ಸಂಧಾನ ಸಫಲ: ಬಹಿಷ್ಕಾರ ಹಿಂಪಡೆದು ಮತದಾನ

ಸೋಮವಾರ, ಮೇ 27, 2019
33 °C
ಬೋರಗೊಂಡನಹಳ್ಳಿ ಕೆರೆಗೆ ಬಾರದ ನೀರು: ಒಡೆದ ಗ್ರಾಮಸ್ಥರ ಸಹನೆಯ ಕಟ್ಟೆ

ಸಂಧಾನ ಸಫಲ: ಬಹಿಷ್ಕಾರ ಹಿಂಪಡೆದು ಮತದಾನ

Published:
Updated:
Prajavani

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೋರಗೊಂಡನಹಳ್ಳಿಯಲ್ಲಿ ಕೆರೆಗೆ ನೀರು ತುಂಬಿಸುವುದು ಹಾಗೂ ಮೂಲಸೌಲಭ್ಯ ಕಲ್ಪಿಸದೇ ಇರುವುದನ್ನು ಖಂಡಿಸಿ ಗ್ರಾಮಸ್ಥರು ಮಂಗಳವಾರ ಮತದಾನ ಬಹಿಷ್ಕರಿಸಲು ಮುಂದಾಗಿದ್ದರು.

ಸಹಾಯಕ ಚುನಾವಣಾಧಿಕಾರಿಯೂ ಆಗಿದ್ದ ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸ್ಥಳಕ್ಕೆ ದೌಡಾಯಿಸಿ ಗ್ರಾಮಸ್ಥರೊಂದಿಗೆ ಸಂಧಾನ ನಡೆಸಿದರು. ಇದರ ಪರಿಣಾಮ ಬೋರಗೊಂಡನಹಳ್ಳಿಯ ಮತಗಟ್ಟೆ ಸಂಖ್ಯೆ–20ರಲ್ಲಿ ಮೂರುವರೆ ಗಂಟೆಯ ಬಳಿಕ ಮತದಾನ ಆರಂಭಗೊಂಡಿತು.

ಈ ಮತಗಟ್ಟೆಯಲ್ಲಿ ಒಟ್ಟು 654 ಮತದಾರರು ಇದ್ದರು. ಬೆಳಿಗ್ಗೆಯಿಂದಲೇ ಗ್ರಾಮಸ್ಥರು ಮತಗಟ್ಟೆಯಿಂದ ದೂರ ಉಳಿದಿದ್ದರು. ಬೆಳಿಗ್ಗೆ ಒಂಬತ್ತು ಗಂಟೆ ಹೊತ್ತಿಗೆ ಗ್ರಾಮದ ಒಬ್ಬ ಮಹಿಳೆ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಐವರು ಸಿಬ್ಬಂದಿ ಮಾತ್ರ ಮತ ಚಲಾಯಿಸಿದ್ದರು.

ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಮಾರಸ್ವಾಮಿ ಅವರು ಬೆಳಿಗ್ಗೆ 10ಕ್ಕೆ ಗ್ರಾಮಕ್ಕೆ ಬಂದು ಸಂಧಾನ ನಡೆಸಲು ಮುಂದಾದರು. ಗ್ರಾಮಸ್ಥರ ಸಹನೆಯ ಕಟ್ಟೆ ಒಡೆದಿದ್ದರಿಂದ ಆಡಳಿತ ವೈಫಲ್ಯವನ್ನು ಖಂಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಬಸವರಾಜ್‌ ಅವರು ಕೆರೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ ವಿಳಂಬ, ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸದೇ ಇರುವುದು, ರಸ್ತೆ, ಚರಂಡಿ ಸಮಸ್ಯೆಗಳ ಸರಮಾಲೆಗಳನ್ನೇ ಮುಂದಿಟ್ಟರು. ಜಿಲ್ಲಾಧಿಕಾರಿ ಗ್ರಾಮಕ್ಕೆ ಬಂದು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು.

ಕುಮಾರಸ್ವಾಮಿ ಅವರು, ‘ರಸ್ತೆ ನಿರ್ಮಿಸುವ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಜೊತೆ ಈಗಾಗಲೇ ಚರ್ಚಿಸಿದ್ದೇನೆ. ಚುನಾವಣೆ ಮುಗಿದ ವಾರದೊಳಗೆ ಗ್ರಾಮಕ್ಕೆ ಬಂದು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಕಂದಾಯ, ಕೆ.ಎಸ್‌.ಆರ್‌.ಟಿ.ಸಿ ಅಧಿಕಾರಿಗಳೊಂದಿಗೆ ಒಂದು ತಿಂಗಳ ಒಳಗೆ ಗ್ರಾಮಕ್ಕೆ ಬಂದು ಜನಸ್ಪಂದನ ಸಭೆ ನಡೆಸಿ, ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆದ ಬಳಿಕ ಅಂತಿಮವಾಗಿ ಗ್ರಾಮಸ್ಥರು ಮತದಾನ ಮಾಡಲು ಒಪ್ಪಿಗೆ ಸೂಚಿಸಿದರು. ಬೆಳಿಗ್ಗೆ 10.30ಕ್ಕೆ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !