ಗುರುವಾರ , ಜನವರಿ 28, 2021
23 °C

‘ಬಿಜೆಪಿ ಹಿಂದುಳಿದ ವರ್ಗದ ವಿರೋಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿದ್ದು, ಹಿಂದುಳಿದ ವರ್ಗ ‘ಅ’ ಮತ್ತು ಹಿಂದುಳಿದ ವರ್ಗ ‘ಬ’ ವರ್ಗವನ್ನು ನಿರ್ಲಕ್ಷ್ಯಿಸಲಾಗಿದೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಉಮೇಶ್ ಬಾಬು ದೂರಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಕರುಣಾಕರ ರೆಡ್ಡಿ ಅವರು ಎಲ್ಲ ವರ್ಗಕ್ಕೂ ಅನ್ವಯವಾಗುವಂತೆ ಮೀಸಲಾತಿ ಮಾಹಿತಿ ಒದಗಿಸಬೇಕಿತ್ತು. ಹಿಂದುಳಿದ ಸಮುದಾಯಗಳಿಂದ ಯಾರೂ ಸದಸ್ಯರಿಲ್ಲವೇ, ಜಿಲ್ಲೆಯಲ್ಲಿ ಜನಸಂಖ್ಯೆಯೇ ಇಲ್ಲವೇ’ ಎಂದು ಪ್ರಶ್ನಿಸಿದರು.

ಹಗರಿಬೊಮ್ಮನಹಳ್ಳಿ ‘ಅ’ ವರ್ಗಕ್ಕೆ 2 ಸ್ಥಾನ, ಹಡಗಲಿ, ಕೊಟ್ಟೂರಿಗೆ ತಲಾ ಒಂದು ಸ್ಥಾನ ಮೀಸಲಿಟ್ಟಿದ್ದಾರೆ. ಮೂರು ತಾಲ್ಲೂಕಿನಲ್ಲಿ ಮಾತ್ರ ಹಿಂದುಳಿದ ವರ್ಗಗಳಿವೆಯೇ. ಬಳ್ಳಾರಿ ಜಿಲ್ಲೆಯ ಉಳಿದ 8 ತಾಲ್ಲೂಕಿನಲ್ಲಿ ಒಂದೇ ಒಂದು ಸ್ಥಾನ ಒದಗಿಸದೇ ದೊಡ್ಡ ಅನ್ಯಾಯವನ್ನು ಮಾಡಿದ್ದು, ತಕ್ಷಣವೇ ಪಟ್ಟಿ ಹಿಂಪಡೆದು, ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

‘ರಾಜ್ಯದಾದ್ಯಂತ ಪ್ರಕಟವಾಗಿರುವ ಮೀಸಲಾತಿ ಪಟ್ಟಿ ಹಣವಂತರ ಪರವಾಗಿದ್ದು, ಅವೈಜ್ಞಾನಿಕವಾಗಿದೆ. ಈ ಪಟ್ಟಿ ದೋಷಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡುತ್ತೇನೆ’ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಹಿಂದುಳಿದ ವರ್ಗದ ವಿರೋಧಿ ಸರ್ಕಾರ. ಬಿಜೆಪಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಕಾಂಗ್ರೆಸ್‍ಗೆ ಹೆಚ್ಚಿನ ಬಹುಮತ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ‘ಬಿ’ ಫಾರಂಗಾಗಿ ಪೈಪೋಟಿ ನಡೆಯುತ್ತಿದೆ ಅಷ್ಟೇ. ಇಲ್ಲಿ ಗುಂಪುಗಾರಿಕೆ, ಬಣ ಪ್ರಶ್ನೆಯೇ ಇಲ್ಲ. ಟಿಕೆಟ್‍ ಘೋಷಣೆಯಾದಾಗ ಎಲ್ಲವೂ ಸರಿಯಾಗಿ ಕಾಂಗ್ರೆಸ್‍ ಪಕ್ಷವನ್ನು ಗೆಲ್ಲಿಸುತ್ತಾರೆ ಎಂದು ತಿಳಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ತಾಲ್ಲೂಕಿಗೆ ಟಿಕೆಟ್ ಹಂಚಿಕೆ ಮಾಡುವಾಗ ರಾಜಕೀಯ ಪಕ್ಷಗಳು ಸ್ಥಳೀಯವಾಗಿರುವ ಹಿಂದುಳಿದ ವರ್ಗದ ಅಭ್ಯರ್ಥಿಗೆ ‘ಬಿ’ ಫಾರಂ ಕೊಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಿಮ್ಮಣ್ಣ, ಬಳಿಗನೂರು ಸುರೇಶ್, ಬಸವನಗೌಡ, ಮಂಜುನಾಥ್, ಶಿವರಾಜ್, ನಾಗರಾಜ್, ರವಿಕುಮಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು