ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಬಂದ್: ಪ್ರಚಾರಾಂದೋಲನಕ್ಕೆ ಚಾಲನೆ

Last Updated 26 ಸೆಪ್ಟೆಂಬರ್ 2021, 4:08 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ ರೈತ ಸಂಘಟನೆಗಳ ಒಕ್ಕೂಟ ಸೆ.27ರಂದು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ರೈತ, ಕಾರ್ಮಿಕ ಸಂಘಟನೆಗಳು ನಗರದಲ್ಲಿ ಶನಿವಾರ ಪ್ರಚಾರಾಂದೋಲನ ನಡೆಸಿದವು.

ನಗರದ ಜಯದೇವ ವೃತ್ತದಿಂದ ಪ್ರಚಾರಾಂದೋಲನ ಆರಂಭಿಸಿದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ನಗರದ ವಿವಿಧ ವೃತ್ತಗಳಿಗೆ ತೆರಳಿ ಪದಾಧಿಕಾರಿಗಳು ಭಾರತ್ ಬಂದ್‌ಗೆ ನಾಗರಿಕರು, ವರ್ತಕರು, ಆಟೊ ಚಾಲಕರು, ಬಸ್ ಮಾಲೀಕರು, ಚಾಲಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಪ್ರಚಾರಾಂದೋಲನ ಉದ್ಘಾಟಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ, ‘ಕೇಂದ್ರ ಸರ್ಕಾರವು ಕಾರ್ಪೋರೇಟ್ ಪರವಾಗಿ ಮೂರು ಕೃಷಿ ಕಾಯ್ದೆಗಳನ್ನು ಮತ್ತು ವಿದ್ಯುತ್ ಮಸೂದೆಯನ್ನು ಜಾರಿಗೆ ತಂದು ದೇಶದ ಕೃಷಿಯನ್ನು ಬಂಡವಾಳಶಾಹಿ ಕಂಪನಿಗಳಿಗೆ ವಹಿಸುವ ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.

ಮೂರು ಕೃಷಿ ಕಾಯ್ದೆಗಳನ್ನು ಮತ್ತು ವಿದ್ಯುತ್ ಮಸೂದೆಯನ್ನು ರದ್ದು ಪಡಿಸಬೇಕು. ರೈತ ಉತ್ಪನ್ನಗಳಿಗೆ ಸರ್ಕಾರ ನಿಗದಿ ಮಾಡುವ ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಕಾನೂನುಬದ್ಧಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಆವರಗೆರೆ ಎಚ್.ಜಿ. ಉಮೇಶ್, ‘ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಬೃಹತ್ ಉದ್ದಿಮೆದಾರರ ಏಜೆಂಟರಂತೆ ಕೆಲಸ ನಡೆಸುತ್ತಿವೆ. ಸರ್ಕಾರಿ ಸ್ವಾಮ್ಯದ ಆಸ್ತಿಗಳನ್ನು ಖಾಸಗೀಕರಣ
ಮಾಡುವ ಹುನ್ನಾರ ನಡೆಸಿದೆ. ಬಿಜೆಪಿ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಕೃಷಿಕರಿಗೆ ಕಾರ್ಮಿಕರಿಗೆ ಮತ್ತು ಜನ ಸಾಮಾನ್ಯರಿಗೆ ಕಂಟಕ ತರುವ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ಭಾರತ್ ಬಂದ್ ಚಳವಳಿಯನ್ನು ಯಶಸ್ಸುಗೊಳಿಸುವುದು ಅಗತ್ಯ. ಎಲ್ಲ ವರ್ಗದ ಉದ್ದಿಮೆದಾರರು, ವರ್ತಕರು ವಹಿವಾಟನ್ನು
ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಸಹಕರಿಸಬೇಕು’ ಎಂದು ಕೋರಿದರು.

ಎಐಟಿಯುಸಿ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ನಾಯರಿ, ‘ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವರ್ಷ ತುಂಬುತ್ತಾ ಬಂತು. ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಿದೆ ನಿರ್ಲಕ್ಷಿಸುತ್ತಿದೆ’ ಎಂದು ಆರೋಪಿಸಿದರು.

ಪ್ರಚಾರಾಂದೋಲನದಲ್ಲಿ ವಿವಿಧ ರೈತ, ಕಾರ್ಮಿಕ ಸಂಘಟನೆಗಳ ಮುಖಂಡರಾದ ಆವರಗೆರೆ ಚಂದ್ರು, ಬಲ್ಲೂರು ರವಿಕುಮಾರ್, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಮೌಲಾನಾಯ್ಕ, ಆವರಗೆರೆ ವಾಸು, ಕರಿಬಸಪ್ಪ, ಜಬೀನಾ ಖಾನಂ, ಮಧು ತೋಗಲೇರಿ, ಮಂಜುನಾಥ ಕುಕ್ಕುವಾಡ, ಭಾರತಿ, ನಾಗಜ್ಯೋತಿ, ಐರಣಿ ಚಂದ್ರು, ಆನಂದರಾಜ್, ಇ.ಶ್ರೀನಿವಾಸ್, ರಂಗನಾಥ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT