ಬುಧವಾರ, ನವೆಂಬರ್ 13, 2019
28 °C
ವಿಶ್ವ ಆಹಾರ, ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ ಉದ್ಘಾಟಿಸಿದ ಡಾ. ಶಾಂತಾಭಟ್‌

ಬೆಣ್ಣೆದೋಸೆ, ಮಸಾಲದೋಸೆಯೂ ಜಂಕ್‌ಫುಡ್‌

Published:
Updated:
Prajavani

ದಾವಣಗೆರೆ: ಸಾಫ್ಟ್‌ ಡ್ರಿಂಕ್‌, ಗೋಬಿ, ನೂಡಲ್ಸ್‌, ಪಾನಿಪೂರಿ, ಬಿಸ್ಕೆಟ್‌, ಬ್ರೆಡ್‌, ಬನ್‌, ರಸ್ಕ್‌ಗಳಷ್ಟೇ ಜಂಕ್‌ಫುಡ್‌ ಎಂದು ತಿಳಿದುಕೊಂಡಿದ್ದೇವೆ. ಬೆಣ್ಣೆದೋಸೆ, ಮಸಾಲ ದೋಸೆಗಳೂ ಜಂಕ್‌ಫುಡ್‌ ಎಂದು ವೈದ್ಯೆ ಡಾ. ಶಾಂತಾಭಟ್‌ ಹೇಳಿದರು.

ಕೃಷಿ ಇಲಾಖೆ, ಆತ್ಮಯೋಜನೆ, ಐಸಿಆರ್‌–ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ಬುಧವಾರ ಕೃಷಿ ತಂತ್ರಜ್ಞರ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿಶ್ವ ಆಹಾರ ದಿನಾಚರಣೆ ಮತ್ತು ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಸೇವಿಸುವ ಒಟ್ಟು ಆಹಾರದಲ್ಲಿ 10 ಭಾಗ ಮುಖ್ಯ ಆಹಾರವಾಗಿರಬೇಕು. ಅನ್ನ, ರೊಟ್ಟಿ, ಚಪಾತಿ, ರಾಗಿಮುದ್ದೆ ಇದರಲ್ಲಿ ಬರುತ್ತದೆ. 6 ಭಾಗದಷ್ಟು ತರಕಾರಿಗಳು, 5 ಭಾಗದಷ್ಟು ಹಣ್ಣು ಹಂಪಲು, 4 ಭಾಗದಷ್ಟು ಮಾಂಸಾಹಾರ, 3 ಭಾಗದಷ್ಟು ಹಾಲು, ಮೊಸರು, ಬೆಣ್ಣೆ, 2 ಭಾಗದಷ್ಟು ಎಣ್ಣೆ, ತುಪ್ಪ ಮುಂತಾದ ಜಿಡ್ಡಿನ ಪದಾರ್ಥ, ಒಂದು ಭಾಗದಷ್ಟು ಸಕ್ಕರೆ ಒಳಗೊಂಡಂತೆ ಸಿಹಿ ಇರಬೇಕು. ಆದರೆ ನಮ್ಮ ಆಹಾರ ಪದ್ಧತಿ ಉಲ್ಟಾ ಆಗಿಬಿಟ್ಟಿದೆ’ ಎಂದು ವಿಷಾದಿಸಿದರು.

‘ಪ್ರತಿ ದಿನ ಹಬ್ಬ ಅಥವಾ ಉಪವಾಸ ಎರಡೂ ಆಗಿರಬಾರದು. ಆಗ ಆರೋಗ್ಯವಂತರಾಗಿರುತ್ತೇವೆ. ಹಿಂದಿನವರು ಪಾಯಸ ಇನ್ನಿತರ ಸಿಹಿ ಖಾದ್ಯಗಳನ್ನು, ಮಿರ್ಚಿ ಇನ್ನಿತರ ಕರಿದ ತಿಂಡಿಗಳನ್ನು ಅಪರೂಪಕ್ಕೆ ಬರುವ ಹಬ್ಬ ಮತ್ತು ಮದುವೆ ಸಮಾರಂಭಗಳಲ್ಲಿ ಅಷ್ಟೇ ಸೇವಿಸುತ್ತಿದ್ದರು. ಈಗ ಪ್ರತಿದಿನ ಆಗಿಬಿಟ್ಟಿದೆ. ದಕ್ಷಿಣ ಭಾರತದ ಆಹಾರ ಶೈಲಿ ಜಗತ್ತಿನಲ್ಲಿಯೇ ಅತ್ಯಂತ ಆರೋಗ್ಯಕರ ಎಂದು ಗುರುತಿಸಲಾಗಿದೆ. ಆದರೆ ನಾವು ಅದನ್ನು ಮರೆಯುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಆಹಾರ ಪದ್ಧತಿ ಇನ್ನೂ ಹಳ್ಳಿಗಳಲ್ಲಿ ಉಳಿದಿವೆ. ಅದಕ್ಕೆ ಹಳ್ಳಿಗಳ ಜನ ಸ್ಥೂಲಕಾಯರಾಗದೇ ಆರೋಗ್ಯವಂತರಾಗಿ ಉಳಿದಿದ್ದಾರೆ. ಪಟ್ಟಣದ ಜನ ವಿಷಾಹಾರವೇ ಹೆಚ್ಚು ಸೇವಿಸುತ್ತಿದ್ದಾರೆ ಎಂದರು

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್‌. ದೇವರಾಜ್‌, ‘ವಿಶ್ವದಲ್ಲಿ ಮಾನವನ ಇತಿಹಾಸದಲ್ಲಿ 6000 ವೈವಿಧ್ಯವಾದ ಆಹಾರಗಳನ್ನು ಪ್ರಧಾನ ಆಹಾರವಾಗಿ ಬಳಸಲಾಗುತ್ತಿತ್ತು. ಈಗ 8–9 ಮುಖ್ಯ ಆಹಾರಗಳಷ್ಟೇ ಇವೆ. ನಾವು ಆಹಾರ ವೈವಿಧ್ಯವನ್ನು ಕಳೆದುಕೊಳ್ಳುವ ಜತೆಗೆ ಆರೋಗ್ಯವನ್ನೂ ಕಳೆದುಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ಅಕ್ಕಿ, ಗೋದಿ, ಮೆಕ್ಕೆಜೋಳ, ಸೋಯಬಿನ್‌, ಶೇಂಗಾ, ಸೂರ್ಯಕಾಂತಿ ಹೀಗೆ ಕೆಲವಷ್ಟೇ ಮುಖ್ಯ ಆಹಾರವಾಗಿ ಈಗ ಉಳಿದಿವೆ. ರಾಗಿ, ಬಿಳಿಜೋಳ ನಮ್ಮಲ್ಲಿ ನಿರ್ದಿಷ್ಟ ಪ್ರದೇಶ ಬಿಟ್ಟರೆ ಹೊರಗೆ ಇಲ್ಲ. ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಬೆಳೆಯಲು ರೈತರಿಗೆ ಸರ್ಕಾರ ಮತ್ತು ಸಮಾಜ ಪ್ರೋತ್ಸಾಹ ನೀಡಬೇಕು. ಆಹಾರ ಉತ್ಪಾದನೆ ಮಾಡುವ ರೈತರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ವರ್ಷಕ್ಕೆ 130 ಕೋಟಿ ಟನ್‌ ಆಹಾರವನ್ನು ವ್ಯರ್ಥ ಮಾಡುತ್ತಿದ್ದೇವೆ. ಇದು ಆಹಾರ ಉತ್ಪಾದನೆಯ ಮೂರನೇ ಒಂದು ಭಾಗದಷ್ಟು ಆಗಿದೆ. ಆಹಾರ ವ್ಯರ್ಥ ಮಾಡುವುದು ಅಪರಾಧ ಎಂಬುದನ್ನು ಜನರಿಗೆ ಅರ್ಥ ಮಾಡಿಸಿಕೊಡಬೇಕಿದೆ ಎಂದರು.

ಕೃಷಿ ಇಲಾಖೆ ಉಪನಿರ್ದೇಶಕ ಆರ್‌. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನ ಗೌಡ, ನಿವೃತ್ಯತ ಸಹಾಯಕ ಕೃಷಿ ನಿರ್ದೇಶಕರಾದ ಪ್ರಭಾಶಂಕರ್‌, ಅಜಗಣ್ಣ, ಬಿ.ಜಿ.ರುದ್ರಪ್ಪ ಉಪಸ್ಥಿತರಿದ್ದರು. ರೈತ ಮಹಿಳೆಯರಾದ ವೀಣಾ ಕುಮಾರಸ್ವಾಮಿ ಬಿಳಿಚೋಡು, ಸುಶೀಲಾಬಾಯಿ ಸಿದ್ಧನೂರು ತಾಂಡಾ ಅವರನ್ನು ಸನ್ಮಾನಿಸಲಾಯಿತು.

ಆತ್ಮಯೋಜನೆ ಉಪಯೋಜನಾ ನಿರ್ದೇಶಕ ಜಿ.ಎಂ. ಚಂದ್ರಶೇಖರ ಸ್ವಾಗತಿಸಿದರು. ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ರೇಣುಕುಮಾರ್‌ ವಂದಿಸಿದರು. ಉಪ ಕೃಷಿ ನಿರ್ದೇಶಕ ಶಿವಕುಮಾರ್‌ ‍ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಷಯ ತಜ್ಞ ಜೆ. ರಘುರಾಜ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)