ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಆರೋಪದಲ್ಲಿ ಹುರುಳಿಲ್ಲ: ಬಿಜೆಪಿ

ಡಿ. ಬಸವರಾಜ್‌ಗೆ ನೈತಿಕತೆ ಇದ್ದರೆ ಚರ್ಚೆಗೆ ಬರಲಿ: ಯಶವಂತರಾವ್‌
Last Updated 18 ಫೆಬ್ರುವರಿ 2020, 10:51 IST
ಅಕ್ಷರ ಗಾತ್ರ

ದಾವಣಗೆರೆ: ‘ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಕ್ರಮವಾಗಿ ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಬಿಜೆಪಿ ಸೇರ್ಪಡೆ ಮಾಡಿದೆ. ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ ಎನ್ನುವ ಕಾಂಗ್ರೆಸ್‌ ಮುಖಂಡ ಡಿ. ಬಸವರಾಜ್ ಹೇಳಿಕೆ ಖಂಡನೀಯ. ಅವರ ಆರೋಪದಲ್ಲಿ ಹುರುಳಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಗೌರವವಿದೆ. ಈ ವ್ಯವಸ್ಥೆ ಅನ್ವಯ ವಿಧಾನಪರಿಷತ್‌ ಸದಸ್ಯರಿಗೆ ಮತದಾನದ ಅವಕಾಶ ಸಿಕ್ಕಿದೆ. ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯರ ಹೆಸರೂ ಮತದಾರರ ಪಟ್ಟಿಯಲ್ಲಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್‌ನಿಂದ ಪಾಠ ಕಲಿಯಬೇಕಿಲ್ಲ’ ಎಂದು ತಿರುಗೇಟು ನೀಡಿದರು.

ಈ ಹಿಂದೆಬಿಬಿಎಂಪಿಯಲ್ಲಿ ಬಿಜೆಪಿಗೆ ಬಹುಮತ ಇದ್ದಾಗಲೂ ಕಾಂಗ್ರೆಸ್‌ ಅಕ್ರಮವಾಗಿ ಅಧಿಕಾರ ಹಿಡಿದಿತ್ತು. ಕೆಲ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ತಂದು ತನ್ನ ಬೇಳೆ ಬೇಯಿಸಿಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಇಂತಹ ಕಾಂಗ್ರೆಸ್‌ ನೀತಿ ಪಾಠ ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌, ‘1998ರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ದಿನೇಶ್‌ ಶೆಟ್ಟಿ ಅವರನ್ನುಯಾವ ಕಾರಣಕ್ಕೆ ಜೈಲಿಗೆ ಹಾಕಲಾಗಿತ್ತು ಎಂಬುದನ್ನು ಮೊದಲು ಕಾಂಗ್ರೆಸ್‌ ನಾಯಕರು ತಿಳಿಸಲಿ. ಮದುವೆಗೆ ಹೋದ ಪಾಲಿಕೆ ಸದಸ್ಯರನ್ನು ಬೆಂಗಳೂರಿನಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟ ಕಾಂಗ್ರೆಸ್‌ ನಾಯಕರಿಂದ ನೈತಿಕತೆಯ ಪಾಠ ಕೇಳುವ ಅಗತ್ಯ ಇಲ್ಲ’ ಎಂದು ಹೇಳಿದರು.

‘ಇಲ್ಲದ ಹೇಳಿಕೆ ನೀಡುವ ತಲೆತಿರುಕ ಡಿ. ಬಸವರಾಜ್‌. ನಾವು ಪರಿಷತ್‌ ಸದಸ್ಯರನ್ನು ಸೇರಿಸಿದ್ದೇವೆ ಎನ್ನುವ ಅವರು ಯಾಕೆ ಸೇರಿಸಬೇಕಿತ್ತು. ಅವರ ಆಡಳಿತದಲ್ಲಿ ಪಾಲಿಕೆಯಲ್ಲಿ ಎಂತಹ ಅಕ್ರಮ ನಡೆದಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ.ಕೋರ್ಟ್‌ ಆದೇಶ ಇದ್ದರೂ ಎಸ್‌.ಎಸ್‌. ಮಾಲ್‌ ಯಾಕೆ ಒಡೆದಿಲ್ಲ. ನಮ್ಮ ಬಗ್ಗೆ ಮಾತನಾಡುವ ಅವರ ನಾಟಕ ಎಲ್ಲರಿಗೂ ತಿಳಿದಿದೆ. ಫೆ. 19ರಂದು ಅವರ ಎಲ್ಲ ನಾಟಕಕ್ಕೆ ತೆರೆ ಬೀಳಲಿದೆ’ ಎಂದು ತಿರುಗೇಟು ನೀಡಿದರು.

‘ಕಾಂಗ್ರೆಸ್‌ ಅವಧಿಯಲ್ಲಿ ಆದ ಎಲ್ಲ ಅಕ್ರಮಗಳನ್ನು ದಾಖಲೆ ಸಮೇತ ಬಿಚ್ಚಿಡುತ್ತೇವೆ. ಡಿ. ಬಸವರಾಜ್‌ ಅವರಿಗೆ ನೈತಿಕತೆ ಇದ್ದರೆ ಈ ಬಗ್ಗೆ ಚರ್ಚೆಗೆ ಬರಲಿ. ಅವರು ಹೇಳಿದ ದಿನಾಂಕಕ್ಕೆ ಚರ್ಚೆಗೆ ಬರಲು ಸಿದ್ಧ’ ಎಂದು ಸವಾಲು ಹಾಕಿದರು.

ಪಾಲಿಕೆ ಸದಸ್ಯರಾದ ಬಿ.ಜಿ. ಅಜಯಕುಮಾರ್‌, ರಾಕೇಶ್‌ ಜಾಧವ್‌, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಆನಂದರಾವ್‌ ಶಿಂಧೆ, ಪ್ರವೀಣ ಜಾಧವ್‌, ಬಿ.ಎಸ್‌. ಜಗದೀಶ್‌, ಸಂಗನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT