ಗುರುವಾರ , ಆಗಸ್ಟ್ 18, 2022
25 °C

ಬೈಕ್ ಕಳವು: 6 ಆರೋಪಿಗಳ ಬಂಧನ, 38 ಬೈಕ್ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ದಾವಣಗೆರೆ ಸೇರಿ ಸುತ್ತಲಿನ ಜಿಲ್ಲೆಗಳಲ್ಲಿ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ 6 ಜನ ಯುವಕರ ತಂಡವನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು, ಆರೋಪಿಗಳಿಂದ 38 ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ರಾಜು, ಉಮೇಶ್, ಪ್ರಸನ್ನಾ, ಶಿವರಾಜ್, ಮಧು, ಪರುಶುರಾಮ್ ಬಂಧಿತರು. 

‘ದಾವಣಗೆರೆ, ಹಾವೇರಿ, ವಿಜಯನಗರ ಜಿಲ್ಲೆಯ ವಿವಿಧೆಡೆ ಅಂಗಡಿಗಳ ಮುಂದೆ ನಿಲ್ಲಿಸಿದ್ದ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದರು. ಸುಮಾರು 20-30 ವರ್ಷದವರಾದ ಇವರು ಕದ್ದ ವಾಹನಗಳನ್ನು ಬೇರೆಯವರ ಬಳಿ ಒತ್ತೆ ಇಟ್ಟು, ಅವರಿಂದ ಹಣವನ್ನು ಪಡೆದು ಮೋಜು ಮಸ್ತಿ ಮಾಡುತ್ತಿದ್ದರು. ಆರೋಪಿತರಲ್ಲಿ ಒಬ್ಬನ ಅನುಮಾನಾಸ್ಪದ ನಡವಳಿಕೆಯಿಂದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿತರಿಂದ ಅಂದಾಜು ₹14.80 ಲಕ್ಷ ಮೌಲ್ಯದ ಒಟ್ಟು 38 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹರಿಹರ ನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 8, ಗ್ರಾಮಾಂತರ ಠಾಣೆಯಲ್ಲಿ 2, ಮಲೇಬೆನ್ನೂರಿನಲ್ಲಿ 4, ಚನ್ನಗಿರಿಯಲ್ಲಿ 2, ಹದಡಿಯಲ್ಲಿ 2, ಮಾಯಕೊಂಡ, ಸಂತೇಬೆನ್ನೂರು ಹಾಗೂ ಹೊನ್ನಾಳಿ ತಲಾ 1, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ 5, ಹಿರೇಕೆರೂರಿನಲ್ಲಿ 4, ಬ್ಯಾಡಗಿಯಲ್ಲಿ 2, ಹಲಗೇರಿಯಲ್ಲಿ 1, ರಾಣೆಬೆನ್ನೂರಿನಲ್ಲಿ 1, ಕುಮಾರಪಟ್ಟಣಂನಲ್ಲಿ 1, ಹಂಸಬಾವಿಯಲ್ಲಿ 2, ವಿಜಯನಗರ ಜಿಲ್ಲೆಯ ಹಿರೇಹಡಗಲಿಯಲ್ಲಿ ಕಳ್ಳತನವಾಗಿದ್ದ 1 ಬೈಕ್ ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಸಹಾಯಕ ಪೊಲೀಸ್ ಅಧೀಕ್ಷರಾದ ಕನ್ನಿಕಾ ಸಕ್ರಿವಾಲ್, ಸಿಪಿಐ ಸತೀಶ್ ಯು. ಕುಮಾರ್, ಪಿಎಸ್‍ಐ ಸುರೇಶ್, ಅಪರಾಧ ವಿಭಾಗದ ಪಿಎಸ್‍ಐ ಲತಾ ವಿ.ತಾಳೇಕರ್, ಸಿಬ್ಬಂದಿಗಳಾದ ನಾಗರಾಜ್ ಸುಣಗಾರ್, ದೇವರಾಜ್, ಮಂಜುನಾಥ್, ಶಿವರಾಜ್, ಹನುಮಂತ್, ಸತೀಶ್, ಸಿದ್ಧರಾಜು, ನಾಗರಾಜ್, ಬೀರಲಿಂಗೇಶ್, ರಿಜ್ವಾನ್ ನಾಸೂರ್, ಕರಿಯಪ್ಪ, ಕಾಂತರಾಜು, ದಿಲೀಪ್, ಲಿಂಗರಾಜ್, ದಿಳ್ಳೆಪ್ಪ, ರವಿನಾಯ್ಕ್, ಮುರಳೀಧರ್ ಪತ್ತೆ ಕಾರ್ಯದಲ್ಲಿ
ಭಾಗವಹಿಸಿದ್ದವರು.

ಟ್ರ್ಯಾಕ್ಟರ್ ಟ್ರೈಲರ್ ಉರುಳಿ ಗೃಹಿಣಿ ಸಾವು
ಮಲೇಬೆನ್ನೂರು:
ಸಮೀಪದ ಕೊಪ್ಪ ಗ್ರಾಮದಲ್ಲಿ ಸೋಮವಾರ ಗೃಹಿಣಿ ಮೇಲೆ ಟ್ರ್ಯಾಕ್ಟರ್ ಟ್ರೈಲರ್ ಉರುಳಿ ಬಿದ್ದು ಪೆಟ್ಟುಬಿದ್ದು ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಗೀತಮ್ಮ(35) ಮೃತರು. ತನ್ನ ಮನೆಯ ಹಿಂಭಾಗದಲ್ಲಿ ಪಾತ್ರೆ ತೊಳೆಯುತ್ತಿದ್ದ ಸಮಯದಲ್ಲಿ ಘಟನೆ ಸಂಭವಿಸಿದೆ.

ರಸ್ತೆ ಕಾಮಗಾರಿ ನಡೆಯುತ್ತಿದ್ದಾಗ ಟ್ರ್ಯಾಕ್ಟರ್ ಟ್ರೈಲರ್‍ ರಸ್ತೆ ಮೇಲೆ ಗ್ರಾವೆಲ್ ಹರಡುತ್ತಾ ಸಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಮಹಿಳೆ ಮೇಲೆ ಉರುಳಿ ಬಿದ್ದಿದೆ. ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು