ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಪೀಟ್‌ ಆಡುವುದೇ ಭಜನೆಯಾಗಿದೆ: ಸಾಣೇಹಳ್ಳಿ ಶ್ರೀಗಳ ಕಳವಳ

ಭಜನಾ ಸ್ಪರ್ಧೆ
Last Updated 25 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ದಾವಣಗೆರೆ: ‘ಭಜನೆಯ ಮೂಲಕ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಇಂದು ಭಜನೆ ಮೂಲೆ ಸೇರುತ್ತಿದ್ದು, ಎಲ್ಲರೂ ಒಟ್ಟಿಗೆ ಕುಳಿತು ಇಸ್ಪೀಟ್‌ ಆಡುವುದೇ ಭಜನೆ ಎಂಬಂತಾಗಿದೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ರಾಜ್ಯ ಮಟ್ಟದ ಕನ್ನಡ ಭಜನಾ ಸ್ಪರ್ಧೆ ಸಮಿತಿ ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ರಾಜ್ಯ ಮಟ್ಟದ ಕನ್ನಡ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಿರಿಗೆರೆಯಲ್ಲಿ ಹಲವು ವರ್ಷಗಳಿಂದ ಭಜನೆ, ವೀರಗಾಸೆ, ಸೋಬಾನೆ ಪದಗಳ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಈಚೆಗೆ ನಡೆಯಬೇಕಾಗಿದ್ದ ವೀರಗಾಸೆ ಸ್ಪರ್ಧೆಗೆ ಒಂದು ತಂಡವೂ ಬಂದಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಭಗವಂತನ ಧ್ಯಾನ ಮಾಡಲು ಭಜನೆ ಹುಟ್ಟಿಕೊಂಡಿತು. ಇದು ಆತ್ಮದರ್ಶನವನ್ನೂ ಮಾಡಿಸುತ್ತದೆ. ಮೊದಲೆಲ್ಲ ಹಳ್ಳಿಗಳಲ್ಲಿ ಸಂಜೆ ಎಲ್ಲರೂ ಸೇರಿಕೊಂಡು ಭಜನೆ ಮಾಡುತ್ತಿದ್ದರು. ಎಲ್ಲರನ್ನೂ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದರು’ ಎಂದು ಹೇಳಿದರು.

‘ಭಜನೆಯಲ್ಲಿ ಸಿಗುವ ಖುಷಿ ಟಿವಿ ನೋಡುವುದರಲ್ಲಿ ಸಿಗುವುದಿಲ್ಲ. ಮನುಷ್ಯ ಏಳ್ಗೆ ಹೊಂದುತ್ತಿದ್ದರೂ ಮಾನವೀಯತೆ ಕಳೆದುಕೊಳ್ಳುತ್ತಿದ್ದಾನೆ. ಒಳ್ಳೆಯ ಬಟ್ಟೆ ಹಾಕಿದರೆ ಒಳ್ಳೆಯವರು ಆಗಲು ಸಾಧ್ಯವಿಲ್ಲ. ವ್ಯಕ್ತಿ ನಡೆಯುವ ದಾರಿ ಮುಖ್ಯವಾಗಿರುತ್ತದೆ’ ಎಂದರು.

‘ಹೃದಯವನ್ನು ಹೂವಿನ ರೀತಿ ಇಟ್ಟುಕೊಳ್ಳಬೇಕು. ಮನಸ್ಸು ಸಿಹಿ ಜೇನಿನಂತಿರಬೇಕು. ಸಿಹಿಯನ್ನು ಶತ್ರುವಿಗೂ ಹಂಚಬೇಕು. ಸದ್ಭಾವನೆ ಹೊಂದಬೇಕು. ಪ್ರೀತಿ ಹಂಚಿಕೆ ಮಾಡಬೇಕು’ ಎಂದು ತಿಳಿಸಿದರು.

ಯರಗುಂಟೆಯ ಪರಮೇಶ್ವರ ಸ್ವಾಮೀಜಿ, ‘ತಾಯಿ ಹಾಲು ಮಗುವಿಗೆ ಶ್ರೇಷ್ಠವಾಗಿರುವಂತೆ ಸಂಗೀತವೂ ಶ್ರೇಷ್ಠವಾದದ್ದು. ಇದರಿಂದ ಖುಷಿಯೂ ಸಿಗಲಿದೆ. ರೋಗ ನಿವಾರಿಸುವ ಶಕ್ತಿ ಸಂಗೀತಕ್ಕಿದೆ’ ಎಂದರು.

ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ವಿ. ಹಲಸೆ, ಭಜನಾ ಸಮಿತಿ ಅಧ್ಯಕ್ಷ ಡಿ.ಕೆ. ಸದಾನಂದಪ್ಪ ಕುಕ್ಕುವಾಡ, ಉಪಾಧ್ಯಕ್ಷ ಕೆಂಚನಗೌಡರು ಕೆ. ಉಚ್ಚಂಗಿದುರ್ಗ, ಕೆ. ನಾಗಪ್ಪ, ಕಾರ್ಯದರ್ಶಿ ಮಂಜಪ್ಪ ಸಿ. ಸಿರಿಗೆರೆ, ಜಂಟಿ ಕಾರ್ಯದರ್ಶಿ ಎಂ. ಸಿದ್ದಪ್ಪ, ಸಂಘಟನಾ ಕಾರ್ಯದರ್ಶಿ ಎ. ಕೊಟ್ರಪ್ಪ ಕಿತ್ತೂರು ಇದ್ದರು.

ಮೂರು ದಿನಗಳ ಕಾಲ ನಡೆಯುವ ಭಜನಾ ಸ್ಪರ್ಧೆಯಲ್ಲಿ 86 ತಂಡಗಳು ಪಾಲ್ಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT