ಗುರುವಾರ , ನವೆಂಬರ್ 21, 2019
20 °C

ಏರ್‌ಪೋರ್ಟ್‌ಗಿಂತ ಸುಂದರ ರೈಲು ನಿಲ್ದಾಣ ನಿರ್ಮಾಣ: ಸಚಿವ ಸುರೇಶ ಅಂಗಡಿ

Published:
Updated:
Prajavani

ದಾವಣಗೆರೆ: ಇಲ್ಲಿ ಏರ್‌ಪೋರ್ಟ್‌ಗಿಂತ ಸುಂದರವಾದ ರೈಲು ನಿಲ್ದಾಣ ನಿರ್ಮಾಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಕೊಟ್ಟೂರು–ಹೊಸಪೇಟೆ ರೈಲಿಗೆ ಚಾಲನೆ ನೀಡಿ ಅದೇ ರೈಲಿನಲ್ಲಿ ಬಂದು ದಾವಣಗೆರೆಯಲ್ಲಿ ಇಳಿದ ಸಚಿವರು ಇಲ್ಲಿನ ಕಾಮಗಾರಿಗಳನ್ನು ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು.

ಇಲ್ಲಿನ ಜನರಿಗೆ ಅನುಕೂಲ ಆಗುವಂಥ ಅಂಡರ್‌ಪಾಸ್‌, ಆರ್‌ಒಬಿ ವ್ಯವಸ್ಥೆ ಮಾಡುತ್ತಿದ್ದೇವೆ. ರೈಲು ನಿಲ್ದಾಣದ ನಕ್ಷೆಯನ್ನು ಜಿಎಂ ಎ.ಕೆ. ಸಿಂಗ್‌ ಮತ್ತು  ಮೈಸೂರು ಡಿಆರ್‌ಎಂ ಅಪರ್ಣ ಗರ್ಗ್‌ ತಯಾರಿಸಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಕಾಳಜಿ ವಹಿಸಿ ಇದರ ಬೆನ್ನತ್ತಿದ್ದಾರೆ. ಕೆಲಸಗಳು ನಡೆಯುತ್ತಿವೆ. ಕೆಲವು ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಿಕೊಂಡು ವಾಣಿಜ್ಯನಗರಿಯಾದ ಇಲ್ಲಿಗೆ ಎಲ್ಲ ಸವಲತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

‘ರೈಲು ಅಂದರೆ ಬಡವರು, ರೈತರು, ವಿದ್ಯಾರ್ಥಿಗಳು ಓಡಾಡುತ್ತಾರೆ. ಅವರಿಗೆ ಸೌಲಭ್ಯ ನೀಡಬೇಕು. ಸೇವಾ ಸರ್ವಿಸ್‌ ಎಂದು ಯಶವಂತ್‌ಪುರ–ತಿಪುಟೂರು ಮಧ್ಯೆ ಆರಂಭಿಸಿದ್ದೇವೆ. ಸಣ್ಣ ನಗರಗಳಿಂದ ದೊಡ್ಡ ನಗರಕ್ಕೆ ಓಡಾಡಲು ಅನುಕೂಲ ಮಾಡಿ ಕೊಡುತ್ತೇವೆ’ ಎಂದು ಹೇಳಿದರು.

ನಿರ್ಧಾರವಾಗದ ಅಶೋಕ ಮೇಲ್ಸೇತುವೆ
ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅಶೋಕ ರಸ್ತೆಗೆ ಹೋಗಿ ರೈಲು ಹಳಿ ವೀಕ್ಷಿಸಿದರು. ಆದರೆ ಮೇಲ್ಸೇತುವೆ ಬೇಕು ಅಥವಾ ಬೇಡ ಎನ್ನುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ.

ಭೂಸ್ವಾಧೀನ ಸಮಸ್ಯೆ ಇದೆ. ಅದನ್ನು ಹೇಗೆ ಪರಿಹರಿಸುವುದು ಎಂಬ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಣ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸುರಕ್ಷತೆ, ಸಮಯ ಪಾಲನೆ, ಸ್ವಚ್ಛತೆ ಸೇರಿ ರೈಲ್ವೆಯಲ್ಲಿ ಆಗಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಮುಂದಿನ ಹತ್ತು ವರ್ಷಗಳಲ್ಲಿ ₹ 50 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದರು.

25 ವರ್ಷಗಳ ಹೋರಾಟದ ಫಲವಾಗಿ ಕೊಟ್ಟೂರು–ಹೊಸಪೇಟೆ ರೈಲು ಆರಂಭಗೊಂಡಿದೆ. ಅಲ್ಲಲ್ಲಿ ಸ್ವಾಗತ ಮಾಡಲು ಜನ ನಿಂತಿದ್ದರಿಂದ ಇಲ್ಲಿಗೆ ಬರುವಾಗ ತಡವಾಯಿತು ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ಜಿ.ಎಂ. ಎ.ಕೆ. ಸಿಂಗ್‌ ಮತ್ತು ಮೈಸೂರು ಡಿಆರ್‌ಎಂ ಅಪರ್ಣಾ ಗರ್ಗ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಮಂತರಾಯ, ತಹಶೀಲ್ದಾರ್‌ ಸಂತೋಷ್‌ ಕುಮಾರ್‌, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಅವರೂ ಇದ್ದರು.

ಎ.ಸಿ. ಕಚೇರಿ ತೆಗೆಯಬೇಕು
ದಾವಣಗೆರೆ ವಾಣಿಜ್ಯ ನಗರಿಯಾಗಿದೆ. ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕಿದ್ದರೆ, ನಿಲ್ದಾಣ ವಿಸ್ತರಿಸಿ ಉತ್ತಮವಾಗಿ ನಿರ್ಮಿಸಬೇಕಿದ್ದರೆ ಎ.ಸಿ. ಕಚೇರಿಯನ್ನು ತೆಗೆಯಬೇಕು. ಈಗಿರುವಂತೆ ಇರುವುದಾದರೆ ಹಾಗೇ ಇರಲಿ. ಒಳ್ಳೆಯದು ಮಾಡಬೇಕು ಎಂದು ಅನ್ನಿಸಿದರೆ ಈ ಬಗ್ಗೆ ಸ್ಥಳೀಯವಾಗಿ ನಿರ್ಧಾರ ಕೈಗೊಂಡು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸಚಿವ ಸುರೇಶ್‌ ಅಂಗಡಿ ಮತ್ತು ಸಂಸದ ಜಿ.ಎಂ. ಸಿದ್ದೇಶ್ವರ ಸೂಚಿಸಿದರು.

ಪ್ರತಿಕ್ರಿಯಿಸಿ (+)