ಬೀಡಿ ಕಾರ್ಮಿಕರಿಗೆ ಸೌಲಭ್ಯ ವಂಚನೆ: ಪ್ರತಿಭಟನೆ

7

ಬೀಡಿ ಕಾರ್ಮಿಕರಿಗೆ ಸೌಲಭ್ಯ ವಂಚನೆ: ಪ್ರತಿಭಟನೆ

Published:
Updated:

ದಾವಣಗೆರೆ: ಬೀಡಿ ಕಂಪನಿ ಮಾಲೀಕರು ಕನಿಷ್ಠ ಕೂಲಿ ₹ 220 ನೀಡದೇ ವಂಚಿಸುತ್ತಿರುವುದನ್ನು ಖಂಡಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹರಿಹರ ತಾಲ್ಲೂಕು ಬೀಡಿ ಕೆಲಸಗಾರರ ಸಂಘ (ಸಿಐಟಿಯು) ಬುಧವಾರ ಕಾರ್ಮಿಕ ಸಹಾಯಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಬೀಡಿಕಾರ್ಮಿಕರಿಗೆ ಸೌಲಭ್ಯಗಳಿಂದ ವಂಚಿಸಲು ಕೆಲವು ಕಂಪನಿಗಳು ಸೇಲ್‌– ಪರ್ಚೇಸ್‌ ವ್ಯವಹಾರ ನಡೆಸುತ್ತಿರುವುದನ್ನು ಕೇಂದ್ರ ಸರ್ಕಾರ ಕೂಡಲೇ ನಿಲ್ಲಿಸಬೇಕು. ಒಂದು ಕೆ.ಜಿ. ತಂಬಾಕಿನ ಬೀಡಿ ಉತ್ಪಾದನೆಗೆ 5 ಕಾರ್ಮಿಕರನ್ನು ಕಾಯಂಗೊಳಿಸಬೇಕು. ಬೀಡಿ ಕಾರ್ಮಿಕರ ನೋಂದಣಿಯನ್ನು ಬೀಡಿ ಕಾರ್ಮಿಕರ ಆಸ್ಪತ್ರೆ ಮೂಲಕವೇ ಕೇಂದ್ರ ಸರ್ಕಾರ ಮಾಡಿಸುತ್ತಿದೆ. ಮೂರ್ನಾಲ್ಕು ಜಿಲ್ಲೆಗಳಿಗೆ ಒಂದರಂತೆ ಈ ಆಸ್ಪತ್ರೆಗಳು ಇರುವುದರಿಂದ ನೋಂದಣಿಗೆ ನೂರಾರು ಕಿಲೋಮೀಟರ್‌ ದೂರ ಸಂಚರಿಸಬೇಕಾಗಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

2015ರ ತುಟ್ಟಿಭತ್ಯೆ ₹ 13.75 ನೀಡುವುದರ ವಿರುದ್ಧ ಬೀಡಿ ಕಂಪನಿ ಮಾಲೀಕರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಕೂಡಲೇ ಪ್ರಕರಣ ಹಿಂತೆಗೆದುಕೊಂಡು ತುಟ್ಟಿಭತ್ಯೆ ಮತ್ತು ಬಾಕಿ ನೀಡಬೇಕು. ಧೂಮಪಾನ ನಿಷೇಧ ಕಾಯ್ದೆ ಜಾರಿಗೊಳಿಸುತ್ತಿರುವುದರಿಂದ ಬೀಡಿಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಪರ್ಯಾಯ ಉದ್ಯೋಗ ನೀಡಬೇಕು. ಅಥವಾ ಪ್ರತಿ ತಿಂಗಳು ₹ 5,000 ಪಿಂಚಣಿ, ₹ 5ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬೀಡಿ ಕಾರ್ಮಿಕರಿಗೆ ನಿವೇಶನ ನೋಂದಣಿ ಪರವಾನಗಿ ನೀಡಬೇಕು. ವಸತಿ ಸಾಲ ಸೌಲಭ್ಯ ಸರಳಗೊಳಿಸಬೇಕು. ಬೀಡಿ ಕಾರ್ಮಿಕರ ಅರ್ಜಿ ಪ್ರತ್ಯೇಕವಾಗಿ ಸ್ವೀಕರಿಸಿ ವಸತಿ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕ ಪಿಂಚಣಿ ₹ 3,000ಕ್ಕೆ ಹೆಚ್ಚಿಸಬೇಕು. ರಾಷ್ಟ್ರೀಯ ಸಮಾನ ಕೂಲಿ ಸಾವಿರ ಬೀಡಿಗೆ ₹ 300 ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಟೆಲಿಫೋನ್‌ ಎಕ್ಸ್‌ಚೇಂಜ್‌ ಕಚೇರಿಯಿಂದ ಕಾರ್ಮಿಕರ ಇಲಾಖೆ ಕಚೇರಿವರೆಗೆ ಮೆರವಣಿಗೆ ನಡೆಸಿ ಕಾರ್ಮಿಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಉಬೇದುಲ್ಲಾ ಹಖಾನಿ, ಪದಾಧಿಕಾರಿಗಳಾದ ಅಶ್ಫಕ್‌ ಅಹ್ಮದ್‌, ಸೈಯದ್‌ ಮುಜೀಬ್‌, ಎಚ್‌. ನಝೀರ್‌ಖಾನ್‌, ಸೈಯದ್‌ ಫಜುರುದ್ದೀನ್‌, ಆರ್‌. ಬಾಬಾಜಾನ್‌, ಜಮೀನಾಬಾಬು, ಪರ್ವಿನಬಾನು, ಯೂಸುಫ್‌ ಸಾಬ್‌, ಕೆ.ಎಲ್‌. ಭಟ್‌ ಅವರೂ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !