ಗುರುವಾರ , ಡಿಸೆಂಬರ್ 3, 2020
20 °C
ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ರಾಜ್ಯಮಟ್ಟದ ಪ್ರಾಜೆಕ್ಟ್‌ ಪ್ರದರ್ಶನ: ವಾಹನಗಳಿಗೆ ಜಲಜನಕ ಅನಿಲ ಬಳಕೆ

ಬಿಎಸ್‌–4ಗೆ ಸವಾಲೊಡ್ಡಿದ ಬಿಎಸ್‌–3 ಬೈಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ಒಂದೆಡೆ ಹಳೆಯ ‘ಬಿಎಸ್‌–3’ ಬೈಕ್‌ ‘ಬಿ.ಎಸ್‌–4’ ಮಾದರಿ ಬೈಕ್‌ಗಿಂತಲೂ ಕಡಿಮೆ ಇಂಗಾಲ ಡೈಯಾಕ್ಸೈಡ್‌ ಹೊಗೆ ಸೂಸಿ ಬೆರಗು ಮೂಡಿಸುತ್ತಿದೆ. ಇನ್ನೊದಂಡೆ ಪಾರ್ಶ್ವವಾಯುವಿನಿಂದ ಬಳಲುವ ರೋಗಿಯೇ ಫಿಜಿಯೋಥೆರಪಿ ಮಾಡಿಕೊಳ್ಳಬಹುದು. ಮತ್ತೊಂದೆಡೆ ಗಮನ ಸೆಳೆಯುತ್ತಿದೆ ಬಿರು ಬೇಸಿಗೆಯಲ್ಲೂ ಕಡಿಮೆ ಉಷ್ಣಾಂಶ ಇರುವಂತೆ ಮಾಡುವ ಚಾವಣಿ ಮೇಲಿನ ಹುಲ್ಲು ಹಾಸು. ಇದರ ಜೊತೆಗೆ ಹೊಸ ಹೊಸ ಪರಿಕಲ್ಪನೆಗಳನ್ನು ಒಳಗೊಂಡ ಸಂಶೋಧನಾ ಪ್ರಬಂಧಗಳ ಸುರಿ ಮಳೆ...!

ಇವು ಕರ್ನಾಟಕ ಸ್ಟೇಟ್‌ ಕೌನ್ಸಿಲ್‌ ಫಾರ್‌ ಸೈನ್ಸ್ ಆ್ಯಂಡ್‌ ಟೆಕ್ನಾಲಜಿ ಆಶ್ರಯದಲ್ಲಿ ಬಿಐಇಟಿಯಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ 41ನೇ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಪ್ರಾಜೆಕ್ಟ್‌ ಪ್ರದರ್ಶನ ಮತ್ತು ವಿಚಾರ ಸಂಕಿರಣದಲ್ಲಿ ಕಂಡುಬಂದ ದೃಶ್ಯಾವಳಿಗಳು. ನಾವೀನ್ಯ ಮಾದರಿಗಳನ್ನು ಸಿದ್ಧಪಡಿಸಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಪ್ರತಿಭೆ, ಕೌಶಲ ಅನಾವರಣಗೊಂಡಿತು.

ಶಿವಮೊಗ್ಗದ ಪಿಇಎಸ್‌ಐಟಿಎಂನ ಮೆಕೆನಿಕಲ್‌ ವಿಭಾಗದ ವಿದ್ಯಾರ್ಥಿ ಮಹಮ್ಮದ್‌ ಶಾಹಿದ್‌ ನೇತೃತ್ವದ ತಂಡವು ಹಳೆಯ ಬಿಎಸ್‌–3 ಮಾದರಿಯ ಬೈಕ್‌ಗೆ ಜಲಜನಕ ಅನಿಲ ಉತ್ಪಾದಿಸುವ ಡ್ರೈಸೆಲ್‌ ಯೂನಿಟ್‌ ಅಳವಡಿಸುವ ಮೂಲಕ ಹೊಸ ಬಿಎಸ್‌–4 ಮಾದರಿಯ ಬೈಕ್‌ಗಿಂತಲೂ ಹೆಚ್ಚು ಇಂಧನ ಕ್ಷಮತೆಯನ್ನು ಹೊಂದುವಂತೆ ಮಾಡಿದೆ.

ಹಳೆಯ ಬೈಕ್‌ ಕೇವಲ ಪೆಟ್ರೋಲ್‌ ಬಳಸಿದಾಗ ಕಾರ್ಬನ್‌ ಮೊನಾಕ್ಸೈಡ್‌ (ಸಿ.ಒ) ಪ್ರಮಾಣವು 1.347 ಇತ್ತು. ಪೆಟ್ರೋಲ್‌ ಜೊತೆಗೆ ಜಲಜನಕ ಅನಿಲ ಬಳಸಿದ ಬಳಿಕ ಈ ಪ್ರಮಾಣವು 0.41ಗೆ ಇಳಿಕೆಯಾಗಿದೆ. ಹೊಸ ಬಿಎಸ್‌–4 ಬೈಕ್‌ನಲ್ಲಿ ಈ ಪ್ರಮಾಣವು 0.99 ಇರುವುದು ಕಂಡು ಬಂದಿದೆ. ಜಲಜನಕ ಅನಿಲ ಬಳಕೆಯಿಂದಾಗಿ 5 ಕಿ.ಮೀ ಹೆಚ್ಚುವರಿ ಮೈಲೇಜ್‌ ಸಹ ನೀಡಿದೆ. ಜಲಜನಕ ಅನಿಲ ಸ್ಫೋಟಗೊಳ್ಳದಂತೆ ಎರಡು ಕಡೆ ಸುರಕ್ಷಾ ತಂತ್ರಜ್ಞಾನವನ್ನೂ ಅಳವಡಿಸಿದ್ದೇವೆ. ₹ 3,000 ವೆಚ್ಚದಲ್ಲಿ ಹಳೆಯ ಬೈಕ್‌ಗೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು ಎಂದು ಮಹಮ್ಮದ್‌ ಶಾಹಿದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರಿಸರ ಮಾಲಿನ್ಯ ಕಡಿಮೆ ಮಾಡಲು ಬಿ.ಎಸ್‌–4 ಮಾದರಿಯ ವಾಹನಗಳ ಬಗ್ಗೆ ಮಾತ್ರ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿದೆ. ಬಿ.ಎಸ್‌–3 ಮಾದರಿಯ ವಾಹನಗಳಿಗೆ ಜನಜನಕ ಅನಿಲ ಬಳಕೆ ಮಾಡಿದರೆ ಪರಿಸರ ಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ. ದೊಡ್ಡ ಪ್ರಮಾಣದಲ್ಲಿ ಈ ತಂತ್ರಜ್ಞಾನ ಬಳಸಿಕೊಳ್ಳಬೇಕು’ ಎಂದು ಪ್ರಾಜೆಕ್ಟ್‌ಗೆ ಮಾರ್ಗದರ್ಶನ ನೀಡಿದ ಪ್ರಾಧ್ಯಾಪಕ ರಾಜಶೇಖರ್‌ ಎಂ.ಸಿ ಹೇಳಿದರು.

ಈ ಮಾದರಿ ಅಭಿವೃದ್ಧಿಗೊಳಿಸಲು ವಿದ್ಯಾರ್ಥಿಗಳಾದ ಲೋಹಿತಾ ಎಂ.ಎಸ್‌, ಮಧು ಎಂ.ಜಿ, ಸೈಯದ್‌ ಸಲ್ಮಾನ್‌ ಸಹ ಸಾಥ್‌ ನೀಡಿದ್ದರು.

ಫಿಜಿಯೋಥೆರಪಿ ಕುರ್ಚಿ: ಸೊಂಟದ ಕೆಳಭಾಗ ಪಾರ್ಶವಾಯುವಿಗೆ ತುತ್ತಾಗಿರುವ ರೋಗಿಗಳಿಗೆ ಅನುಕೂಲವಾಗುವಂತಹ ಬಹುಪಯೋಗಿ ಫಿಜಿಯೋಥೆರಪಿ ಕುರ್ಚಿಯನ್ನು ಮಂಗಳೂರಿನ ಪಿ.ಎ. ಎಂಜಿನಿಯರಿಂಗ್‌ ಕಾಲೇಜಿನ ಶಿರಾಲ್‌ ರೈ, ದೀಪರಾಜ್‌, ಕಿರಣ್‌ ಪಿಂಟೊ ಹಾಗೂ ಜಯಪ್ರಕಾಶ್‌ ಅವರು ಸಿದ್ಧಪಡಿಸಿದ್ದಾರೆ. ರೋಗಿಯು ಕೈಯಲ್ಲಿ ಹ್ಯಾಂಡಲ್‌ ತಿರುಗಿಸಿದರೆ ಪೆಡಲ್‌ ಸಹ ತಿರುಗುತ್ತದೆ. ಇದರಿಂದಾಗಿ ರೋಗಿಯ ಕೆಳಭಾಗ ಸಂಚರಿಸಿ ರಕ್ಷಪರಿಚಲನೆಯಾಗುತ್ತದೆ. ಈ ಕುರ್ಚಿಯನ್ನು ₹ 12,000 ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ.

ತಂಪಾಗಿಸುವ ಹುಲ್ಲಿನ ಹಾಸು: ವಿಜಯಪುರದ ಬಿಎಲ್‌ಡಿ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿ ಮನ್ಸೂರ್‌ ಅಲಿ ಧುಂಡಸಿ ಹಾಗೂ ಅಭಿಷೇಕ ಚವ್ಹಾಣ್‌ ಅವರು ತಾರಸಿ ಮೇಲೆ ಹುಲ್ಲುಹಾಸು ಬೆಳೆಸುವ ಮೂಲಕ ಮನೆಯ ವಾತಾವರಣ ತಂಪಾಗಿಸುವ ಮಾದರಿಯನ್ನು ಮಾಡಿದ್ದಾರೆ. ಮನೆಯ ತಾರಸಿ ಮೇಲೆ ಹುಲ್ಲು ಬೆಳೆಸುವುದರಿಂದ ಬೇಸಿಗೆಯಲ್ಲೂ 22ರಿಂದ 30 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಲಿದೆ. ಹೀಗಾಗಿ ಹವಾನಿಯಂತ್ರಿತ ಉಪಕರಣ ಬಳಕೆ ಮಾಡಬೇಕಾಗಿಲ್ಲ. ಶೇ 60ರಷ್ಟು ವಿದ್ಯುತ್‌ ಸಹ ಉಳಿತಾಯವಾಗಲಿದೆ ಎನ್ನುತ್ತಾರೆ ಮನ್ಸೂರ್‌.

ಬೆಂಗಳೂರಿನ ವೇಮನ ಕಾಲೇಜಿನ ವಿದ್ಯಾರ್ಥಿಗಳು ಹಣ್ಣಿನ ತೋಟದಲ್ಲಿ ಔಷಧ ಸಿಂಪಡಿಸುವ ಹಾಗೂ ಕಳೆ ಕೀಳುವ ಯಂತ್ರವನ್ನು ಪವರ್‌ಟೇಲರ್‌ ಅಳವಡಿಸುವ ಮಾದರಿ ಪ್ರದರ್ಶಿಸಿದರು. ಬೀಜ ಸಂರಕ್ಷಣೆ, ಕಾಳುಮೆಣಸು ವಿಂಗಡಿಸುವ ಯಂತ್ರ, ನಾರು ತೆಗೆಯುವ ಯಂತ್ರ, ಕೃಷಿ ಚಟುವಟಿಕೆ ಬಳಕೆಯಾಗುವ ಬಹುಪಯೋಗಿ ಸೌರ ವಿದ್ಯುತ್‌ ಚಾಲಿತ ವಾಹನ ಹೀಗೆ ಹಲವು ಮಾದರಿಗಳು ರೈತರಿಗೆ ಅನುಕೂಲವಾಗುವಂತಿವೆ.

ಅಂಕಿ– ಅಂಶಗಳು

140 ಪ್ರದರ್ಶನದಲ್ಲಿ ಭಾಗಿಯಾಗಿರುವ ಎಂಜಿನಿಯರಿಂಗ್‌ ಕಾಲೇಜುಗಳು

1,000 ಪ್ರದರ್ಶನದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು

120 ಪ್ರದರ್ಶನಕ್ಕೆ ಬಂದ ಮಾರ್ಗದರ್ಶಕರು

150 ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಮಾದರಿ ಹಾಗೂ ಮಂಡಿಸಿದ ಪ್ರಬಂಧಗಳ ಸಂಖ್ಯೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು