ರಂಗಭೂಮಿ ಶಾಲಾ ಪಠ್ಯದ ಭಾಗವಾಗಲಿ

7
‘ರಂಗತೇರು’ ನಾಟಕೋತ್ಸವಕ್ಕೆ ಚಾಲನೆ ನೀಡಿದ ರಂಗಕರ್ಮಿ ಬಾ.ಮ. ಬಸವರಾಜಯ್ಯ

ರಂಗಭೂಮಿ ಶಾಲಾ ಪಠ್ಯದ ಭಾಗವಾಗಲಿ

Published:
Updated:
Deccan Herald

ದಾವಣಗೆರೆ: ‘ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗಭೂಮಿಗಳ ಬಗ್ಗೆ ಆಸಕ್ತಿ ಮೂಡಿಸುವಂತಹ ಪಠ್ಯಕ್ರಮ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲದೇ ಇರುವುದರಿಂದಲೇ ಪ್ರಮುಖವಾಗಿ ರಂಗಭೂಮಿ ಕ್ಷೀಣಿಸುತ್ತಿದೆ’ ಎಂದು ರಂಗಕರ್ಮಿ ಬಾ.ಮ. ಬಸವರಾಜಯ್ಯ ಅಭಿಪ್ರಾಯಪಟ್ಟರು.

ಶಿವಮೊಗ್ಗ ರಂಗಾಯಣವು ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ‘ರಂಗತೇರು’ ನಾಟಕೋತ್ಸವವನ್ನು ಡೋಲು ಬಾರಿಸುವ ಮೂಲಕ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಹಂತ ಹಂತವಾಗಿ ವೃತ್ತಿ ರಂಗಭೂಮಿ ಕ್ಷೀಣಿಸುತ್ತಿದೆ. ಹೊಸ ರಂಗ ಕಲೆಯ ಮೇಲೂ ಆಸಕ್ತಿ ಕಡಿಮೆಯಾಗುತ್ತಿದೆ. ಇದಕ್ಕೆ ಸಿನಿಮಾ, ಟಿವಿಯೇ ಪ್ರಮುಖ ಕಾರಣ ಎನ್ನುತ್ತಾರೆ. ಆದರೆ, ಇದಕ್ಕಿಂತಲೂ ಮುಖ್ಯವಾಗಿ ನಮ್ಮ ವಿದ್ಯಾಭ್ಯಾಸ ಕ್ರಮದಲ್ಲಿ ಇದನ್ನು ಅಳವಡಿಸದೇ ಇರುವುದಾಗಿದೆ’ ಎಂದರು.

ಪ್ರೌಢಶಾಲಾ ಹಂತದಲ್ಲಿ ವೃತ್ತಿ ರಂಗಭೂಮಿ ಬಗ್ಗೆ ತರಬೇತಿ ನೀಡಲು ಆರಂಭಿಸಬೇಕು. ತರಬೇತಿ ನೀಡಲು ವೃತ್ತಿಪರ ರಂಗಕರ್ಮಿಗಳನ್ನು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದರೂ ಆ ಕೆಲಸ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಬೆಂಗಳೂರಿನಲ್ಲಿ ರಂಗಭೂಮಿ ಹೊಸ ಸೆಲೆ ಪಡೆಯುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರಂಗಭೂಮಿ ಸ್ವಲ್ಪ ಮಟ್ಟಿಗೆ ಇನ್ನೂ ಜನಪ್ರಿಯತೆ ಉಳಿಸಿಕೊಂಡಿದೆ. ಹೀಗಾಗಿ ದಾವಣಗೆರೆಯಲ್ಲೂ ನಾವು ಮತ್ತೆ ರಂಗಭೂಮಿಗೆ ವೈಭವ ತಂದುಕೊಡುವ ಅನಿವಾರ್ಯತೆ ಇದೆ’ ಎಂದು ಅಭಿಪ್ರಾಯಪಟ್ಟರು.

‘ರಂಗಾಯಣದ ಹುಟ್ಟಿಗೆ ಕಾರಣರಾದವರು ರಂಗಭೂಮಿ ಭೀಷ್ಮರಾಗಿದ್ದ ಬಿ.ವಿ. ಕಾರಂತರು. ಅವರು ದಾವಣಗೆರೆಗೆ ಬಂದು ಹಲವು ಕಾರ್ಯಕ್ರಮಗಳನ್ನು ನೀಡಿದ್ದರು. ನಾಟಕ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಕೊಂಡಜ್ಜಿಯನ್ನು ದಾವಣಗೆರೆ ಜನರಿಗೆ ಪರಿಚಯಿಸಿದ್ದರು. 70ರ ದಶಕದಲ್ಲಿ ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ವೈಭವದಿಂದ ಕೂಡಿತ್ತು. ಮೂರು– ನಾಲ್ಕು ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ನಾಟಕ ನೋಡಿ ರಾತ್ರಿ ನಡೆದುಕೊಂಡು ಮನೆಗೆ ತೆರಳುತ್ತಿದ್ದೆವು’ ಎಂದು ಅವರು ಸ್ಮರಿಸಿದರು.

ಕರ್ನಾಟಕ ರಂಗ ಸಮಾಜದ ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ಸದಸ್ಯ ಮಲ್ಲಿಕಾರ್ಜುನ ಕಡಕೋಳ, ‘ಬಿ.ವಿ. ಕಾರಂತರು ಸಮಗ್ರ ರಂಗಭೂಮಿಯ ಕನಸುಗಾರರಾಗಿದ್ದರು. ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದ ಅವರು ಸಮಗ್ರತೆ ದೃಷ್ಟಿಯಿಂದ ರಂಗಾಯಣವನ್ನು ಕಟ್ಟಿದ್ದಾರೆ. ಜನರ ನಡುವಿನಿಂದ ಥಿಯೇಟರ್‌ ಹುಟ್ಟಿಕೊಂಡಿದೆ. 30 ವರ್ಷಗಳ ಹಿಂದೆ ಮೈಸೂರಿನಲ್ಲಿ ಆರಂಭಗೊಂಡ ರಂಗಾಯಣ
ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ‘ಮೊದಲು ರಂಗಾಯಣ ಮೈಸೂರಿಗೆ ಮಾತ್ರಸೀಮಿತವಾಗಿತ್ತು. ಇಂದು ನಾಲ್ಕು ರಂಗಾಯಣ ಕಾರ್ಯನಿರ್ವಹಿಸುತ್ತಿದೆ. ಈಗ ಹೊಸ ಹೊಸ ನಾಟಕಗಳನ್ನು ರಂಗಕ್ಕೆ ತಂದು ವಿಶಾಲ ಕರ್ನಾಟಕದಲ್ಲಿ ಪ್ರದರ್ಶನ ನೀಡುತ್ತಿದೆ. ಇಲಾಖೆಯು ನಾಟಕ ಅಕಾಡೆಮಿ ಮೂಲಕವಿಶೇಷ ಅನುದಾನ ನೀಡಿ, ರಂಗಕಲೆಯನ್ನು ಪೋಷಿಸುತ್ತಿದೆ’ ಎಂದು ಹೇಳಿದರು.

ರಂಗಕರ್ಮಿ ಸಿದ್ಧರಾಜು ಎನ್‌.ಎಸ್‌. ಸ್ವಾಗತಿಸಿದರು. ಸಂಧ್ಯಾ ಸುರೇಶ್‌ ನಿರೂಪಿಸಿದರು.

ಮೋಹನ್‌ ರಾಕೇಶ್‌ ರಚಿಸಿದ, ಸಿದ್ಧಲಿಂಗ ಪಟ್ಟಣಶೆಟ್ಟಿ ಕನ್ನಡಕ್ಕೆ ಅನುವಾದಿಸಿದ ‘ಆಷಾಡದ ಒಂದು ದಿನ’ ನಾಟಕವನ್ನು ಡಾ. ಎಂ. ಗಣೇಶ್‌ ನಿರ್ದೇಶನದಲ್ಲಿ ರಂಗಾಯಣದ ಕಲಾವಿದರು ಪ್ರದರ್ಶಿಸಿದರು.

ತಿರುಗಾಟಕ್ಕೆ ಹೊಸ ನಾಟಕ ಬಳಸಿ

‘ರಂಗಾಯಣದಂತಹ ವೃತ್ತಿಪರ ರಂಗ ತಂಡವು ಈಗಲೂ ಹಳೆಯ ಮತ್ತು ಅನುವಾದಿತ ನಾಟಕಗಳನ್ನು ಹೆಚ್ಚು ಅಳವಡಿಸಿಕೊಂಡು ತಿರುಗಾಟಕ್ಕೆ ತರುತ್ತಿರುವುದು ಸರಿಯಲ್ಲ’ ಎಂದು ಬಾ.ಮ. ಬಸವರಾಜಯ್ಯ ಅಭಿಪ್ರಾಯಪಟ್ಟರು.

‘ನಮ್ಮಲ್ಲಿ ಲೇಖಕರ, ನಾಟಕಕಾರರ ಕೊರತೆ ಇಲ್ಲ.ಹಲವು ಒಳ್ಳೆಯ ನಾಟಕಗಳು ಬರುತ್ತಿವೆ. ಹೊಸ ಹೊಸನಾಟಕಗಳನ್ನು ಅಳವಡಿಸಿ ಕೊಂಡು ಉದಯೋನ್ಮುಖ ನಾಟಕಕಾರರನ್ನು ಪರಿಚಯಿಸಬೇಕು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !