ಬುಧವಾರ, ನವೆಂಬರ್ 13, 2019
23 °C
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್‌

ದಾವಣಗೆರೆ: ರಕ್ತದಾನದ ಬಗ್ಗೆ ತಪ್ಪು ತಿಳಿವಳಿಕೆ ಬೇಡ

Published:
Updated:
Prajavani

ದಾವಣಗೆರೆ: ರಕ್ತದಾನದ ಬಗ್ಗೆ ತಪ್ಪು ಅಭಿಪ್ರಾಯ ಬೇಡ. ವಿದ್ಯಾರ್ಥಿಗಳು ರಕ್ತದಾನ ಕುರಿತು ಮಾಹಿತಿ ಪಡೆದು ಉಳಿದವರಿಗೂ ಹಂಚಬೇಕು ಎಂದು ಜಿಲ್ಲಾ ಆಸ್ಪತ್ರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್‌ ಹೇಳಿದರು.

ಇಲ್ಲಿನ ಎ.ಆರ್‌.ಎಂ. ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರೆಡ್‌ ರಿಬ್ಬನ್‌ ಕ್ಲಬ್‌, ಎನ್‌ಎಸ್‌ಎಸ್‌ ಘಟಕಗಳ ಆಶ್ರಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

50 ಜನ ವಿದ್ಯಾರ್ಥಿಗಳು 10 ಜನರಿಗೆ ರಕ್ತದಾನ ಬಗ್ಗೆ ಮಾಹಿತಿ ನೀಡಿದರೆ 500 ಜನರು ಮಾಹಿತಿ ಪಡೆದಂತಾಗುತ್ತದೆ. ಹೀಗೆ ಇದು ಹೆಚ್ಚುತ್ತಾ ಹೋಗಬೇಕು. ಮನುಷ್ಯ ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದರೂ ರಕ್ತದಲ್ಲಿರುವ ಜೀವಂತ ಕಣಗಳನ್ನು ಸೃಷ್ಠಿಸಲು ಸಾಧ್ಯವಿಲ್ಲ. ಆದರೆ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸಬಹುದು ಎಂದು ಕಿವಿಮಾತು ಹೇಳಿದರು.

ರಕ್ತದಾನದ ಬಗ್ಗೆ ಹಲವರಲ್ಲಿ ತಪ್ಪು ತಿಳಿವಳಿಕೆ ಇದೆ. ಅದನ್ನು ಹೋಗಲಾಡಿಸಿ ರಕ್ತದಾನದಿಂದ ಆರೋಗ್ಯವಂತರಾಗಿರಬಹುದು ಎಂಬುದನ್ನು ಮನದಟ್ಟು ಮಾಡುವ ಉದ್ದೇಶದಿಂದ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಕ್ತದಾನ ಮಾಡುವುದರಿಂದ ಬೊಬ್ಬು ಕಡಿಮೆಯಾಗುತ್ತದೆ. ಹೊಸ ರಕ್ತ ಉತ್ಪತ್ತಿಯಾಗುವುದರಿಂದ ಆರೋಗ್ಯವಂತರಾಗಿರಬಹುದು. ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 6 ತಿಂಗಳಿಗೊಮ್ಮೆ ರಕ್ತ ನೀಡಬಹುದು. 50 ಕೆ.ಜಿ.ಗಿಂತ ಮೇಲ್ಪಟ್ಟ ತೂಕದವರು ರಕ್ತದಾನ ಮಾಡಬಹುದು. 1 ಯುನಿಟ್‌ ರಕ್ತದಿಂದ 3 ಜನರಿಗೆ ರಕ್ತ ನೀಡಬಹುದು. ಒಬ್ಬರು ರಕ್ತದಾನ ಮಾಡುವುದರಿಂದ ಮೂವರ ಜೀವ ಉಳಿಸಬಹುದು. ರಕ್ತದಾನ ಪ್ರತಿಯೊಬ್ಬರ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಿ.ಎಚ್‌.ಪ್ಯಾಟಿ, ‘ರಕ್ತದಾನದಿಂದ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ವಿದ್ಯಾರ್ಥಿಗಳು ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಯೋಚಿಸದೆ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ರಕ್ತದಾನವೂ ಸಮಾಜಸೇವೆ. ಇದಕ್ಕೆ ಹಿಂಜರಿಕೆ ಬೇಡ. ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಿ’ ಎಂದು ಸಲಹೆ ನೀಡಿದರು.

ರಕ್ತದಾನಿ ಪ್ರತಾಪ್‌, ‘ದೇವಾಲಯಗಳಿಗೆ ಹೋಗಿ ಮುಡಿ ಕೊಟ್ಟು ಹರಕೆ ತೀರಿಸುವ ಬದಲು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ’ ಎಂದು ಕಿವಿಮಾತು ಹೇಳಿದರು.

ರಕ್ತದಾನಿ ನೇತ್ರಾವತಿ ಎಸ್‌., ಹುಡುಗರಿಗಿಂತ ಹೆಣ್ಣು ಮಕ್ಕಳಲ್ಲಿ ರಕ್ತದಾನ ಮಾಡುವ ಬಗ್ಗೆ ಹಿಂಜರಿಕೆ ಇದೆ. ಇದು ಸಲ್ಲ. ವಿದ್ಯಾರ್ಥಿನಿಯರು ಜಂಕ್ ಫುಡ್‌ ತಿನ್ನದೇ ಪೌಷ್ಟಿಕ ಆಹಾರ ಸೇವಿಸಿದರೆ ಮಾತ್ರ ರಕ್ತದಾನ ಮಾಡಬಹುದು’ ಎಂದರು.

ಹೆಚ್ಚು ಬಾರಿ ರಕ್ತದಾನ ಮಾಡಿದ ಮಂಗಳಾ ಕೆ.ಎಸ್–50 ಬಾರಿ, ನೇತ್ರಾವತಿ ಎಸ್‌. –46, ಪ್ರತಾಪ್‌–39 ಬಾರಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ರಕ್ತದಾನ ಶಿಬಿರ ನಡೆಯಿತು.

ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ್‌, ಸಹಾಯಕ ಪ್ರಾಧ್ಯಾಪಕ ಪ್ರೊ. ಅಂಜಿನಪ್ಪ ಡಿ., ಪ್ರೊ. ಕಾಡಜ್ಜಿ ಶಿವಪ್ಪ, ಮೌನೇಶ್‌, ಶಾಂತಪ್ಪ ಇದ್ದರು. ಪ್ರೊ. ಮೌನೇಶ್ವರ ಟಿ.ಎನ್. ನಿರೂಪಿಸಿದರು. ಪ್ರೊ. ಮನೋಹರ ಎಸ್‌.ಬಿ. ಸ್ವಾಗತಿಸಿದರು. ಡಾ. ರಾಕೇಶ್‌ ಬಿ.ಸಿ. ವಂದಿಸಿದರು.

ಪ್ರತಿಕ್ರಿಯಿಸಿ (+)