ವಿಶ್ವದ ಮೊದಲ ಕೃಷಿ ಮಹಿಳೆಯಿಂದ ಆರಂಭ: ಡಾ. ಎಂ.ಜಿ. ಈಶ್ವರಪ್ಪ ಪ್ರತಿಪಾದನೆ

7
ಶಿಕ್ಷಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ವಿಶ್ವದ ಮೊದಲ ಕೃಷಿ ಮಹಿಳೆಯಿಂದ ಆರಂಭ: ಡಾ. ಎಂ.ಜಿ. ಈಶ್ವರಪ್ಪ ಪ್ರತಿಪಾದನೆ

Published:
Updated:
Deccan Herald

ದಾವಣಗೆರೆ: ಜಗತ್ತಿನಲ್ಲಿ ಮೊದಲು ಬೀಜ ಬಿತ್ತಿ ಕೃಷಿ ಮಾಡಿದವರು ಪುರುಷರಲ್ಲ, ಸ್ತ್ರೀಯರು ಎಂದು ಜನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಪ್ರತಿಪಾದಿಸಿದರು.

ಇಲ್ಲಿನ ವಿದ್ಯಾನಗರ ವಿನಾಯಕ ಬಡಾವಣೆಯಲ್ಲಿರುವ ವಿನೂತನ ಮಹಿಳಾ ಸಮಾಜದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗದಲ್ಲಿ ಕುವೆಂಪು ಕನ್ನಡಭವನದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಪಶುಪಾಲನೆ ಮಾಡುವ ಕಾಲದಲ್ಲಿ ಅವುಗಳನ್ನು ಮೇಯಿಸಲು ಪುರುಷ ಊರಿಂದ ಊರಿಗೆ ಕರೆದೊಯ್ಯುತ್ತಿದ್ದ. ಮಹಿಳೆ ತಾನು ವಾಸ ಇರುವ ಸುತ್ತಮುತ್ತಲಲ್ಲಿ ತನಗೆ ಬೇಕಾದ ಹಣ್ಣುಗಳನ್ನು ಬೆಳೆಯಲು ಬೀಜ ಬಿತ್ತುತ್ತಿದ್ದಳು. ಇದಕ್ಕೆ ಇನ್ನೊಂದು ಕಾರಣವೂ ಇದೆ. ತಲೆ ಎತ್ತಿ ಮಾಡುವ ಕೆಲಸಗಳನ್ನು ಮಾಡುವುದು ತನ್ನ ಹೆಮ್ಮೆ ಎಂದು ಪುರುಷ ಪ್ರಧಾನ ವ್ಯವಸ್ಥೆ ತಿಳಿದಿದ್ದರಿಂದ ಆತ ಬಗ್ಗಿ ಕೆಲಸ ಮಾಡಲು ತಯಾರಿರಲಿಲ್ಲ. ಬಾಗಿ ಗಿಡ ನೆಡುವ, ಬೀಜ ಹಾಕುವ ಕೆಲಸವನ್ನು ಮಹಿಳೆಯೇ ಮಾಡುತ್ತಿದ್ದಳು. ಕಾಯಿ, ಹಣ್ಣು ಕೊಯ್ಯಲು ಮರಕ್ಕೆ ಹತ್ತುವ ಕೆಲಸವನ್ನು ಮಾತ್ರ ಪುರುಷ ಮಾಡುತ್ತಿದ್ದ ಎಂದು ವಿವರಿಸಿದರು.

ವಿದ್ಯಾರ್ಥಿಗಳ ಮೇಲೆ ಪ್ರಾಥಮಿಕ ಶಾಲೆಯ ಶಿಕ್ಷಕರು ಬೀರುವ ಪ್ರಭಾವ ದೊಡ್ಡದರು. ಹೈಸ್ಕೂಲ್‌, ಕಾಲೇಜಿಗೆ ಸೇರುವ ಹೊತ್ತಿಗೆ ಶಿಕ್ಷಕರ ಜತೆಗಿನ ಬಾಂಧವ್ಯ ಕಡಿಮೆಯಾಗಿರುತ್ತದೆ. ಹಾಗಾಗಿ ಮಕ್ಕಳು ಮಾನಸಿಕವಾಗಿ ಅರಳುವುದು, ಬೆಳೆಯುವುದು ಪ್ರಾಥಮಿಕ ಶಾಲಾ ಹಂತದಲ್ಲಿಯೇ. ಬದುಕಿನ ಮೊದಲ ಶಿಕ್ಷಕಿ ತಾಯಿ ಆದರೆ, ಎರಡನೆಯವರೇ ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ಹೇಳಿದರು.

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಕಾಲದಲ್ಲಿ ಒಂದು ಊರಿನಲ್ಲಿ ಶಾಲೆ ಇದ್ದರೆ ಅದು ಆ ಊರಿನ ಆಗುಹೋಗುಗಳನ್ನು ನಿಯಂತ್ರಿಸುವ ಸ್ಥಳವಾಗಿತ್ತು. ಶಿಕ್ಷಕ ಹೇಳಿದಂತೆ ಆ ಊರು ಕೇಳುತ್ತಿತ್ತು. ಈಗ ಶಾಲೆಗಳೂ, ಶಿಕ್ಷಕರೂ ಹಾಗೆ ಇಲ್ಲ ಎಂದು ತಿಳಿಸಿದರು.

 ಮಕ್ಕಳು ಒಳ್ಳೆಯದನ್ನು ಕಲಿಯುತ್ತವೆ. ಕೆಟ್ಟದ್ದನ್ನು ನಾವು ಕಲಿಸುತ್ತೇವೆ. ಮಗುವಿನ ನಡವಳಿಕೆ, ನಾಗರಿಕತೆ ಎಲ್ಲವೂ ಕಲಿಕೆಯಲ್ಲಿಯೇ ಅಡಗಿದೆ. ಶಿಕ್ಷಣ ಎಂದರೆ ಶಿಕ್ಷೆ ಮತ್ತು ಕಲಿಕೆಯಾಗಿತ್ತು. ಆದರೆ ಈಗ ಶಿಕ್ಷೆ ನೀಡದೆ ಕಲಿಸುವುದಕ್ಕೆ ಒತ್ತು ನೀಡಲಾಗುತ್ತಿದೆ. ತಾಯಿ, ಗುರು ನೀಡುವ ಶಿಕ್ಷೆ ಪೊಲೀಸ್‌ ಶಿಕ್ಷೆಯಲ್ಲ ಎಂಬುದು ಈಗಿನವರಿಗೆ ಅರ್ಥವಾಗುತ್ತಿಲ್ಲ ಎಂದು ವಿಷಾದಿಸಿದರು.

ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಿಕಾ ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌. ಎಸ್‌. ಮಂಜುನಾಥ ಕುರ್ಕಿ, ಪಾಲಿಕೆ ಸದಸ್ಯೆ ನಾಗರತ್ನಮ್ಮ ಉಪಸ್ಥಿತರಿದ್ದರು. ಭುವನೇಶ್ವರಿ ಚಂದ್ರಶೇಖರ್‌ ಸ್ವಾಗತಿಸಿದರು. ಲತಾ ಸತೀಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾ ಪಾಟೀಲ್‌ ವಂದಿಸಿದರು. ಇಂದಿರಾ ರಂಗನಾಥ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !