ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಿನಿಮಾ ಮಂದಿರಗಳಿಗೆ ‘ಕೊರೊನಾ ವೈರಸ್’ ಬರೆ

ನಷ್ಟದ ಹಾದಿಯಲ್ಲಿರುವ ಥಿಯೇಟರ್‌ಗಳ ಆದಾಯಕ್ಕೂ ಬಿತ್ತು ಕತ್ತರಿ
Last Updated 21 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ನೆಚ್ಚಿನ ನಾಯಕ–ನಾಯಕಿಯರ ಅಭಿನಯ ಕಣ್ತುಂಬಿಕೊಳ್ಳಲು ಟಿಕೆಟ್‌ ಕೌಂಟರ್‌ಗಳ ಎದುರು ನೂಕು ನುಗ್ಗಲು ಇಲ್ಲ. ಅಭಿಮಾನಿಗಳ ಕೇಕೆ, ಶಿಳ್ಳೆಗಳಿಲ್ಲ. ‘ಕೊರೊನಾ ವೈರಸ್’ ಸೋಂಕಿನ ಭೀತಿಯ ಪರಿಣಾಮ ನಗರದ ಸಿನಿಮಾ ಮಂದಿರಗಳಲ್ಲೂ ನೀರವ ಮೌನ.

ಸಾಮಾನ್ಯವಾಗಿ ಶುಕ್ರವಾರ ಹೊಸ ಸಿನಿಮಾಗಳು ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತವೆ. ಸಿನಿ ಪ್ರಿಯರೂ ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಸ್ಟಾರ್‌ ನಾಯಕರ ಚಿತ್ರ ಬಿಡುಗಡೆಯಾದರಂತೂ ಶುಕ್ರವಾರ ಸಿನಿಮಾ ಮಂದಿರಗಳು ಕಿಕ್ಕಿರಿದು ತುಂಬಿರುತ್ತವೆ. ಆದರೆ, ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಪ್ರದರ್ಶನ ರದ್ದುಗೊಳಿಸುವಂತೆ ಹೊರಡಿಸಿರುವ ಆದೇಶದಿಂದ ಸಿನಿಮಾ ಮಂದಿರಗಳ ಆದಾಯಕ್ಕೆ ಕತ್ತರಿ ಬಿದ್ದಿದೆ. ಮೊದಲೇ ನಷ್ಟ ಅನುಭವಿಸುತ್ತಿರುವ ಸಿನಿಮಾ ಮಂದಿರಗಳ ಪಾಲಿಗೆ ಕೊರೊನಾ, ‘ಗಾಯದ ಮೇಲೆ ಬರೆ’ ಎಳೆದಿದೆ.

ನಗರದ ಎಂಟು ಸಿನಿಮಾ ಮಂದಿರಗಳು ಹಾಗೂ ಎರಡು ಸ್ಕ್ರೀನ್‌ಗಳಿರುವ ಎಸ್‌.ಎಸ್‌. ಮಾಲ್‌ಗೆ ಮಾರ್ಚ್‌ 14ರಿಂದ ಬೀಗಮುದ್ರೆ ಬಿದ್ದಿರುವುದು ಸಿನಿಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಮಾರ್ಚ್‌ 31ರವರೆಗೂ ಪ್ರದರ್ಶನ ರದ್ದುಗೊಳಿಸಿರುವಂತೆ ಸರ್ಕಾರ ಆದೇಶ ಹೊರಡಿಸಿರುವುದರಿಂದ ಸಿನಿಮಾ ಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಈ ತಿಂಗಳ ಸಂಬಳ ಸಿಗುವುದೋ ಇಲ್ಲವೋ ಎಂಬ ಚಿಂತೆಯೂ ಕಾಡುತ್ತಿದೆ.

‘ಸ್ಟಾರ್‌ ನಾಯಕರ ಚಿತ್ರ ಬಿಡುಗಡೆಯಾದರೆ ಪ್ರತಿದಿನ ಸುಮಾರು 2,500 ಜನ ಬರುತ್ತಿದ್ದರು. ಉಳಿದ ಸಿನಿಮಾಗಳ ಪ್ರದರ್ಶನ ಇದ್ದಾಗ ದಿನಕ್ಕೆ 500ರಿಂದ 600 ಜನ ಬರುತ್ತಿದ್ದರು. ಒಳ್ಳೆಯ ಚಿತ್ರ ಬಿಡುಗಡೆಯಾದರೆ ದಿನಕ್ಕೆ ₹ 70 ಸಾವಿರದಿಂದ ₹ 80 ಸಾವಿರದವರೆಗೆ ಕಲೆಕ್ಷನ್‌ ಆಗುತ್ತಿತ್ತು. ಸಾಮಾನ್ಯ ದಿನಗಳಂದು ಕನಿಷ್ಠ ₹ 10 ಸಾವಿರ ಆದಾಯ ಬರುತ್ತಿತ್ತು. ಸಿನಿಮಾ ಇಂಡಸ್ಟ್ರಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಸಂದರ್ಭದಲ್ಲೇ ಇದಕ್ಕೆ ಕೊರೊನಾ ಕಾಯಿಲೆ ಪೀಡಿಸತೊಡಗಿದೆ’ ಎಂದು ‘ಗೀತಾಂಜಲಿ’ ಸಿನಿಮಾ ಮಂದಿರದ ಮ್ಯಾನೇಜರ್‌ ಎಚ್‌.ವಿ. ಮಹದೇವಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮಾರ್ಚ್‌–ಏಪ್ರಿಲ್‌ನಲ್ಲಿ ಯುಗಾದಿ ಹಬ್ಬ, ಜಾತ್ರೆಗಳು ಬರುವುದರಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡಲು ಬರುತ್ತಿದ್ದರು. ಕೊರೊನಾ ಭೀತಿಯಿಂದಾಗಿ ಸಿನಿಮಾಗಳ ಶೂಟಿಂಗ್‌ ಸಹ ಮುಂದಕ್ಕೆ ಹಾಕಲಾಗಿದೆ. ಇದರಿಂದ ಸಿನಿಮಾಗಳ ಬಿಡುಗಡೆ ದಿನಾಂಕವೂ ಬದಲಾಗಲಿದೆ. ಹೀಗಾಗಿ ಈ ಬಾರಿ ಬೇಸಿಗೆಯಲ್ಲಿ ವಹಿವಾಟು ಕುಸಿಯಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸದ್ಯ ಮಾರ್ಚ್‌ 31ರವರಗೆ ಪ್ರದರ್ಶನ ರದ್ದುಗೊಳಿಸುವಂತೆ ಆದೇಶಿಸಲಾಗಿದೆ. ಕೊರೊನಾ ಭೀತಿಯಿಂದ ನಂತರವೂ ‘ಜನತಾ ಕರ್ಫ್ಯೂ’ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಸಿನಿಮಾ ಉದ್ಯಮ ಚೇತರಿಸಿಕೊಳ್ಳಲು ಬಹಳ ದಿನ ಬೇಕಾಗಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ಮೊದಲೇ ಸಿನಿಮಾ ಮಂದಿರಗಳಲ್ಲಿ ಸರಿಯಾಗಿ ಕಲೆಕ್ಷನ್‌ ಆಗುತ್ತಿರಲಿಲ್ಲ. ಈಗ ಪ್ರದರ್ಶನ ಬಂದ್‌ ಮಾಡಿರುವುದರಿಂದ ಆದಾಯ ಬರುವುದೇ ನಿಂತುಹೋಗಿದೆ. ಪುಷ್ಪಾಂಜಲಿ ಹಾಗೂ ಗೀತಾಂಜಲಿ ಸೇರಿ ಸುಮಾರು 15 ಜನ ನೌಕರರಿದ್ದೇವೆ. ನಮಗೆ ಕೆಲಸವೇ ಇಲ್ಲದಂತಾಗಿದೆ. ಕೂಲಿ ಹಣ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕ ಮೂಡಿದೆ’ ಎನ್ನುತ್ತಾರೆ ‘ಪುಷ್ಪಾಂಜಲಿ’ ಸಿನಿಮಾ ಮಂದಿರದ ನೌಕರ ಲೋಕೇಶ್‌.

‘ಶುಕ್ರವಾರ, ಶನಿವಾರ ಹಾಗೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದರು. ಉಳಿದ ದಿನ ಹೆಚ್ಚೇನೂ ಕಲೆಕ್ಷನ್‌ ಆಗುತ್ತಿರಲಿಲ್ಲ. ಪ್ರದರ್ಶನದ ಮೇಲಿನ ನಿರ್ಬಂಧ ತೆರೆದರೂ ಕೊರೊನಾ ಭೀತಿಯಿಂದ ಜನ ಸಿನಿಮಾ ಮಂದಿರಗಳಿಗೆ ಬರುತ್ತಾರೋ ಇಲ್ಲವೋ ಕಾದು ನೋಡಬೇಕು’ ಎಂದು ಹೇಳಿದರು.

‘ಇತ್ತೀಚೆಗೆ ಕಲೆಕ್ಷನ್‌ ಬಹಳ ಕಡಿಮೆಯಾಗುತ್ತಿತ್ತು. ಒಳ್ಳೆಯ ಸಿನಿಮಾ ಇದ್ದಾಗ ಮಾತ್ರ ಸಿನಿಮಾ ಮಂದಿರ ಭರ್ತಿಯಾಗುತ್ತಿತ್ತು. ‘ತ್ರಿನೇತ್ರ’ ಹಾಗೂ ‘ತ್ರಿಶೂಲ್’ ಸಿನಿಮಾ ಮಂದಿರಗಳಿಗೆ ತಿಂಗಳಿಗೆ ₹ 1.20 ಲಕ್ಷ ವಿದ್ಯುತ್‌ ಬಿಲ್‌ ಬರುತ್ತಿತ್ತು. ಈಗ ಪ್ರದರ್ಶನವೇ ರದ್ದಾಗಿರುವುದರಿಂದ ಬರುತ್ತಿದ್ದ ಅಲ್ಪ ಆದಾಯಕ್ಕೂ ಕತ್ತರಿ ಬಿದ್ದಂತಾಗಿದೆ’ ಎನ್ನುತ್ತಾರೆ ‘ತ್ರಿನೇತ್ರ’ ಸಿನಿಮಾ ಮಂದಿರದ ಸೂಪರ್‌ವೈಸರ್‌ ಜ್ಞಾನೇಶ್ವರಸಾ.

**

ಸಿನಿಮಾ ಇಂಡಸ್ಟ್ರಿ ಇಂದಲ್ಲ ನಾಳೆ ಚೇತರಿಸಿಕೊಳ್ಳುತ್ತದೆ. ಮೊದಲು ದೇಶ ಕೊರೊನಾ ಸೋಂಕು ಮುಕ್ತವಾದರೆ ಸಾಕು. ನಾಗರಿಕರೂ ಈ ನಿಟ್ಟಿನಲ್ಲಿ ಸಹಕರಿಸಬೇಕು.

- ಎಚ್‌.ವಿ. ಮಹದೇವಗೌಡ, ಮ್ಯಾನೇಜರ್‌, ಗೀತಾಂಜಲಿ ಥಿಯೇಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT