ರಾಹುಲ್‌ ಗಾಂಧಿ ನಿಂತರೂ ಗೆಲುವು ನಮ್ಮದೆ: ಶಾಸಕ ರವೀಂದ್ರನಾಥ

ಶುಕ್ರವಾರ, ಮೇ 24, 2019
29 °C
‘ನಮ್ಮ ಪರಿವಾರ ಬಿಜೆಪಿ ಪರಿವಾರ’ ಅಭಿಯಾನ

ರಾಹುಲ್‌ ಗಾಂಧಿ ನಿಂತರೂ ಗೆಲುವು ನಮ್ಮದೆ: ಶಾಸಕ ರವೀಂದ್ರನಾಥ

Published:
Updated:
Prajavani

ದಾವಣಗೆರೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್‌ ಗಾಂಧಿ ನಿಂತರೂ ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ ಎಂದು ಶಾಸಕ ಎಸ್‌.ಎ. ರವೀಂದ್ರನಾಥ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ನಮ್ಮ ಪರಿಹಾರ ಬಿಜೆಪಿ ಪರಿವಾರ’ ಅಭಿಯಾನಕ್ಕೆ ಶಿರಮಗೊಂಡನಹಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಭಾನುವಾರ ಪಕ್ಷದ ಬಾವುಟ ಹಾರಿಸಿ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅಥವಾ ಶಾಸಕ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ ಅಭ್ಯರ್ಥಿಯಾದರೆ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಬಹುದೇ’ ಎಂಬ ಪ್ರಶ್ನೆಗೆ, ‘ಸಂಸದ ಜಿ.ಎಂ. ಸಿದ್ದೇಶ್ವರ ಈ ಬಾರಿಯೂ ನಮ್ಮ ಅಭ್ಯರ್ಥಿಯಾಗಲಿದ್ದಾರೆ. ಕಾಂಗ್ರೆಸ್‌ನಿಂದ ಯಾರೇ ಬಂದು ಸ್ಪರ್ಧಿಸಿದರೂ ಬಿಜೆಪಿ ಗೆಲುವು ನಿಶ್ಚಿತ. ಎಷ್ಟು ಅಂತರದಿಂದ ಗೆಲ್ಲುತ್ತೇವೆ ಎಂಬುದು ಮುಖ್ಯವಲ್ಲ’ ಎಂದು ಉತ್ತರಿಸಿದರು.

‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಒಂದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ’ ಎಂಬ ಪ್ರಶ್ನೆಗೆ, ‘ಇದು ಹೊಸತೇನಲ್ಲ. ಈ ಎರಡು ಪಕ್ಷಗಳು ಸೇರಿಕೊಂಡು ಮೊದಲಿನಿಂದಲೂ ಬಿಜೆಪಿ ಸೋಲಿಸಲು ಯತ್ನಿಸಿದ್ದವು. ಆದರೆ, ಯಶಸ್ಸು ಕಂಡಿರಲಿಲ್ಲ’ ಎಂದು ಹೇಳಿದರು.

‘ವಿದೇಶದಿಂದ ಕಪ್ಪುಹಣ ತರುವುದು, ನೋಟು ರದ್ದತಿ ವಿಚಾರಗಳಿಂದಾಗಿ 2014 ಚುನಾವಣೆ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಿದ್ದ ವರ್ಚಸ್ಸು ಈಗ ಕಡಿಮೆಯಾಗಿದೆ ಎಂದು ಅನಿಸುತ್ತಿಲ್ಲವೇ’ ಎಂಬ ಪ್ರಶ್ನೆಗೆ, ‘ಮೋದಿ ಸರ್ಕಾರ ಬಂದ ಬಳಿಕ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಕಪ್ಪು ಹಣ ವಾಪಸ್‌ ತರುವ ವಿಚಾರಕ್ಕೆ ಮೋದಿ ಅವರೇ ಉತ್ತರಿಸಬೇಕು’ ಎಂದು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ನವರು ಮೊದಲಿನಿಂದಲೂ ಅಪಪ್ರಚಾರ ಮಾಡುತ್ತಿದ್ದಾರೆ. ‘ಗರೀಬಿ ಹಠಾವೊ’ ಘೋಷಣೆ ಹಾಕುತ್ತ ಕಾಂಗ್ರೆಸ್‌ನವರು 50 ವರ್ಷಗಳ ಕಾಲ ಆಡಳಿತ ನಡೆಸಿದರೂ ಬಡತನ ನಿರ್ಮೂಲನೆ ಮಾಡಲಿಲ್ಲ. ಇಂದಿರಾ ಗಾಂಧಿ 17 ವರ್ಷಗಳ ಕಾಲ ಪ್ರಧಾನಿಯಾಗಿದ್ದರೂ ಮಹಿಳೆಯರು ಶೌಚಕ್ಕೆ ಬಯಲಿಗೆ ಹೋಗುವುದು ತಪ್ಪಲಿಲ್ಲ. ಆದರೆ, ಮೋದಿ ಇಂಥ ಸಣ್ಣ–ಪುಟ್ಟ ವಿಚಾರಗಳನ್ನೂ ಪರಿಗಣನೆಗೆ ತೆಗೆದುಕೊಂಡು ಉತ್ತಮ ಆಡಳಿತ ನೀಡಿದ್ದಾರೆ’ ಎಂದು ರವೀಂದ್ರನಾಥ ಸಮರ್ಥಿಸಿಕೊಂಡರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ. ಎ.ಎಚ್‌. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ, ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುಕುಂದಪ್ಪ, ಮುಖಂಡರಾದ ಶಿವರಾಜ ಪಾಟೀಲ, ಧನಂಜಯ ಕಡ್ಲೆಬಾಳು, ಬಿ.ಎಂ. ಸತೀಶ್‌ ಹಾಗೂ ಕಾರ್ಯಕರ್ತರು ಇದ್ದರು.

ಮನೆ ಮೇಲೆ ಹಾರಲಿದೆ ಬಿಜೆಪಿ ಬಾವುಟ

‘ನಮ್ಮ ಪರಿವಾರ ಬಿಜೆಪಿ ಪರಿವಾರ’ ಅಭಿಯಾನದಡಿ ಪ್ರತಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಮನೆಗಳ ಮೇಲೆ ಕನಿಷ್ಠ ಒಂದು ಸಾವಿರ ಬಾವುಟಗಳನ್ನು ಹಾರಿಸುತ್ತೇವೆ’ ಎಂದು ರವೀಂದ್ರನಾಥ ಹೇಳಿದರು.

ಕರಪತ್ರಗಳನ್ನು ಮನೆ–ಮನೆಗೆ ವಿತರಿಸುವ ಮೂಲಕ ಕೇಂದ್ರ ಸರ್ಕಾರದ ಐದು ವರ್ಷಗಳ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !