ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಕ್ರೈಂ: ಅಧಿಕಾರಿ, ಸಿಬ್ಬಂದಿ ಎಚ್ಚರವಹಿಸಿ: ಮಹಾಂತೇಶ ಬೀಳಗಿ

ಸೈಬರ್‌ ಸೆಕ್ಯೂರಿಟಿ ಮತ್ತು ಇ–ಆಡಳಿತ ಕಾರ್ಯಾಗಾರವನ್ನು ಉದ್ಘಾಟಿಸಿದ ಮಹಾಂತೇಶ ಬೀಳಗಿ
Last Updated 24 ಫೆಬ್ರುವರಿ 2021, 3:01 IST
ಅಕ್ಷರ ಗಾತ್ರ

ದಾವಣಗೆರೆ: ಇದು ಸೈಬರ್‌ ಯುಗ, ಮಾಹಿತಿ ಮತ್ತು ತಂತ್ರಜ್ಞಾನದ ಯುಗ. ಈ ಕಾಲದಲ್ಲಿಯೇ ಸೈಬರ್‌ ಅಪರಾಧಗಳು ಹೆಚ್ಚು ನಡೆಯುತ್ತವೆ. ಹಾಗಾಗಿ ಎಲ್ಲ ಇಲಾಖೆಗಳ ಅಧಿಕಾರಿ ಗಳು ಮತ್ತು ಸಿಬ್ಬಂದಿ ಸೈಬರ್‌ ಅಪರಾ ಧದ ಬಗ್ಗೆ ಹೆಚ್ಚು ಎಚ್ಚರದಿಂದ ಇದ್ದು, ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಆಡಳಿತ ತರಬೇತಿ ಸಂಸ್ಥೆಯು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೈಬರ್‌ ಸೆಕ್ಯೂರಿಟಿ ಮತ್ತು ಇ – ಆಡಳಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಲಾಖೆಯ ಕೆಲಸಗಳನ್ನು ತಂತ್ರಜ್ಞಾನವನ್ನು ಬಳಸಿಕೊಂಡು ಶೀಘ್ರವಾಗಿ ಮಾಡುವುದು ಹೇಗೆ ಎಂಬುದನ್ನು ಕೂಡ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಇನ್‌ ಸೈಬರ್‌ ಸೆಕ್ಯೂರಿಟಿ ಯೋಜನಾ ವ್ಯವಸ್ಥಾಪಕಿ ವಿಭಾ ಚಕ್ರಾಲ ಅವರು ಸೈಬರ್‌ ಸೆಕ್ಯೂರಿಟಿ ಬಗ್ಗೆ ಉಪನ್ಯಾಸ ನೀಡಿ, ‘ಹಿಂದೆ ಮತ್ಸ್ಯ ನ್ಯಾಯ ಪದ್ಧತಿ ಇತ್ತು. ಅಂದರೆ ಯಾರು ಬಲಿಷ್ಠರೋ ಅವರು ದುರ್ಬಲರನ್ನು ಮುಗಿಸಿ ಬದುಕುವ ವ್ಯವಸ್ಥೆ ಅದು. ಆದರೆ ಎಲ್ಲರೂ ಬದುಕಬೇಕು ಎಂಬುದು ಧರ್ಮ ನ್ಯಾಯ ವ್ಯವಸ್ಥೆ ಬಳಿಕ ಜಾರಿಗೆ ಬಂತು. ಆದರೆ ಸೈಬರ್‌ಗೆ ಸಂಬಂಧಿಸಿದಂತೆ ಈಗಲೂ ಮತ್ಸ್ಯನ್ಯಾಯ ವವಸ್ಥೆಯೇ ಜಾರಿಯಲ್ಲಿದೆ. ಮುಗ್ಧವಾಗಿ ಅಂತರ್ಜಾಲವನ್ನು ಬಳಸುವವರಿಗೆ ಇನ್ನೂ ಕಾನೂನಿನ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ’ ಎಂದು ವಿವರಿಸಿದರು.

ಸೈಬರ್‌ ಮೂಲಕ ಅಪರಾಧ ಎಸಗುವುದು ಸುಲಭ. ಯಾಕೆಂದರೆ ಅಪರಾಧ ಎಸಗುವವರು ಅನಾಮಿಕರಾಗಿಯೇ ಉಳಿಯಲು ಸಾಧ್ಯ. ಉದಾಹರಣೆಗೆ ರಷ್ಯಾದ ಒಬ್ಬ ವ್ಯಕ್ತಿ ಇಂಗ್ಲೆಂಡ್‌ನ ಐಪಿಯನ್ನು ಲಾಗಿನ್‌ ಆಗಿ, ಅಲ್ಲಿಂದ ಅಮೆರಿಕದ ಐಪಿಗೆ ಹೋಗಿ ಅಲ್ಲಿಂದ ಭಾರತದ ಯಾರನ್ನೋ ವಂಚಿಸಬಹುದು. ಇದನ್ನು ಪತ್ತೆ ಹಚ್ಚುವುದು ಸುಲಭವಲ್ಲ. ಪತ್ತೆ ಹಚ್ಚಿದರೂ ಬಳಸಿದ ಐಪಿ ವಿಳಾಸ ಸಿಗಬಹುದೇ ಹೊರತು ಆ ಮನುಷ್ಯ ಸಿಗದಿರಬಹುದು. ಯಾರದೋ ಹೆಸರಲ್ಲಿ ಮೇಲ್‌ ಕಳುಹಿಸಬಹುದು. ಸೈಬರ್‌ ಸೆಂಟರ್‌ನ ಯಾರದೋ ಕಂಪ್ಯೂಟರ್‌ನಲ್ಲಿ ಆ ಕೆಲಸ ಮಾಡಬಹುದು’ ಎಂದು ಮಾಹಿತಿ ನೀಡಿದರು.

ಹ್ಯಾಕ್‌ ಮಾಡಲು ಬಾರದವರೂ ಡಾರ್ಕ್‌ನೆಟ್‌ ಅಥವಾ ಡಾರ್ಕ್‌ವೆಬ್‌ ಮೂಲಕ ಹ್ಯಾಕ್‌ ತಜ್ಞರನ್ನು ಸಂಪರ್ಕಿಸಿ ಇಂಥವರನ್ನು ಹ್ಯಾಕ್‌ ಮಾಡಿ ಎಂದು ಸುಪಾರಿ ನೀಡುವ ಕೆಲಸಗಳೂ ನಡೆಯುತ್ತವೆ. ಹಣ ವಂಚನೆಯಂತೂ ಬಹಳ ಸುಲಭ. ಯಾರದೋ ಖಾತೆಯಲ್ಲಿದ್ದ ಹಣವನ್ನು ನಕಲಿ ವ್ಯಕ್ತಿಗಳ ಹೆಸರಲ್ಲಿ ಖಾತೆ ಸೃಷ್ಟಿಸಿ ಅದಕ್ಕೆ ಹಾಕಿಸಿಕೊಂಡು ಹಣ ತೆಗೆದು ನಾಪತ್ತೆಯಾಗಿ ಬಿಡಬಹುದು ಎಂದರು.

‘ಯಾವುದೇ ಉದ್ದೇಶವಿಲ್ಲದೇ ಹ್ಯಾಕ್‌ ಮಾಡುವವರು, ಹವ್ಯಾಸಿ ಹ್ಯಾಕರ್‌ಗಳು, ನಿರ್ದಿಷ್ಟ ಗುರಿ ಇಟ್ಟುಕೊಂಡು ಹ್ಯಾಕ್‌ ಮಾಡುವ ಹ್ಯಾಕ್ಟಿವಿಸ್ಟ್‌ಗಳು, ದೇಶದ ಭದ್ರತೆಯ ಗುಪ್ತ ಮಾಹಿತಿಯನ್ನೇ ನೀಡುವ ಸರ್ಕಾರಿ ಅಧಿಕಾರಿಗಳು, ತಂಡವಾಗಿ ಹ್ಯಾಕಿಂಗ್‌ ಮಾಡುವ ಸಿಂಡಿಕೇಟ್‌ಗಳು ಹ್ಯಾಕ್‌ ಮಾಡುತ್ತಾರೆ. ಇದಲ್ಲದೇ ನಮ್ಮ ಜತೆಗೇ ಇರುವ ನಮ್ಮೊಳಗಿನವರೂ ಇಂಥ ಕೆಲಸ ಮಾಡುತ್ತಾರೆ. ಅವರಿಗೆ ಅವರ ಕೆಲಸದಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಸಂತೃಪ್ತಿ ಇರುವುದಿಲ್ಲ. ಆಗ ಕಿತಾಪತಿ ಮಾಡುತ್ತಾರೆ. ಈ ಎಲ್ಲದರ ಬಗ್ಗೆಯೂ ಎಚ್ಚರ ಇರಬೇಕು’ ಎಂದು ಅವರು ತಿಳಿಸಿದರು.

ಆಡಳಿತ ತರಬೇತಿ ಜಿಲ್ಲಾ ಸಂಸ್ಥೆಯ ಪ್ರಿನ್ಸಿಪಾಲ್‌ ಲೋಕೇಶ್‌, ಉಪ ಪ್ರಿನ್ಸಿಪಾಲ್‌ ದಿವಾಕರ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT