ಬುಧವಾರ, ನವೆಂಬರ್ 20, 2019
20 °C
ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಸಮ್ಮಿಶ್ರ ಸರ್ಕಾರ ವಜಾಗೊಳಿಸಲು ಒತ್ತಾಯ

Published:
Updated:
Prajavani

ದಾವಣಗೆರೆ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹಲವು ಶಾಸಕರ ರಾಜೀನಾಮೆ ಪರಿಣಾಮ ಅಲ್ಪಮತಕ್ಕೆ ಕುಸಿದ ಸಮ್ಮಿಶ್ರ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಿಲ್ಲಾ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಅಶೋಕ ರಸ್ತೆ, ಗಾಂಧಿ ಸರ್ಕಲ್‌, ಪಿ.ಬಿ. ರಸ್ತೆ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿದರು. ತುಂತುರು ಮಳೆಯಲ್ಲೇ ನಡೆದುಕೊಂಡು ಬಂದ ಕಾರ್ಯಕರ್ತರು, ‘ಸಮ್ಮಿಶ್ರ ಸರ್ಕಾರ ತೊಲಗಲಿ’, ‘ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಲಿ’, ‘ಸಂವಿಧಾನ ಗಾಳಿಗೆ ತೂರಿದ ಸ್ಪೀಕರ್‌’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ‘13 ಶಾಸಕರು ರಾಜೀನಾಮೆ ನೀಡಿದ್ದರಿಂದ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದ ತಕ್ಷಣವೇ ನೈತಿಕ ಹೊಣೆ ಹೊತ್ತು ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ, ಕುಮಾರಸ್ವಾಮಿ ಸಂವಿಧಾನವನ್ನು ಗಾಳಿಗೆ ತೂರಿ ಭಂಡತನದಿಂದ ಅಧಿಕಾರ ನಡೆಸುತ್ತಿದ್ದಾರೆ. ಆ ಮೂಲಕ ರಾಜ್ಯದ ಜನರಿಗೆ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಕುಮಾರಸ್ವಾಮಿ ಮಾಡಿದ ಲೋಪದಿಂದಾಗಿಯೇ ಸಮ್ಮಿಶ್ರ ಸರ್ಕಾರದ ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಕೂಡಲೇ ಅವರೂ ರಾಜೀನಾಮೆ ನೀಡುವ ಮೂಲಕ ಸಂವಿಧಾನವನ್ನು ಗೌರವಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ಶಿವಶಂಕರ್‌, ‘ಲೋಕಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅಮಿತ್‌ ಶಾ ಅವರ ಆಟ ನಡೆಯುವುದಿಲ್ಲ ಎಂದು ಟೀಕಿಸಿದ್ದರು. ಆದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೇರಿ 26 ಸ್ಥಾನ ನಮಗೆ ಲಭಿಸಿತ್ತು. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಟೀಕಿಸಿದ್ದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ಗೆ ಒಂದೊಂದು ಸ್ಥಾನ ಮಾತ್ರ ಸಿಕ್ಕಿದೆ. ಕುಮಾರಸ್ವಾಮಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದರಿಂದ ಮಿತ್ರ ಪಕ್ಷಗಳ ಶಾಸಕರು ಬಂಡಾಯ ಎದ್ದು ರಾಜೀನಾಮೆ ನೀಡಿದ್ದಾರೆ. ಇದರ ಹಿಂದೆ ಬಿಜೆಪಿಯ ಕೈವಾಡ ಇಲ್ಲ. ನಮ್ಮ ತತ್ವ ಸಿದ್ಧಾಂತ ಒಪ್ಪಿಕೊಂಡು ಬಂದರೆ ಪಕ್ಷದ ಬಾಗಿಲು ಎಲ್ಲರಿಗೂ ತೆರೆದಿರುತ್ತದೆ’ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್‌ ಗಿರೀಶ್‌ ಬಾಬು ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಚ್‌.ಎನ್‌. ಶಿವಕುಮಾರ್‌, ಎನ್‌. ರಾಜಶೇಖರ್‌, ಉತ್ತರ ಕ್ಷೇತ್ರದ ಅಧ್ಯಕ್ಷ ಮುಕುಂದಪ್ಪ, ಮುಖಂಡರಾದ ಓಂಕಾರಪ್ಪ, ಎಲ್‌.ಡಿ. ಗೋಣೆಪ್ಪ, ಶಾಂತಕುಮಾರ್‌, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಮ್ಮ ಅವರೂ ಇದ್ದರು.

ಪ್ರತಿಕ್ರಿಯಿಸಿ (+)