ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ಜೀವನ ಕಲಿಸುವ ಭಗವದ್ಗೀತೆ

‘ಕೊರೊನೋತ್ತರ ಮಾನಸಿಕ ಆರೋಗ್ಯ- ಭಗವದ್ಗೀತೆಯ ಬೆಳಕಿನಲ್ಲಿ’ ವಿಚಾರ ಸಂಕಿರಣದಲ್ಲಿ ಡಾ. ರಾಮಚಂದ್ರ ಭಟ್ಟ ಕೋಟೆಮನೆ
Last Updated 1 ಡಿಸೆಂಬರ್ 2022, 5:12 IST
ಅಕ್ಷರ ಗಾತ್ರ

ದಾವಣಗೆರೆ: ಪರಿಸರ ಸ್ನೇಹಿ ಜೀವನ ಪದ್ಧತಿ ಇದ್ದರೆ ಕೊರೊನಾದಂಥ ಮಾರಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಭಗವದ್ಗೀತೆಯ ಯೋಗಮಾರ್ಗವು ಪರಿಸರ ಸ್ನೇಹಿ ಜೀವನವನ್ನು ಕಲಿಸಿಕೊಡುತ್ತದೆ ಎಂದು ವೇದ ವಿಜ್ಞಾನ ಶೋಧ ಸಂಸ್ಥಾನದ ಅಧ್ಯಕ್ಷ ಡಾ. ರಾಮಚಂದ್ರ ಭಟ್ಟ ಕೋಟೆಮನೆ ತಿಳಿಸಿದರು.

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಎಂಬಿಎ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕೊರೊನೋತ್ತರ ಮಾನಸಿಕ ಆರೋಗ್ಯ- ಭಗವದ್ಗೀತೆಯ ಬೆಳಕಿನಲ್ಲಿ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸರಿಯಾದ ಆಹಾರ, ವಿಹಾರ, ವ್ಯವಹಾರ, ಭಾವನೆ, ವಿಚಾರಗಳೇ ಯೋಗವೆಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಇವುಗಳ ಸತ್ವ ಗುಣದಿಂದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಐದು ಅಂಶಗಳು ಸರಿ ಇಲ್ಲದ ಕಾರಣಕ್ಕೆ ಕೊರೊನಾ ಕಾಣಿಸಿಕೊಂಡಿತು. ನಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ಗೀತೆಯ ಬೆಳಕಿನಲ್ಲಿ ಪರಿಸರಸ್ನೇಹಿ ಜೀವನ ಪದ್ಧತಿ ಅಳವಡಿಸಿಕೊಳ್ಳದಿದ್ದರೆ ಜಗತ್ತು ಮತ್ತೆ ಮತ್ತೆ ಮಹಾಮಾರಿಗಳಿಗೆ ತುತ್ತಾಗಬೇಕಾಗುತ್ತದೆ ಎಂದು ವಿಶ್ಲೇಷಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಡಿ.ಕುಂಬಾರಕಾರ್ಯಕ್ರಮ ಉದ್ಘಾಟಿಸಿ, ‘ಜನರ ಮಾನಸಿಕ ಆರೋಗ್ಯ ಸರಿ ಇಲ್ಲದ ಕಾರಣ ಭಾಷೆ, ಜಾತಿ, ಮತದ ಹೆಸರಿನಲ್ಲಿ ಕಿತ್ತಾಟಗಳನ್ನು ನೋಡುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಯುವಜನರು ಒಂದರ್ಥದಲ್ಲಿ ಮಾನಸಿಕ ರೋಗಿಗಳೇ ಆಗಿಹೋಗಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಸಿಗುತ್ತಿಲ್ಲ. ನೆರೆಹೊರೆಯವರ ಪರಿಚಯವೇ ಇಲ್ಲದಂತೆ ಬದುಕು ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿ, ಸಮುದಾಯಗಳ ನಡುವೆ ಸೌಹಾರ್ದ, ಸಾಮರಸ್ಯ ಮೂಡಲು ಭಗವದ್ಗೀತೆಯ ಮಾರ್ಗದರ್ಶನ ಅಗತ್ಯ’ ಎಂದು ಹೇಳಿದರು.

ಶಿರಸಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ದಾವಣಗೆರೆ ರಾಮಕೃಷ್ಣಾಶ್ರಮದ ಸ್ವಾಮಿ ತ್ಯಾಗೀಶ್ವರಾನಂದ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವೆ ಬಿ.ಬಿ. ಸರೋಜ
ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

‌ಕೆ.ಎಸ್.ಮಿಥಿಲಾ, ಅಮೃತಲಕ್ಷ್ಮೀ ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಾ.ಕೆ.ಬಿ.ರಂಗಪ್ಪ ಸ್ವಾಗತಿಸಿದರು. ಎಬಿವಿಪಿ ದಾವಣಗೆರೆ ವಿಶ್ವವಿದ್ಯಾಲಯ ಘಟಕದ ಅಧ್ಯಕ್ಷ ಚಂದ್ರಶೇಖರ ಮೊರಬದ್ ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಭೀಮಾಶಂಕರ ಜೋಷಿ ಕಾರ್ಯಕ್ರಮ ನಿರೂಪಿಸಿದರು.

ವಿಚಾರಗೋಷ್ಠಿಯಲ್ಲಿ ಭಗವದ್ಗೀತೆ ಮತ್ತು ಮನಸ್ಸು ಕುರಿತು ಮನೋವೈದ್ಯ ಶಿವಮೊಗ್ಗದ ಡಾ.ಕೆ.ಆರ್. ಶ್ರೀಧರ್, ಯೋಗ
ಯಾಗಗಳಿಂದ ರೋಗ ನಿರೋಧಕ ಶಕ್ತಿ ಬಗ್ಗೆ ಕೊಯಮುತ್ತೂರು ಅಮೃತ ವಿಶ್ವವಿದ್ಯಾಪೀಠಂ ಸಹಾಯಕ ಪ್ರಾಧ್ಯಾಪಕ ಡಾ.ಸುಶ್ರುತ, ಮಾನಸಿಕ ಸಮಸ್ಥಿತಿಗೆ ಮಾರ್ಗೋಪಾಯ ಕುರಿತು ಬೆಂಗಳೂರಿನ ಡಾ.ರಾಘವೇಂದ್ರ ಭಟ್, ಕೊರೊನಾ ಉತ್ತರಕಾಲೀನ ಮನೋದುಷ್ಪರಿಣಾಮ ಹಾಗೂ ಪರಿಹಾರೋಪಾಯ ಬಗ್ಗೆ ಬೆಂಗಳೂರು ನಿಮ್ಹಾನ್ಸ್ ನಿವೃತ್ತ ನಿರ್ದೇಶಕ ಡಾ.ಬಿ.ಎನ್.ಗಂಗಾಧರ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT