ದಾವಣಗೆರೆ: ‘ನೀರು, ಆಹಾರ ಸೇರಿದಂತೆ ಪ್ರತಿಯೊಂದಕ್ಕೂ ಪರ್ಯಾಯವಿದೆ. ಆದರೆ, ರಕ್ತಕ್ಕೆ ಮಾತ್ರ ಪರ್ಯಾಯವಿಲ್ಲ. ರಕ್ತ ಅವಶ್ಯ ಇದ್ದಾಗ ರಕ್ತವನ್ನೇ ನೀಡಬೇಕು. ಹೀಗಾಗಿ ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗಬೇಕು’ ಎಂದು ‘ಪ್ರಜಾವಾಣಿ’ ದಾವಣಗೆರೆ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಮಾತಾ ಅಮೃತಾನಂದಮಯಿ ಅವರ 70ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ‘ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ’ದ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಹಣ, ಭೂಮಿ, ಬಟ್ಟೆ, ಬಂಗಾರವನ್ನು ದಾನವಾಗಿ ನೀಡಿದರೂ, ಜೀವ ಉಳಿಸಿದ ಸಾರ್ಥಕತೆ ಬರುವುದಿಲ್ಲ. ಆದರೆ, ತುರ್ತಾಗಿ ರಕ್ತ ಅವಶ್ಯ ಇರುವವರಿಗೆ ರಕ್ತ ನೀಡುವುದರಿಂದ ಮತ್ತೊಬ್ಬರ ಜೀವ ಉಳಿಸಿದ ತೃಪ್ತಿ ಸಿಗುತ್ತದೆ’ ಎಂದು ಹೇಳಿದರು.
‘ಶಾಲೆಯ ಶಿಕ್ಷಕ, ಶಿಕ್ಷಕಿಯರು, ಸಿಬ್ಬಂದಿ, ವಿದ್ಯಾರ್ಥಿಗಳ ಪಾಲಕರು ರಕ್ತದಾನ ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ. ನೀವೆಲ್ಲರೂ ಒಂದು ರೀತಿಯಲ್ಲಿ ‘ರೋಲ್‌ಮಾಡೆಲ್’ಗಳಾಗಿದ್ದೀರಿ. ವಿದ್ಯಾರ್ಥಿಗಳು 18 ವರ್ಷ ಪೂರೈಸಿದ ಬಳಿಕ ರಕ್ತದಾನ ಮಾಡಬೇಕು. ಕುಟುಂಬದವರು ಹಾಗೂ ಸ್ನೇಹಿತರಿಗೂ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.
‘ಅಪಘಾತಕ್ಕೆ ಒಳಗಾದವರು ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ರಕ್ತದಾನ ಮಾಡಲು ಹಿಂಜರಿಯಬಾರದು. ಎಷ್ಟೇ ಬಾರಿ ರಕ್ತ ನೀಡಿದರೂ ಹೊಸ ರಕ್ತ ಉತ್ಪಾದನೆ ಆಗುತ್ತಲೇ ಇರುತ್ತದೆ’ ಎಂದು ಬಾಪೂಜಿ ರಕ್ತನಿಧಿಯ ವೈದ್ಯಾಧಿಕಾರಿ ಜಗದೀಶ್ವರಿ ತಿಳಿಸಿದರು.
ಶಿಬಿರದಲ್ಲಿ 26 ಜನರು ರಕ್ತದಾನ ಮಾಡಿದರು.
ಶಾಲೆಯ ಆಡಳಿತಾಧಿಕಾರಿ ನಂದೀಶ್, ಪ್ರಾಂಶುಪಾಲೆ ಪ್ರತಿಭಾ ಎನ್., ಉಪ ಪ್ರಾಂಶುಪಾಲ ಪ್ರತೀಕ್, ಲೈಫ್‌ಲೈನ್ ಸಂಸ್ಥೆಯ ಉಪಾಧ್ಯಕ್ಷ ಪೃಥ್ವಿರಾಜ್ ಬಾದಾಮಿ, ಕಾರ್ಯದರ್ಶಿ ಅನಿಲ್ ಬಾರೆಂಗಳ್, ನಿರ್ದೇಶಕರಾದ ನಟರಾಜ ಎಸ್.ಜಿ., ರಾಜುಭಂಡಾರಿ, ಶಾಲೆಯ ಶಿಕ್ಷಕರಾದ ಉಷಾ ಸುರೇಶ್, ಶಿಲ್ಪಾ, ಸಂತೋಷ್ ಕುಮಾರ್ ಬಿ.ಎಸ್. ಹಾಗೂ ಐಶ್ವರ್ಯಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.