ಮೊಳಗಿದ ಮೋದಿ ಘೋಷಣೆ, ತೇಲಾಡಿದ ‘ಕಮಲ’ ಬಾವುಟ

ಬುಧವಾರ, ಏಪ್ರಿಲ್ 24, 2019
28 °C
ರೋಡ್‌ ಶೋ ನಡೆಸಿ ಸಂಸದ ಸಿದ್ದೇಶ್ವರ ನಾಮಪತ್ರ ಸಲ್ಲಿಕೆ

ಮೊಳಗಿದ ಮೋದಿ ಘೋಷಣೆ, ತೇಲಾಡಿದ ‘ಕಮಲ’ ಬಾವುಟ

Published:
Updated:
Prajavani

ದಾವಣಗೆರೆ: ಮೊಳಗಿದ ‘ಮೋದಿ’, ‘ಮೋದಿ’ ಘೋಷಣೆ. ‘ಚೌಕೀದಾರ್‌’ ಟಿಶರ್ಟ್‌, ಮೋದಿ ಮುಖವಾಡ ಹಾಕಿಕೊಂಡು ಸಂಭ್ರಮಿಸಿದ ಯುವಕರು. ಜನಪದ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಕಾರ್ಯಕರ್ತರು. ತೇಲಾಡಿದ ‘ಕಮಲ’ ಪಕ್ಷದ ಧ್ವಜ...

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನಾಮಪತ್ರ ಸಲ್ಲಿಸಲು ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ರೋಡ್‌ ಶೋನಲ್ಲಿ ಕಂಡುಬಂದ ದೃಶ್ಯಗಳಿವು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಸಿದ್ದೇಶ್ವರ ಅವರು ನಗರದೇವತೆಗೆ ಪೂಜೆ ಸಲ್ಲಿಸಿದರು. ಬಳಿಕ ಯಡಿಯೂರಪ್ಪ, ಜಿಲ್ಲೆಯ ಬಿಜೆಪಿ ಶಾಸಕರುಗಳೊಂದಿಗೆ ತೆರೆದ ವಾಹನವನ್ನೇರಿ ರೋಡ್‌ ಷೋ ಆರಂಭಿಸಿದರು.

ಹೊಂಡದ ಸರ್ಕಲ್‌ಗೆ ಬಂದಾಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ‘ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ದೇಶವಾಗಲಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಿದ್ದೇಶ್ವರ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು. ಬಳಿಕ ಅವರು ಬೇರೆ ಜಿಲ್ಲೆಗೆ ಪ್ರಚಾರ ನಡೆಸಲು ತೆರಳಿದರು.

ಸುಡುವ ಬಿಸಿಲನ್ನೂ ಲೆಕ್ಕಿಸದೇ ನಂದಿಕೋಲು, ನಾಸಿಕ್‌ ಡೋಲ್‌ಗಳ ಕಲಾವಿದರೊಂದಿಗೆ ಕಾರ್ಯಕರ್ತರು ಹೆಜ್ಜೆ ಹಾಕಿದರು. ಕಾರ್ಯಕರ್ತರಿಂದ ‘ಮೋದಿ’ ಮುಖವಾಡವನ್ನು ಪಡೆದು ಮಕ್ಕಳು ಹಾಕಿಕೊಂಡು ಸಂಭ್ರಮಿಸಿದರು. ಮೆರವಣಿಗೆಯು ಅರುಣಾ ಚಿತ್ರ ಮಂದಿರ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಸಾಗಿ ರಾಮ್‌ ಆ್ಯಂಡ್‌ ಕೋ ವೃತ್ತದಲ್ಲಿ ಅಂತ್ಯಗೊಂಡಿತು.

ಈ ವೇಳೆ ಮಾತನಾಡಿದ ಸಿದ್ದೇಶ್ವರ, ‘ನಮ್ಮ ಗೆಲುವು ನಿಶ್ಚಿತ. ಹಾಗೆಂದು ಮನೆಯಲ್ಲಿ ಮಲಗಿಕೊಳ್ಳಬೇಡಿ. ಚುನಾವಣೆಯೂ ಒಂದು ಯುದ್ಧ. ಏನು ಬೇಕಾಗದರೂ ಆಗಬಹುದು. ನನ್ನ ಎದುರಾಳಿ ಕಾಂಗ್ರೆಸ್‌ ಆಗಿದ್ದು, ಅತ್ಯಧಿಕ ಮತಗಳ ಅಂತರದಿಂದ ಅದನ್ನು ಸೋಲಿಸಬೇಕು. ಕಾರ್ಯಕರ್ತರು ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಒಂದು ಗಂಟೆ ಮೋದಿ ಸರ್ಕಾರದ ಸಾಧನೆಯನ್ನು ತಿಳಿಸಬೇಕು. ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರ ಮನೆಗಳಿಗೂ ಹೋಗಿ ಮನವರಿಕೆ ಮಾಡಿಕೊಡಿ’ ಎಂದು ಮನವಿ ಮಾಡಿದರು.

ದಾವಣಗೆರೆ ಕ್ಷೇತ್ರದ ಬಿಜೆಪಿ ಉಸ್ತುವಾರಿ ಆಯನೂರು ಮಂಜುನಾಥ, ‘ವಿರೋಧ ಪಕ್ಷಗಳ ಕೆಲ ಹಿರಿಯ ನಾಯಕರು ಇಂದು ಮೋದಿ ಆಡಳಿತವನ್ನು ಶ್ಲಾಘಿಸುತ್ತಿದ್ದಾರೆ. ಮೋದಿ ಪ್ರಧಾನಿಯಾಗಲು ಅಡ್ಡಿಪಡಿಸುವುದು ಬೇಡ ಎಂದು ದಾವಣಗೆರೆಯಲ್ಲೂ ಚುನಾವಣೆಗೆ ನಿಲ್ಲದೇ ತ್ಯಾಗ ಮಾಡಿದ ಕಾಂಗ್ರೆಸ್‌ನ ಇಬ್ಬರು ನಾಯಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ ಹೆಸರನ್ನು ಹೇಳದೇ ವ್ಯಂಗ್ಯವಾಡಿದರು.

ಶಾಸಕ ಮುರುಗೇಶ ನಿರಾಣಿ, ಹೊಳಲ್ಕೆರೆ ಶಾಸಕ ಎಚ್‌. ಚಂದ್ರಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಜಿ ಶಾಸಕ ಬಸವರಾಜ ನಾಯ್ಕ, ಎಚ್‌. ಆನಂದಪ್ಪ, ಮುಖಂಡರಾದ ಎ.ಎಚ್‌. ಶಿವಯೋಗಿಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಅವರೂ ಇದ್ದರು.

ಮೆರವಣಿಗೆ ಮುಗಿದ ಬಳಿಕ ಸಿದ್ದೇಶ್ವರ ಅವರು ಜಿಲ್ಲಾಡಳಿತ ಭವನಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.

ಯಾರು ಏನೆಂದರು?
ದಾವಣಗೆರೆಯಲ್ಲಿ ಸಿದ್ದೇಶ್ವರ ಈಗಾಗಲೇ ಗೆದ್ದಾಗಿದೆ. ಎಷ್ಟು ಲಕ್ಷ ಮತಗಳ ಅಂತರದಲ್ಲಿ ಎಂಬುದರ ಲೆಕ್ಕ ಆಗಬೇಕಾಗಿದ್ದು, ಅದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ.
– ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

*
ಎಲ್ಲಾ ತಾಲ್ಲೂಕುಗಳಲ್ಲೂ ಮತ್ತೊಂದು ಸಾರಿ ಮೋದಿ ನಾಯಕತ್ವದ ಬಿಜೆಪಿ ಎದುರು ಸೆಣಸಬೇಕಾದರೆ ಈಗ ಹೇಗೆ ಹೆದರಿಕೊಂಡಿದ್ದಾರೋ, ಮುಂದಿನ ಬಾರಿಯ ಚುನಾವಣೆಯಲ್ಲೂ ಸ್ಪರ್ಧಿಸಲು ಹೆದರಿಕೊಳ್ಳುವಂತೆ ಮಾಡಬೇಕು.
– ಆಯನೂರು ಮಂಜುನಾಥ, ದಾವಣಗೆರೆ ಕ್ಷೇತ್ರದ ಬಿಜೆಪಿ ಉಸ್ತುವಾರಿ

*
ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಎದ್ದೇಳದಂತೆ ಮಾಡಿರುವುದಕ್ಕೆ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ಕೂಗು ಹಾಕಿದರೆ 10 ಸಾವಿರ ಜನ ಬರುತ್ತಾರೆ ಎನ್ನುವವರು ಗಾಂಧಿ ಸರ್ಕಲ್‌ಗೆ ಬಂದು ಕೂಗು ಹಾಕಲಿ; ಎಷ್ಟು ಜನ ಬರುತ್ತಾರೆ ನೋಡುತ್ತೇವೆ.
– ಎಸ್‌.ಎ. ರವೀಂದ್ರನಾಥ, ಶಾಸಕ

*
ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿಯೇ ಇಲ್ಲದಂತಾಗಿದೆ. ಕಾಂಗ್ರೆಸ್‌ನ ಟಿಕೆಟ್‌, ಬಸ್‌ ಟಿಕೆಟ್‌ಗಿಂತಲೂ ಕಡೆಯಾಗಿದೆ. ಈ ಚುನಾವಣೆ ಬಳಿಕ ಅಪ್ಪ–ಮಕ್ಕಳ ಪಕ್ಷ ಹಾಗೂ ಕಾಂಗ್ರೆಸ್‌ ಪಕ್ಷ ಅವಸಾನಗೊಳ್ಳಲಿದೆ.
– ಎಂ.ಪಿ. ರೇಣುಕಾಚಾರ್ಯ, ಶಾಸಕ

*
ಜಿಲ್ಲೆಯಲ್ಲಿ ಬಿಜೆಪಿಯ ಆರು ಶಾಸಕರು ಆಯ್ಕೆಯಾಗಲು ಸಿದ್ದೇಶ್ವರ ಅವರೇ ಕಾರಣ. ಹೀಗಾಗಿ ಈ ಬಾರಿ ಜಗಳೂರು ಕ್ಷೇತ್ರದಲ್ಲಿ 50 ಸಾವಿರ ಮತಗಳ ಲೀಡ್‌ ತಂದುಕೊಡುತ್ತೇವೆ.
– ಎಸ್‌.ವಿ. ರಾಮಚಂದ್ರ, ಶಾಸಕ

*
ದಾವಣಗೆರೆ ಜಿಲ್ಲೆಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಉಳಿಸಿಕೊಳ್ಳಲು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸಿದ್ದೇಶ್ವರ ಅವರನ್ನು ಗೆಲ್ಲಿಸಬೇಕು.
– ಮಾಡಾಳ್‌ ವಿರೂಪಾಕ್ಷಪ್ಪ, ಶಾಸಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !