ಎದೆಹಾಲು ಮಗುವಿನ ಜೀವನಕ್ಕೆ ಬುನಾದಿ

7
ಸ್ತನ್ಯಪಾನ ಸಪ್ತಾಹದಲ್ಲಿ ವೈದ್ಯೆ ಡಾ. ಶಾಂತಾಭಟ್‌ ಅಭಿಮತ

ಎದೆಹಾಲು ಮಗುವಿನ ಜೀವನಕ್ಕೆ ಬುನಾದಿ

Published:
Updated:
Deccan Herald

ದಾವಣಗೆರೆ: ತಾಯಿ ಹಾಲು ಮಗುವಿನ ಜೀವನಕ್ಕೆ ಬುನಾದಿ. ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಎದೆಹಾಲು ಪೂರಕ ಎಂದು ವೈದ್ಯೆ ಡಾ. ಶಾಂತಾಭಟ್‌ ಹೇಳಿದರು.

ಬಾಪೂಜಿ ಮಕ್ಕಳ ಆರೋಗ್ಯ ಮತ್ತು ಸಂಶೋಧನಾ ವಿಭಾಗದಲ್ಲಿ ಬುಧವಾರ ಬಾಪೂಜಿ ಆಸ್ಪತ್ರೆ ಮಕ್ಕಳ ವಿಭಾಗ, ಭಾರತೀಯ ಮಕ್ಕಳ ತಜ್ಞರ ಸಂಘದ ಜಿಲ್ಲಾ ಶಾಖೆ ಏರ್ಪಡಿಸಿದ್ದ ಸ್ತನ್ಯಪಾನ ಸಪ್ತಾಹದಲ್ಲಿ ಅವರು ಮಾತನಾಡಿದರು.

ಮಗುವಿನ ಬೆಳವಣಿಗೆಗೆ ಕೊರತೆಯೂ ಆಗದ, ದೇಹದಲ್ಲಿ ಬೊಜ್ಜು ಬೆಳೆಯದ ಅತ್ಯಂತ ಆರೋಗ್ಯಕರ ಆಹಾರ ತಾಯಿ ಹಾಲು ಮಾತ್ರ. ಅಗತ್ಯ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ತಾಯಿ ಹಾಲಿನಲ್ಲಿ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ ಎಂದರು.

ಎದೆಹಾಲು ಕುಡಿಸುವುದರಿಂದ ತಾಯಿ–ಮಗುವಿನ ನಡುವೆ ಮಧುರವಾದ ಬಾಂಧವ್ಯ ಬೆಳೆಯುತ್ತದೆ. ಅವರ ಸಂಬಂಧ ಗಟ್ಟಿಗೊಳ್ಳುತ್ತದೆ. ಎದೆಹಾಲು ಕುಡಿಸುವುದರಿಂದ ತಾಯಿಯ ಆರೋಗ್ಯವೂ ವೃದ್ಧಿಯಾಗುತ್ತದೆ. ಹಲವು ಮಾರಕ ಕಾಯಿಲೆಗಳು ತಾಯಿಗೆ ಬರುವುದು ತಪ್ಪುತ್ತದೆ ಎಂದು ಹೇಳಿದರು.

ತರಬೇತಿ ಅಗತ್ಯ:  ಗರ್ಭಿಣಿಯಾಗಿರುವಾಗಲೇ ವೈದ್ಯರು ಮಹಿಳೆಯರ ಆರೋಗ್ಯವನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕು. ದೈಹಿಕ ನ್ಯೂನತೆಗಳಿದ್ದರೆ ಮಹಿಳೆಗೆ ತಿಳಿಸಬೇಕು. ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಆರೋಗ್ಯಾಭ್ಯಾಸಗಳನ್ನು ಮಾಡಿಸಿ, ಆಕೆಯನ್ನು ದೈಹಿಕ ಮತ್ತು ಮಾನಸಿಕವಾಗಿ ಮಗುವಿಗೆ ಹಾಲುಣಿಸುವುದಕ್ಕೆ ಸಿದ್ಧಗೊಳಿಸಬೇಕು. ಇದಕ್ಕಾಗಿ ವೈದ್ಯರು ಮತ್ತು ದಾದಿಯರಿಗೆ ಸೂಕ್ತ ತರಬೇತಿಯನ್ನೂ ನೀಡಬೇಕು ಎಂದರು.

ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಎಸ್‌.ವಿ. ಮುರುಗೇಶ್‌, ‘ಮಗುವಿಗೆ ಆರು ತಿಂಗಳವರೆಗೆ ತಾಯಿ ಹಾಲಷ್ಟೇ ಸಾಕಾಗುತ್ತದೆ. ನಂತರ ಕನಿಷ್ಠ ಎರಡು ವರ್ಷಗಳವರೆಗೆ ಪೂರಕ ಆಹಾರದೊಂದಿಗೆ ಕಡ್ಡಾಯವಾಗಿ ತಾಯಿಹಾಲು ಕುಡಿಸಬೇಕು’ ಎಂದು ತಿಳಿಸಿದರು.

ಮಕ್ಕಳ ತಜ್ಞ ಡಾ. ಸಿ.ಆರ್‌. ಬಾಣಾಪುರ ಮಠ, ‘ಬಾಪೂಜಿ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗವನ್ನು ತೆರೆಯುವ ಮೂಲಕ ಡಾ. ನಿರ್ಮಲಾ ಕೇಸರಿ ಅವರು, ಹಲವು ಸಂಶೋಧನೆಗಳನ್ನು ಮಾಡಿದರು. ಅವುಗಳಲ್ಲಿ ಸಿರಿಂಜ್‌ ವಿಧಾನ ಪ್ರಮುಖವಾದದ್ದು. ಈ ಶೋಧನೆಯಿಂದಾಗಿ ವಿಶ್ವದೆಲ್ಲೆಡೆ ತಾಯಂದಿರು ಸಮಸ್ಯೆಗಳಿಲ್ಲದೇ ಮಗುವಿಗೆ ಹಾಲುಣಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.

ಹೀನಾ ಕಾರ್ಯಕ್ರಮ ಉದ್ಘಾಟಿಸಿ, ಅನಿಸಿಕೆಗಳನ್ನು ಹಂಚಿಕೊಂಡರು.

ಡಾ. ಎ.ಸಿ. ಬಸವರಾಜ್, ಡಾ, ಗುರುಪ್ರಸಾದ್‌, ಡಾ. ಗಾಯತ್ರಿ, ಡಾ, ಛಾಯಾ ಅವರೂ ಇದ್ದರು. ಬಾಣಂತಿಯರು, ವಿವಿಧ ಆಸ್ಪತ್ರೆಗಳ ವೈದ್ಯರು, ದಾದಿಯರು, ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಸ್ತನ್ಯಪಾನ ಮಾಡಿಸಿ ಮಾಲಿನ್ಯ ತಡೆಯಿರಿ’:

ತಾಯಿ ಹಾಲಿಗೆ ಬದಲಾಗಿ ಪರ್ಯಾಯ ಆಹಾರಗಳನ್ನು ಕೊಡುವುದರಿಂದ ಮಗುವಿನ ಆರೋಗ್ಯದ ಮೇಲಷ್ಟೇ ಅಲ್ಲ ಪರಿಸರದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ ಎಂದು ಭಾರತೀಯ ಮಕ್ಕಳ ತಜ್ಞರ ಸಂಘದ ಜಿಲ್ಲಾ ಅಧ್ಯಕ್ಷೆ ಡಾ. ಜಿ.ಎಸ್‌. ಲತಾ ಹೇಳಿದರು.

1 ಕೆ.ಜಿ. ಹಾಲಿನ ಪುಡಿ ತಯಾರಿಕೆಗೆ 4,000 ಲೀಟರ್‌ ನೀರು ಬೇಕಾಗುತ್ತದೆ. ಈ ಪದಾರ್ಥಗಳನ್ನು ಉತ್ಪಾದಿಸುವುದಕ್ಕಾಗಿ ಕಾರ್ಖಾನೆಗಳು ಹಲವು ಮಾಲಿನ್ಯಕಾರಕ ವಸ್ತುಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತವೆ. ಹೀಗಾಗಿ, ಪರಿಸರಕ್ಕೆ ಯಾವುದೇ ತೊಂದರೆಯುಂಟು ಮಾಡದ ಎದೆಹಾಲನ್ನೇ ಮಕ್ಕಳಿಗೆ ಕುಡಿಸಿ ಅವರ ಆರೋಗ್ಯವನ್ನೂ ಕಾಪಾಡಿ ಎಂದು ತಾಯಂದಿರಿಗೆ ತಿಳಿಸಿದರು.

ಅಮೆರಿಕದಲ್ಲಿ ಸಿದ್ಧ ಆಹಾರಗಳ ಉತ್ಪಾದನಾ ಕ್ಷೇತ್ರಕ್ಕೆ ಹೂಡಿಕೆ ಮಾಡಿದ 1 ಡಾಲರ್‌ಗ 35 ಡಾಲರ್‌ ಲಾಭ ಬರುತ್ತದಂತೆ. ಹೀಗಾಗಿ, ಸಿದ್ಧ ಆಹಾರಗಳು ದುಬಾರಿಯೂ ಆಗಿರುತ್ತವೆ ಎಂದರು.

ತಾಯಿ ಹಾಲು ಕಡಿಯುವ ಮಕ್ಕಳ ಬುದ್ಧಿಮತ್ತೆ 3–5ರಷ್ಟು ಹೆಚ್ಚು ಇರುತ್ತದೆ. ತಾಯಿ ಹಾಲೇ ಸಮೃದ್ಧ ಆಹಾರ 
ಡಾ. ಜಿ.ಎಸ್‌. ಲತಾ, ಜಿಲ್ಲಾ ಅಧ್ಯಕ್ಷೆ, ಭಾರತೀಯ ಮಕ್ಕಳ ತಜ್ಞರ ಸಂಘ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !