ಬಾನಾಡಿ.., ಬಗೆ ಬಗೆ ಮೋಡಿ!

7
ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ತ ‘ಹಕ್ಕಿಗಳ ಇಂಚರ’ ಪ್ರದರ್ಶನ

ಬಾನಾಡಿ.., ಬಗೆ ಬಗೆ ಮೋಡಿ!

Published:
Updated:
Deccan Herald

ದಾವಣಗೆರೆ: ಒಂದು ಕಡೆ ಹಕ್ಕಿಗಳ ಸರಸ–ಸಲ್ಲಾಪ; ಇನ್ನೊಂದೆಡೆ ಮರಿಗೆ ಗುಟುಕು ನೀಡುತ್ತಿರುವ ಪಕ್ಷಿಯ ಮಾತೃಪ್ರೇಮ. ಸಂಗಾತಿಯನ್ನು ಒಲಿಸಿಕೊಳ್ಳಲು ಗೂಡು ನೇಯುವಲ್ಲಿ ಪೈಪೋಟಿಗಿಳಿದ ಗೀಜಗನ ಕುಸುರಿ. ತನ್ನ ಸೌಂದರ್ಯವನ್ನು ತೋರುತ್ತ ವೈಯಾರದಿಂದ ಬೀಗುತ್ತಿರುವ ಬಾನಾಡಿಗಳಂತೂ ಮನೋಹರ...

ಇದು ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಅನಾವರಣಗೊಂಡ ಪಕ್ಷಿಲೋಕದ ಚಿತ್ರಣ. ಹುಬ್ಬಳ್ಳಿಯ ವನ್ಯಜೀವಿ ಛಾಯಾಗ್ರಾಹಕ ಶಶಿ ಸಾಲಿ ಹಾಗೂ ಅವರ ತಂಗಿ ಶೋಭಾ ಸಾಲಿ ಸೆರೆಹಿಡಿದ ವಿವಿಧ ಪಕ್ಷಿಗಳ ಛಾಯಾಚಿತ್ರಗಳು ಕಣ್ಮನ ಸೆಳೆದವು. ದಾವಣಗೆರೆ ಜಿಲ್ಲಾ ಛಾಯಾಗ್ರಾಹಕರ ಸಂಘದ 39ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಛಾಯಾಗ್ರಹಣ ದಿನಾಚರಣೆಯ ಸಮಾರಂಭದಲ್ಲಿ ಸಾಲಿ ಅವರ ‘ಹಕ್ಕಿಗಳ ಇಂಚರ’ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಗಾಳಿಯಲ್ಲೇ ಸರಸವಾಡುತ್ತಿರುವ ‘ಗ್ರೀನ್‌ ಬೀಈಟರ್‌’; ಪೈಪೋಟಿಗಿಳಿದು ಗೂಡು ಹೆಣೆಯುತ್ತಿರುವ ಗೀಜಗನ ಹಕ್ಕಿಗಳು; ಕಪ್ಪೆಯನ್ನು ಹಿಡಿದು ತಿನ್ನುತ್ತಿರುವ ಕಿಂಗ್‌ಫಿಷರ್‌; ಸರಸದಲ್ಲಿ ತೊಡಗಿರುವ ಪೇಯ್ಡ್‌ ಕಿಂಗ್‌ಫಿಷರ್‌, ಎಲ್ಲ ಗರಿಗಳನ್ನೂ ಬಿಚ್ಚಿ ವಯ್ಯಾರದಿಂದ ಹೆಜ್ಜೆ ಹಾಕುತ್ತಿರುವ ನವಿಲು; ಹಿಮಾಲಯ ಪರ್ವತಶ್ರೇಣಿಯಲ್ಲಿ ಕಾಣಿಸಿಕೊಳ್ಳುವ ವೆರ್ಡಿಟರ್‌ ವಿಲ್ಟ್‌ ಬರ್ಡ್‌, ರುಸೆಟ್‌ ಸ್ಪೆರೋವ್‌, ವೈಟ್‌ ಕ್ರೆಸ್ಟೆಡ್‌ ಲಾಫಿಂಗ್‌ ತ್ರಶ್‌ನಂತಹ ಹಕ್ಕಿಗಳ ಚಿತ್ರಗಳು ಕೋರೈಸಿದವು.

ಹುಬ್ಬಳ್ಳಿಯಲ್ಲಿ ಸ್ಟುಡಿಯೊ ನಡೆಸುತ್ತ ಛಾಯಾಗ್ರಹಣ ವೃತ್ತಿ ಆರಂಭಿಸಿದ ಶಶಿ ಸಾಲಿ 25 ವರ್ಷಗಳಿಂದ ಫೋಟೊಗ್ರಫಿ ಮಾಡುತ್ತಿದ್ದಾರೆ. ಆರಂಭದಲ್ಲಿ ವನ್ಯಜೀವಿಗಳ ಫೋಟೊ ಸೆರೆಹಿಡಿಯುವುದನ್ನು ಹವ್ಯಾಸವಾಗಿ ಬೆಳೆಸಿಕೊಂಡ ಅವರು ರಾಜ್ಯದ ಹಲವು ವನ್ಯಜೀವಿ ಛಾಯಾಗ್ರಾಹಕರೊಂದಿಗೆ ದೇಶದ ವಿವಿಧ ವನ್ಯಜೀವಿ ತಾಣಗಳಿಗೆ ತೆರಳಿ ಸುಂದರ ಫೋಟೊಗಳನ್ನು ಸೆರೆಹಿಡಿದಿದ್ದಾರೆ. ರಾಯಲ್‌ ಫೋಟೊಗ್ರಫಿ ಸೊಸೈಟಿ ಆಫ್‌ ಲಂಡನ್‌ನಲ್ಲೂ ಅವರು ವನ್ಯಜೀವಿಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದಾರೆ.

‘ನಾಲ್ಕೈದು ವರ್ಷಗಳಿಂದ ಹಕ್ಕಿಗಳ ಫೋಟೊ ತೆಗೆಯುವ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ರಾಜ್ಯದ ವಿವಿಧೆಡೆ ಸಂಚರಿಸಿ 200ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳ ಫೋಟೊ ಸೆರೆ ಹಿಡಿದಿದ್ದೇನೆ. ಈಗ ಪ್ರತಿ ಭಾನುವಾರ ಕನಿಷ್ಠ ಅರ್ಧ ಗಂಟೆ ಹಕ್ಕಿಗಳ ಫೋಟೊಗ್ರಫಿಗಾಗಿಯೇ ಮೀಸಲಿಡುತ್ತಿದ್ದೇವೆ’ ಎನ್ನುತ್ತಾರೆ ಶಶಿ ಸಾಲಿ.

‘ಮಾರ್ಚ್‌ನಿಂದ ಜೂನ್‌ವರೆಗೆ ಹಕ್ಕಿಗಳ ಸಾಂಸಾರಿಕ ಜೀವನ ಹೆಚ್ಚಾಗಿ ನಡೆಯುತ್ತದೆ. ಗೂಡು ಕಟ್ಟುವುದು, ಮೊಟ್ಟೆ ಇಟ್ಟು ಮರಿಯನ್ನು ಬೆಳೆಸುವ ದೃಶ್ಯವನ್ನು ಕಾಣಬಹುದು. ಒಮ್ಮೆಮ್ಮೆ ದಿನವಿಡೀ ಕಾದು ಕುಳಿತರೂ ಒಂದೂ ಒಳ್ಳೆಯ ಫೋಟೊ ಸೆರೆ ಹಿಡಿಯಲು ಸಾಗುವುದಿಲ್ಲ. ಮರಿಗೆ ಗುಟುಕು ತಿನ್ನಿಸುವುದು, ಹಾರುವುದನ್ನು ಕಲಿಸುವಂತಹ ದೃಶ್ಯಗಳನ್ನು ಸೆರೆಹಿಡಿದಾಗ ಆಗುವ ಖುಷಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ’ ಎಂದು ಶಶಿ ನಗೆ ಬೀರುತ್ತಾರೆ.

‘ಅಣ್ಣನ ಜೊತೆಗೆ ಸ್ಟುಡಿಯೊದಲ್ಲಿ ಕೆಲಸ ಮಾಡುತ್ತಿರುವಾಗ ಫೋಟೊಗ್ರಫಿಯ ಬಗ್ಗೆ ಆಸಕ್ತಿ ಮೂಡಿತು. ನಾಲ್ಕೈದು ವರ್ಷಗಳಿಂದ ಹಕ್ಕಿಗಳ ಫೋಟೊ ಸೆರೆಹಿಡಿಯಲು ಆರಂಭಿಸಿದೆ. ಅಣ್ಣನ ಜೊತೆಗೆ ಪ್ರತಿ ಭಾನುವಾರ ಯಾವುದಾದರೂ ಒಂದು ಕಡೆ ಹಕ್ಕಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ. ಸುಮಾರು 150 ಪ್ರಭೇದದ ಹಕ್ಕಿಗಳ ಚಿತ್ರಗಳನ್ನು ಸೆರೆ ಹಿಡಿದಿದ್ದೇನೆ. ಟ್ರೆಕ್ಕಿಂಗ್‌ ಹವ್ಯಾಸವೂ ಇರುವುದರಿಂದ ಹಿಮಾಲಯ ಶ್ರೇಣಿಯ ಹಲವು ಬಗೆಯ ಹಕ್ಕಿಗಳ ಫೋಟೊಗಳನ್ನೂ ತೆಗೆದಿದ್ದೇನೆ’ ಎಂದು ಶೋಭಾ ಅವರು ತಾವು ಸೆರೆ ಹಿಡಿದು ಫೋಟೊಗಳ ವಿವರಣೆ ನೀಡತೊಡಗಿದರು.

ಗೂಬೆ ಮರಿ:  ‘ಪರಿಚಯಸ್ಥರ ಮನೆಯಲ್ಲಿ ಗೂಬೆ ಮರಿ ಹಾಕಿದೆ ಎಂಬುದು ಗೊತ್ತಾಯಿತು. ಹೋಗಿ ಮೊದಲು ಫೋಟೊ ತೆಗೆದಾಗ ಎರಡು ಹಕ್ಕಿಗಳು ಮಾತ್ರ ಕಂಡವು. ಆ ಬಳಿಕ ಫೋಟೊ ತೆಗೆಯುತ್ತಾ ಹೋದಂತೆ ಏಳು ಮರಿಗಳು ಇರುವುದು ಗೊತ್ತಾಯಿತು. ಹತ್ತಿಗೆ ಮರಿಯನ್ನು ಅಂಟಿಸಿಟ್ಟಂತೆ ಕಾಣುತ್ತಿತ್ತು’ ಎಂದು ‘ಬಾರ್ನ್ ಗೂಬೆ’ ಚಿತ್ರ ಸೆರೆಹಿಡಿದ ಕಥೆ ಹೇಳಿದರು.

‘ನಮ್ಮ ಸುತ್ತ ನೂರಾರು ಬಗೆಯ ಹಕ್ಕಿಗಳಿವೆ. ಕಿವಿ ಹಾಗೂ ಕಣ್ಣನ್ನು ತೆರೆದುಕೊಂಡರೆ ಅವು ಕಾಣಿಸಿಕೊಳ್ಳುತ್ತವೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಬೆಳಕು, ಆ್ಯಂಗಲ್‌, ಫೋಕಸ್‌ ಆಗುವವರೆಗೆ ಕಾಯುವ ತಾಳ್ಮೆ ಇರಬೇಕು’ ಎಂದು ಅಭಿಪ್ರಾಯಪಟ್ಟರು.

150ಕ್ಕೂ ಹೆಚ್ಚು ಫೋಟೊಗಳನ್ನು ಪ್ರದರ್ಶಿಸಲಾಗಿದೆ. ಸೋಮವಾರ ಸಂಜೆವರೆಗೆ ಕುವೆಂಪು ಕನ್ನಡ ಭವನದಲ್ಲಿ ಪ್ರದರ್ಶನಗೊಳ್ಳಲಿವೆ.

ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ಶಾಸಕ ಎಸ್‌.ಎ. ರವೀಂದ್ರನಾಥ್‌, ‘ಬರಿ ರಾಜಕಾರಣಿಗಳು ಏನು ಮಾಡುತ್ತಾರೆ? ಸಮಾಜದಲ್ಲಿ ಏನು ಕೆಟ್ಟದ್ದು ನಡೆಯುತ್ತಿವೆ ಎಂಬುದನ್ನು ತೋರಿಸುವುದಕ್ಕಿಂತ ಇಂಥ ಒಳ್ಳೆಯ ಛಾಯಾಚಿತ್ರಗಳನ್ನು ಸೆರೆಹಿಡಿದು ಸಮಾಜಕ್ಕೆ ತೋರಿಸಬೇಕು’ ಎಂದು ಸಲಹೆ ನೀಡಿದರು.

ನೀರು ಪಾಲಾದ ಮೊಟ್ಟೆ ಕಥೆ

‘ನಾವು ಕಲಘಟಗಿಗೆ ಮೊದಲ ದಿನ ಹೋದಾಗ ಬ್ಲ್ಯಾಕ್‌ ವಿಂಗ್‌ ಸ್ಟಿಲ್ಟ್‌ ಹಕ್ಕಿಯು ಒಣಗಿದ ಕೆರೆಯ ನಡುವೆ ನಾಲ್ಕು ಮೊಟ್ಟೆಗಳನ್ನು ಇಟ್ಟು ಜೋಪಾನ ಮಾಡುತ್ತಿರುವ ದೃಶ್ಯ ಸೆರೆ ಸಿಕ್ಕಿತು. ಮರುದಿನ ಸಣ್ಣದಾಗಿ ಮಳೆ ಬಂದಿದ್ದರಿಂದ ಕೆರೆಗೆ ಸ್ವಲ್ಪ ಪ್ರಮಾಣ ನೀರು ಹರಿದುಬಂತು. ಎರಡನೇ ದಿನ ಹೋದಾಗ ತಾಯಿ ಹಕ್ಕಿ ಮಣ್ಣಿನ ಹೆಂಟೆಗಳನ್ನು ಸೇರಿಸಿ ಸುಮಾರು ಒಂದು ಅಡಿ ಎತ್ತರದ ಪಿರಮಿಡ್‌ ಮಾಡಿ ಮೊಟ್ಟೆಗಳನ್ನು ಜೋಪಾನ ಮಾಡಲು ಹೋರಾಟ ನಡೆಸುತ್ತಿದ್ದ ದೃಶ್ಯ ಕಂಡುಬಂತು. ಅಂದು ಸಹ ಮಳೆ ಜೋರಾಗಿ ಸುರಿಯಿತು. ಮರುದಿನ ಬೆಳಿಗ್ಗೆ ಹೋಗಿ ನೋಡಿದಾಗ ಮೊಟ್ಟೆ ನೀರಿನೊಳಗೆ ಮುಳುಗಿತ್ತು. ಅದೇ ಜಾಗದಲ್ಲಿ ಹಕ್ಕಿ ಮಾತ್ರ ನೀರಿನಲ್ಲಿ ನಿಂತುಕೊಂಡಿತ್ತು. ಕೆರೆಯಲ್ಲಿ ಹೂಳು ಹೆಚ್ಚಿನ ಪ್ರಮಾಣದಲ್ಲಿತ್ತು. ಮೊಟ್ಟೆ ನೀರು ಪಾಲಾಗುತ್ತದೆ ಎಂದು ಗೊತ್ತಾಗಿದ್ದರೂ ನಮ್ಮಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ’ ಎಂದು ಶೋಭಾ ಸಾಲಿ ಬೇಸರದಿಂದಲೇ ತಮ್ಮ ಅನುಭವ ಹಂಚಿಕೊಂಡರು.

ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ

ಜಿಲ್ಲಾ ಛಾಯಾಗ್ರಾಹಕರ ಸಂಘದ 39ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಛಾಯಾಗ್ರಹಣ ದಿನಾಚರಣೆ ಸಮಾರಂಭದಲ್ಲಿ ಐವರು ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.

ದಾವಣಗೆರೆಯ ಎಚ್‌.ಬಿ. ಮಂಜುನಾಥ, ಸಂಘದ ಅಧ್ಯಕ್ಷ ಆರ್‌.ಎನ್‌. ಪಾಟೀಲ್‌, ಬೆಂಗಳೂರಿನ ವನ್ಯಜೀವಿ ಛಾಯಾಗ್ರಾಹಕರಾದ ಎಚ್‌.ಎನ್‌. ಅಲ್ಲಮ ಪ್ರಭು, ಬಿ. ಶ್ರೀನಿವಾಸ್‌ ಹಾಗೂ ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ ಎಸ್‌. ತಿಪ್ಪೇಸ್ವಾಮಿ ಅವರನ್ನು ಗೌರವಿಸಲಾಯಿತು.

ಸಮಾರಂಭ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ, ‘ಹಿಂದಿನ ಛಾಯಾಗ್ರಹಣಕ್ಕೂ ಇಂದಿಗೂ ಅಜಗಜಾಂತರವಿದೆ. ಇಂದು ಮಕ್ಕಳು ಸಹ ಮೊಬೈಲ್‌ನಲ್ಲಿ ಫೋಟೊ ತೆಗೆದು ಕ್ಷಣಮಾತ್ರದಲ್ಲಿ ಕಳುಹಿಸುತ್ತಿದ್ದಾರೆ’ ಎಂದರು. ತಮ್ಮ ಬಾಲ್ಯದ ಕಾಲದಲ್ಲಿ ಫೋಟೊ ತೆಗೆಸಿಕೊಂಡ ಕ್ಷಣಗಳನ್ನು ಮೆಲುಕು ಹಾಕಿದರು.

ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಉಪನ್ಯಾಸ ನೀಡಿದರು. ಸಂಘದ ಗೌರವಾಧ್ಯಕ್ಷ ಸುರಭಿ ಶಿವಮೂರ್ತಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗಜಾನನ ಭೂತೆ, ಉಪಾಧ್ಯಕ್ಷ ಎ.ಎಲ್‌. ತಾರಾನಾಥ್‌, ಖಜಾಂಚಿ ಫಕೀರಸಾ ಬದ್ದಿ ಇದ್ದರು. ಬಸವರಾಜ ಪ್ರಾರ್ಥಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !