ಅರಸು ಗುರುತಿಸಿದರು, ಸಿದ್ದರಾಮಯ್ಯ ಬೆಳೆಸಿದರು

7
ಬೀರೇಶ್ವರ ವಿದ್ಯಾವರ್ಧಕ ಸಂಘದ ವಸತಿ ಶಾಲೆ ಶಂಕುಸ್ಥಾಪನಾ ಸಮಾರಂಭದಲ್ಲಿ ಸಚಿವ ಪುಟ್ಟರಂಗಶೆಟ್ಟಿ

ಅರಸು ಗುರುತಿಸಿದರು, ಸಿದ್ದರಾಮಯ್ಯ ಬೆಳೆಸಿದರು

Published:
Updated:
Deccan Herald

ದಾವಣಗೆರೆ: ದೇವರಾಜ ಅರಸು ಹಿಂದುಳಿದ ಸಮಾಜಗಳನ್ನು ಗುರುತಿಸಿದರೆ, ಆ ಸಮುದಾಯಗಳನ್ನು ಬೆಳೆಸಲು ಸಿದ್ದರಾಮಯ್ಯ ಶ್ರಮಿಸಿದರು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೀರೇಶ್ವರ ವಿದ್ಯಾವರ್ಧಕ ಸಂಘ, ಜಿಲ್ಲಾ ಕುರುಬರ ಸಂಘ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ವಸತಿನಿಲಯದ ಶಂಕುಸ್ಥಾಪನೆ, ಪ್ರತಿಭಾ ಪುರಸ್ಕಾರ ಮತ್ತು ನೂತನ ಸಚಿವರು, ಶಾಸಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಸಮುದಾಯಗಳ ಪ್ರಗತಿಗೆ ಸಿದ್ದರಾಮಯ್ಯ ಶ್ರಮಿಸಿದ್ದಾರೆ. ಈ ಮೊದಲು ಸಮಾಜ ಕಲ್ಯಾಣ ಇಲಾಖೆ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಮುದಾಯಭವನ ನಿರ್ಮಾಣಕ್ಕೆ ಮಾತ್ರ ಅವಕಾಶವಿತ್ತು. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣಕ್ಕೂ ಕ್ರಮ ಕೈಗೊಂಡರು. 2,000ಕ್ಕೂ ಹೆಚ್ಚು ಸಮುದಾಯ ಭವನ ನಿರ್ಮಾಣಕ್ಕೆ, ₹ 2,138 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು ಎಂದು ತಿಳಿಸಿದರು.

ಸಮುದಾಯ ಭವನಗಳ ನಿರ್ಮಾಣಕ್ಕೆ ನೀಡಲು ಇಲಾಖೆಗೆ ₹ 35 ಕೋಟಿ ಅನುದಾನ ಇದೆ. ಇದನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಈ ಸಾಲಿನಿಂದ ₹ 3.5 ಕೋಟಿ ಅನುದಾನ ನೀಡಿ, ಹೆಚ್ಚುವರಿಯಾಗಿ 2,500 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ‘ಸಮಾಜ ಮುಂದೆ ಬರಬೇಕಾದರೆ ಶಿಕ್ಷಣ ಕ್ರಾಂತಿ ಆಗಬೇಕು. ಈ ದೃಷ್ಟಿಯಲ್ಲಿ ರಾಜ್ಯದ ಪ್ರಮುಖ ಭಾಗವಾದ ದಾವಣಗೆರೆಯಲ್ಲಿ ಶಾಲೆ ಆರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಹೀಗಾಗಿ, ಶಾಲೆ ಸ್ಥಾಪನೆಗೆ ಬೇಕಾದ ನೆರವು ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಸಮಾಜದ ಬೆಳವಣಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದರು.

ಮಾಜಿ ಸಚಿವ ಎಚ್‌. ಆಂಜನೇಯ, ‘ಸಿದ್ದರಾಮಯ್ಯ ಎಲ್ಲಾ ಸಮುದಾಯಗಳಿಗೂ ಅನುದಾನ ನೀಡಿದ್ದಾರೆ. ಹರಿಹರದ ಪಂಚಮಸಾಲಿ ಪೀಠಕ್ಕೆ ₹ 1 ಕೋಟಿ, ಮುರುಘಾಮಠಕ್ಕೆ ಬಸವ ಪ್ರತಿಮೆ ಸ್ಥಾಪನೆಗೆ ₹ 10 ಕೋಟಿ, ಆನಗೋಡಿನಲ್ಲಿ ಮರುಳಸಿದ್ಧೇಶ್ವರ ಸಭಾಭವನ ನಿರ್ಮಾಣಕ್ಕೆ ₹ 1 ಕೋಟಿ ನೀಡಿದ್ದಾರೆ. ಎಲ್ಲಾ ಸಮುದಾಯಗಳಿಗೆ ಅನುದಾನ ನೀಡುವಂತೆ ನನ್ನ ಇಲಾಖೆಗೆ ₹ 400 ಕೋಟಿ ಕೊಟ್ಟಿದ್ದರು’ ಎಂದು ತಿಳಿಸಿದರು.

ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಗೋಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲೆ ನಿರ್ಮಾಣಕ್ಕೆ ₹ 10 ಕೋಟಿ ಬೇಕಾಗಬಹುದು. ಸರ್ಕಾರ ಕನಿಷ್ಠ ₹ 5 ಕೋಟಿ ನೀಡಬೇಕು ಎಂದು ಮುಖಂಡ ಪಿ. ರಾಜ್‌ಕುಮಾರ್ ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ನೂತನ ಶಾಸಕರು, ಸಚಿವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಮಾಜದ ಹಿರಿಯರನ್ನು ಗೌರವಿಸಲಾಯಿತು.

ಸಮಾಜದ ಹಿರಿಯ ಮುಖಂಡ ಕೆ. ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಸಚಿವ ಆರ್. ಶಂಕರ್‌, ವಿಧಾನ ಪರಿಷತ್‌ ಸದಸ್ಯ ಮೋಹನ್‌ ಕೊಂಡಜ್ಜಿ, ಮಾಜಿ ಸಚಿವ ಎಚ್‌.ಎಂ. ರೇವಣ್ಣ, ಮೇಯರ್‌ ಶೋಭಾ ಪಲ್ಲಾಗಟ್ಟೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್. ಜಯಶೀಲಾ, ಸದಸ್ಯರಾದ ಕೆ.ಎಸ್‌. ಬಸವಂತಪ್ಪ, ಎಂ.ಆರ್‌. ಮಹೇಶ್‌, ಮುಖಂಡರಾದ ಉದಯಶಂಕರ್‌ ಒಡೆಯರ್‌, ನಾ. ಲೋಕೇಶ್‌ ಒಡೆಯರ್, ಬಳ್ಳಾರಿ ಷಣ್ಮುಖಪ್ಪ, ಕೆ.ಪಿ. ಸಿದ್ದಬಸಪ್ಪ, ಬಿ. ದಿಳ್ಯಪ್ಪ, ಸಿದ್ದಪ್ಪ ಅಡಾಣಿ, ನಗರದ ಮಹದೇವಪ್ಪ, ಬಿ.ಎಂ. ಸತೀಶ್‌ ಅವರೂ ಇದ್ದರು.

‘ಸಚಿವರಿಗೆ ಸ್ವಾತಂತ್ರ್ಯ ಕೊಟ್ಟಿದ್ದರು’

ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟೆಲ್ಲಾ ಯೋಜನೆಗಳನ್ನು ನೀಡಿದರು. ಸಚಿವರಿಗೆ ಸ್ವಾತಂತ್ರ್ಯ ಕೊಟ್ಟು ಕೆಲಸ ಮಾಡಿಸಿದರು. ಆದರೆ, ಅನ್ನ ನೀಡಿದ ಮುಖ್ಯಮಂತ್ರಿಯನ್ನೇ ಜನ ಸೋಲಿಸಿದರು. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಎಷ್ಟೆಲ್ಲಾ ಅಭಿವೃದ್ಧಿ ಮಾಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರ ಕಾಲ ಸುವರ್ಣಯುಗ. ಅವರು ಮತ್ತೆ ಮುಖ್ಯಮಂತ್ರಿ ಆಗಿದ್ದರೆ, ಈ ರಾಜ್ಯ ಹೇಗಿರುತ್ತಿತ್ತು ಎಂಬುದನ್ನು ಜನ ನೋಡಬೇಕಿತ್ತು ಎಂದು ಎಚ್‌. ಆಂಜನೇಯ ಹೇಳಿದರು.

‘ಸಚಿವರನ್ನು ಹಿಡಿತದಲ್ಲಿಟ್ಟುಕೊಂಡಿದ್ದರೆ ಗೆಲ್ಲುತ್ತಿದ್ದರು’

‘ಜನ ಒಗ್ಗಟ್ಟಿನಿಂದ ಮತ ಕೊಡಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಅವಕಾಶವನ್ನು ನಾವೂ ನೀವು ಕಳೆದುಕೊಂಡೆವು. ಮಂತ್ರಿಗಳನ್ನು ಮುಖ್ಯಮಂತ್ರಿ ಹತೋಟಿಯಲ್ಲಿ ಇಟ್ಟಿರಲಿಲ್ಲ. ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರೆ ಸಿದ್ದರಾಮಯ್ಯ ಗೆಲ್ಲುತ್ತಿದ್ದರು’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

* * *

ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾದರೆ ಸಾಕು ಎಂದುಕೊಂಡಿದ್ದೆ. ಅವರು ನನ್ನನ್ನು ಸಚಿವನನ್ನಾಗಿ ಮಾಡಿದರು. ಹೀಗಾಗಿ, ನನ್ನ ಪಾಲಿಗೆ ಸಿದ್ದರಾಮಯ್ಯ ಈಗಲೂ ಮುಖ್ಯಮಂತ್ರಿ 
ಪುಟ್ಟರಂಗಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !