಕ್ಕೆ ಕಾಂಕ್ರೀಟ್‌ ಹಾಕಿ, ಚರಂಡಿಯ ಗೋಡೆಗೆ ಸಿಮೆಂಟ್‌ ಪ್ಲಾಸ್ಟರ್‌ ಮಾಡಿ ಸದೃಢಗೊಳಿಸುವ ನಿರ್ಧಾರವನ್ನು ಗ್ರಾಮ ಪಂಚಾಯಿತಿ ತೆಗೆದುಕೊಂಡಿದೆ. ಈ ಹಿಂದೆ ಚರಂಡಿ ದುರಸ್ತಿಗೆ ₹45 ಲಕ್ಷ ಹಾಗೂ ಇಲ್ಲಿನ ಶೃಂಗಾರ್‌ ಬಾಗ್‌ ತಾಂಡಾ ರಸ್ತೆ ನಿರ್ಮಾಣಕ್ಕೆ ₹30 ಲಕ್ಷ ಅನುದಾನ ಕೆ.ಆರ್‌.ಐ.ಡಿ.ಎಲ್‌ ನಿಗಮದಿಂದ ಎಸ್‌.ಸಿ.ಪಿ. ಯೋಜನೆಯಡಿ ಮಂಜೂರಾಗಿದೆ. ಕಾಮಗಾರಿ ಈವರೆಗೆ ಆರಂಭವಾಗದೇ ಇರುವುದರಿಂದ ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗುವ ಸಂಭವವಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ, ಅನುದಾನದ ಬಿಡುಗಡೆಗೆ ಶಿಫಾರಸು ಮಾಡಿ ಚರಂಡಿ ನಿರ್ಮಾಣಕ್ಕೆ ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT