ಗುರುವಾರ , ಡಿಸೆಂಬರ್ 3, 2020
23 °C
ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್‌ ಆಕ್ರೋಶ

ಕೆಐಎಡಿಬಿ ಅಧಿಕಾರಿಗಳನ್ನು ನೇಣಿಗೇರಿಸಬೇಕು: ಸಚಿವ ಶ್ರೀನಿವಾಸ್‌ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ‘ಭೂಮಿ ಅಭಿವೃದ್ಧಿ ಹೆಸರಿನಲ್ಲಿ ನಿವೇಶನಗಳ ಬೆಲೆಯನ್ನು ಮಾರುಕಟ್ಟೆ ಬೆಲೆಗಿಂತಲೂ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ಅಧಿಕಾರಿಗಳನ್ನು ಒಂದು ಕಡೆಯಿಂದ ನೇಣು ಹಾಕುತ್ತ ಬರಬೇಕು’ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್‌.ಆರ್‌. ಶ್ರೀನಿವಾಸ್‌ (ವಾಸು) ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರದಿಂದ ಜಾಗ ಪಡೆದು ನಿವೇಶನಗಳನ್ನು ಅಭಿವೃದ್ಧಿಗೊಳಿಸಿ ಕೆಐಎಡಿಬಿ ₹ 1 ಕೋಟಿಯಿಂದ ₹ 2 ಕೋಟಿವರೆಗೆ ಬೆಲೆ ನಿಗದಿಗೊಳಿಸುತ್ತಿದೆ. ಆದರೆ, ಅದರ ಪಕ್ಕದಲ್ಲೇ ಇರುವ ಖಾಸಗಿವರ ಜಾಗ ₹ 10 ಲಕ್ಷಕ್ಕೆ ಸಿಗುತ್ತದೆ. ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡಾಗ ಭೂಮಿ ಅಭಿವೃದ್ಧಿ ಹೆಸರಿನಲ್ಲಿ ನಿವೇಶನಗಳ ದರನ್ನು ಹೆಚ್ಚಿಸಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ನಿವೇಶನ ಖರೀದಿಸಿ ಸಣ್ಣ ಕೈಗಾರಿಕ ಆರಂಭಿಸಲು ಉದ್ಯಮಿಗಳು ಮುಂದೆ ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹೀಗಾಗಿ ಖುದ್ದಾಗಿ ಕೆಲವು ಕೈಗಾರಿಕಾ ಪ್ರದೇಶಗಳಿಗೆ ತೆರಳಿ ಪರಿಶೀಲಿಸುತ್ತಿದ್ದೇನೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುವುದು. ನಿವೇಶನದ ದರವನ್ನು ಹೆಚ್ಚಿಸುವಂತೆ ವರದಿ ಕೊಟ್ಟಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಅನಗತ್ಯವಾಗಿ ಒಂದು ಅಡಿಯಷ್ಟು ದಪ್ಪದ ಕಾಂಕ್ರೀಟ್‌ ರಸ್ತೆ, ಚರಂಡಿಯನ್ನು ಮಾಡಲಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ₹ 500 ಕೋಟಿಗೂ ಹೆಚ್ಚು ನಷ್ಟವಾಗಿರಬಹುದು. ಭೂಮಿ ಅಭಿವೃದ್ಧಿ ವೆಚ್ಚವನ್ನು ಕಡಿಮೆಗೊಳಿಸಿ ಸಣ್ಣ ಕೈಗಾರಿಕೆ ಆರಂಭಿಸುವವರಿಗೆ ನಿವೇಶನ ಖರೀದಿಸಲು ಅನುಕೂಲವಾಗುವಂತೆ ಮಾಡಬೇಕು’ ಎಂದು ಸಚಿವರು ಸೂಚಿಸಿದರು.

‘ಕೆಲವೆಡೆ 20 ವರ್ಷಗಳಿಂದ ಸಣ್ಣ ಕೈಗಾರಿಕೆಗಳಿಗೆ ನಿವೇಶನದ ಸೇಲ್‌ ಡೀಡ್‌ ಮಾಡಿಕೊಟ್ಟಿಲ್ಲ. ಜಿಲ್ಲಾಧಿಕಾರಿಗಳು ಏಕಗವಾಕ್ಷಿ ಸಭೆಯ ಮೂಲಕ ಆದ್ಯತೆ ಮೇಲೆ ಸೇಲ್‌ ಡೀಡ್‌ ಮಾಡಿಕೊಡಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು