31ರವರೆಗೂ ಫಸಲ್‌ ಬಿಮಾ ಹಣ ಪಾವತಿಗೆ ಅವಕಾಶ ನೀಡಲು ಆಗ್ರಹ

7

31ರವರೆಗೂ ಫಸಲ್‌ ಬಿಮಾ ಹಣ ಪಾವತಿಗೆ ಅವಕಾಶ ನೀಡಲು ಆಗ್ರಹ

Published:
Updated:

ದಾವಣಗೆರೆ: ಫಸಲ್‌ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಲು ಆಗಸ್ಟ್‌ 31ರವರೆಗೂ ಕಾಲಾವಕಾಶ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ. ಸತೀಶ್‌ ಆಗ್ರಹಿಸಿದರು.

ಈ ಮುಂಗಾರಿನ ಆರಂಭದಲ್ಲಿ ಮಳೆ ಉತ್ತಮವಾಗಿ ಬಂತು. ಆದರೆ, ನಂತರ ಮಳೆ ಇಳಿಮುಖವಾಗಿದೆ. ಇದರಿಂದ ಬೆಳೆಗಳ ಬೆಳವಣಿಗೆ ಕುಗ್ಗಿದೆ. ಬೆಳೆ ಹಸಿರಾಗಿ ಕಂಡರೂ ಇಳುವರಿ ತೀರಾ ಕುಸಿಯಲಿದೆ. ಸಾಲ ಮನ್ನಾ ಬಗ್ಗೆ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳದ ಕಾರಣ ರೈತರು ಬೆಳೆ ವಿಮೆ ಮಾಡಿಸುವುದು ತಡವಾಗಿದೆ. ಹೀಗಾಗಿ, ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

2016–17 ಮತ್ತು 2017–18ನೇ ಸಾಲಿನಲ್ಲಿ ಬೆಳೆ ನಷ್ಟ ಅನುಭವಿಸಿರುವ ಜಿಲ್ಲೆಯ ಅರ್ಧಕ್ಕೂ ಹೆಚ್ಚಿನ ರೈತರಿಗೆ ಫಸಲ್‌ ಬಿಮಾ ಹಣವನ್ನು ಇದುವರೆಗೂ ನೀಡಿಲ್ಲ. ಇದರಿಂದ ಈ ಬಾರಿ ಬೆಳೆ ಹಾಕಲು ರೈತರು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳೆ ವಿಮಾ ಪಾಲಿಸಿಯ ಶೇ 80ರಷ್ಟು ಕೇಂದ್ರ ಸರ್ಕಾರ, ಉಳಿದ ಶೇ 20ರಷ್ಟನ್ನು ರೈತರು ಪಾವತಿಸುತ್ತಾರೆ. ಫಸಲ್‌ ಬಿಮಾ ಯೋಜನೆಯ ನುಷ್ಠಾನದ ಹೊಣೆ ಹೊತ್ತಿರುವ ರಾಜ್ಯ ಸರ್ಕಾರ, ಅಗ್ರಿಕಲ್ಚರಲ್‌ ಇನ್‌ಶೂರೆನ್ಸ್‌ ಕಂಪನಿ ಆಫ್‌ ಇಂಡಿಯಾ ಮೂಲಕ ನಿರ್ವಹಣೆ ಮಾಡುತ್ತಿದೆ. ಆದರೆ, ಯೋಜನೆಯ ಅನುಷ್ಠಾನ ಯಶಸ್ವಿಯಾಗಿ ಮಾಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಮಳೆಯ ಅಸಮರ್ಪಕ ಹಂಚಿಕೆಯಿಂದಾಗಿ ಜಿಲ್ಲೆಯ 3,24,149 ಹೆಕ್ಟೇರ್‌ ಪೈಕಿ ಕೇವಲ 2,48,781 ಹೆಕ್ಟೇರ್‌ ಭೂಮಿಯಲ್ಲಿ ಬೆಳೆ ಬಿತ್ತನೆಯಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಸರ್ಕಾರ ಸಾಲ ಮನ್ನಾ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡು ರೈತರನ್ನು ಸಮಸ್ಯೆಯಿಂದ ಪಾರು ಮಾಡಬೇಕು ಎಂದು ಮುಖಂಡ ಆವರಗೊಳ್ಳ ಷಣ್ಮುಖಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಚ್‌.ಎನ್‌. ಗುರುನಾಥ್‌, ಉಮೇಶ್‌ ಪಾಟೀಲ್‌, ಕುಂದವಾಡ ಗಣೇಶಪ್ಪ, ಶಿರಮಗೊಂಡನಹಳ್ಳಿ ನಾಗರಾಜ್, ಬಿ.ಪಿ. ಮುಪ್ಪಣ್ಣ, ಆವರಗೊಳ್ಳ ರಾಜಶೇಖರಪ್ಪ, ಸಿದ್ದಪ್ಪ ಅವರೂ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !