ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೇ ಭಾಗ ತಲುಪದ ಭದ್ರಾ ನಾಲೆ ನೀರು: ಪ್ರತಿಭಟನೆ

Last Updated 8 ಫೆಬ್ರುವರಿ 2023, 6:02 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪಟ್ಟಣದ ಕರ್ನಾಟಕ ನೀರಾವರಿ ನಿಗಮದ 3ನೇ ವಿಭಾಗೀಯ ಕಚೇರಿ ಎದುರು ಮಂಗಳವಾರ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರು ನಾಲೆ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

‘ಆಂತರಿಕ ಸರದಿ ರೂಪಿಸಿ ನಾಲೆಗೆ ನೀರು ಬಿಟ್ಟಿದ್ದರೂ ಕೊನೆಯ ಭಾಗ ತಲುಪುತ್ತಿಲ್ಲ. ನಿಯಂತ್ರಣ 2ಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಸಸಿ ಮಡಿ ಬಲಿತಿವೆ. ಈಗ ಭತ್ತದ ನಾಟಿ ಮಾಡದಿದ್ದರೆ ಪ್ರಯೋಜನವಿಲ್ಲ. ಸಾವಿರಾರು ರೂಪಾಯಿ ನಷ್ಟವಾಗುತ್ತದೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್ ಘಟನಾ ಸ್ಥಳಕ್ಕೆ ಬಂದು ಧರಣಿ ನಿರತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ತಿಳಿದುಕೊಂಡರು. ಆದರೆ ಇಇ ಹಾಗೂ ಕೆಲವು ಎಂಜಿನಿಯರ್‌ಗಳನ್ನು ಚುನಾವಣೆ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ಗೊತ್ತಾಯಿತು. ಡಿಸಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನೀರಿನ ಸಮಸ್ಯೆ ವಿವರಿಸಿದರು. ನೀರಾವರಿ ನಿಗಮದ ಸಿಬ್ಬಂದಿಗೆ ಚುನಾವಣೆ ಕೆಲಸದಿಂದ ರಿಯಾಯಿತಿ ನೀಡುವಂತೆ ಉಭಯ ನಾಯಕರು ಕೋರಿದರು. ಡಿಸಿ ಸಮ್ಮತಿ ನೀಡಿದರು.

‘ಭದ್ರಾ ಜಲಾಶಯ ಭರ್ತಿಯಾಗಿದೆ, ಸರಿಯಾದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಆದರೆ ಕೊನೆಯ ಭಾಗದ ರೈತರ ಭತ್ತದ ಗದ್ದೆಗಳು ನೀರಿಲ್ಲದೇ ಒಣಗುತ್ತಿವೆ ಎಂದರೆ ನೀರು ಎಲ್ಲಿ ಹೋಗುತ್ತಿದೆ?’ ಎಂದು ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ಒಂದು ಹಂತದಲ್ಲಿ ಹರಿಹಾಯ್ದ ಘಟನೆ ನಡೆಯಿತು.

‘ವಾಸನ, ಭಾನುವಳ್ಳಿ, ಕಾಮಾಲಪುರ ಭಾಗದಲ್ಲಿ ನಾಲೆ ನೀರಿನ ಸಮಸ್ಯೆ ಇದೆ. ನಾಲೆಯಲ್ಲಿ ಸಮರ್ಪಕವಾಗಿ ನೀರು ಬರುತ್ತಿಲ್ಲ’ ಎಂದು ರೈತರು ದೂರಿದರು.

ಒಂದೆರೆಡು ದಿನಗಳಲ್ಲಿ ಪರಿಸ್ಥಿತಿ ಸರಿಯಾಗದಿದ್ದಲ್ಲಿ ಪೊಲೀಸ್ ಭದ್ರತೆಯಲ್ಲಿ ನೀರು ಹರಿಸುವಂತೆ ಧರಣಿ ನಿರತರು ಒತ್ತಾಯಿಸಿದರು.

ನೀರು ಬರದಿದ್ದಲ್ಲಿ ಕಚೇರಿಗೆ ಬೀಗ ಹಾಕಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ರೈತರಾದ ಚಂದ್ರಪ್ಪ, ಪ್ರಶಾಂತ್, ಅಶೊಕ್, ತಿಪ್ಪಣ್ಣ, ಕುಬೇರಗೌಡ, ರವಿಕುಮಾರ್, ಗುತ್ಯಪ್ಪ, ತಿಪ್ಪೇರುದ್ರಪ್ಪ ದೊಡ್ಡಬಸಪ್ಪ, ಷಣ್ಮುಖಪ್ಪ ಹಾಗೂ ಹೆಚ್ಚಿನ ಸಂಖ್ಯೆಯ ರೈತರು ಇದ್ದರು.

..........

ತುರ್ತಾಗಿ ಕಾಡಾ ಸಭೆ ಕರೆಯಲು ಒತ್ತಾಯ

ಆಕ್ರೋಶ: ತುಂಗಭದ್ರಾ ಜಲಾಶಯಕ್ಕೆ ಬೇಸಿಗೆ ಬೆಳೆಗಾಗಿ 7 ಟಿಎಂಸಿ ಅಡಿ ನೀರನ್ನು ಭದ್ರಾ ಜಲಾಶಯದಿಂದ ಹರಿಸಲು ತುಂಗಭದ್ರಾ ಜಲಾಶಯ ಮಂಡಳಿ ಸರ್ಕಾರಕ್ಕೆ ಮಾಡಿರುವ ಮನವಿ ಪತ್ರ ತೋರಿಸಿದ ಭದ್ರಾ ನೀರು ಬಳಕೆದಾರರ ಸಂಘದ ಅಧ್ಯಕ್ಷ ವೈ. ದ್ಯಾವಪ್ಪರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

‘ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಲಾಗಿದೆ. ಈಗಾಗಲೆ ಮೈಲಾರ ಜಾತ್ರೆಗಾಗಿ ಕುಡಿಯುವ ನೀರಿಗಾಗಿ ನದಿಗೆ ನೀರು ಹರಿಸಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ಎತ್ತಿಸಿ ಸಂಗ್ರಹ ಹೆಚ್ಚಿಸಿಕೊಂಡು ಆ ಭಾಗದ ರೈತರ ಹಿತ ಕಾಪಾಡಿ. ನಿಮ್ಮ ತೆವಲಿಗೆ ಭದ್ರಾ ಅಚ್ಚುಕಟ್ಟಿನ ರೈತರನ್ನು ಬಲಿ ಹಾಕಬೇಡಿ, ಜಲಾಶಯದಿಂದ ನೀರು ಬಿಡುಗಡೆ ಅಸಾಧ್ಯ’ ಎಂದು ಹರಿಹಾಯ್ದರು.

‘ಒಂದು ವೇಳೆ ಅಧಿಕಾರಿಗಳು ಮೇಲಾಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿದು ರಾತ್ರೋರಾತ್ರಿ ಕದ್ದುಮುಚ್ಚಿ ಭದ್ರಾ ನದಿಗೆ ನೀರು ಹರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ತುರ್ತಾಗಿ ಕಾಡಾ ಸಭೆ ಕರೆಯಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT