ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರು ಇರುವವರೆಗೆ ಬಿಎಸ್‌ಎನ್‌ಎಲ್‌ ಮುಳುಗಲ್ಲ

ಬಿಎಸ್‌ಎನ್‌ಎಲ್‌ ಮುಕ್ತ ಅಧಿವೇಶನದಲ್ಲಿ ಎನ್‌ಎಫ್‌ಟಿಇ ಸಹ ಕಾರ್ಯದರ್ಶಿ ಕೆ.ಎಸ್‌.ಶೇಷಾದ್ರಿ
Last Updated 12 ಅಕ್ಟೋಬರ್ 2019, 14:32 IST
ಅಕ್ಷರ ಗಾತ್ರ

ದಾವಣಗೆರೆ: ಬಿಎಸ್‌ಎನ್‌ಎಲ್‌ ಇಂದು ಮುಚ್ಚುತ್ತದೆ, ನಾಳೆ ಮುಳುಗುತ್ತದೆ ಎಂಬ ಮಾಧ್ಯಮಗಳ ಅತಿರೇಕದ ವರದಿಗಳಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನೌಕರರು ಇರುವವರೆಗೆ ಬಿಎಸ್‌ಎನ್‌ಎಲ್‌ ಬಂದ್‌ ಮಾಡಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಟೆಲಿಕಾಂ ಉದ್ಯೋಗಿಗಳ ಫೆಡರೇಷನ್‌ (ಎನ್‌ಎಫ್‌ಟಿಇ) ಸಹ ಕಾರ್ಯದರ್ಶಿ ಕೆ.ಎಸ್‌. ಶೇಷಾದ್ರಿ ಹೇಳಿದರು.

ಇಲ್ಲಿನ ತರಳಬಾಳು ಸಭಾಭವನದಲ್ಲಿ ಶನಿವಾರ ನಡೆದ ಆಲ್‌ ಇಂಡಿಯಾ ಬಿಎಸ್‌ಎನ್‌ಎಲ್‌ ಎಕ್ಸಿಕ್ಯೂಟಿವ್ಸ್‌ ಅಸೋಸಿಯೇಶನ್‌ನ ವೃತ್ತ ಮಟ್ಟದ ಮುಕ್ತ ಅಧಿವೇಶನದಲ್ಲಿ ಅವರು ಮಾತನಾಡಿದರು.

ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ನೀಡಲಾಗುತ್ತದೆ. ಅದಕ್ಕಾಗಿ ₹ 98 ಸಾವಿರ ಕೋಟಿ ಇಡಲಾಗುತ್ತಿದೆ ಎಂದು ಮಾಧ್ಯಮಗಳು ಪ್ರಸಾರ ಮಾಡಿದವು. ಇಷ್ಟು ದೊಡ್ಡ ಮೊತ್ತ ನೀಡಿ ಸ್ವಯಂ ನಿವೃತ್ತಿ ನೀಡುವ ಬದಲು ಅದಕ್ಕಿಂತ ಬಹಳ ಕಡಿಮೆ ಮೊತ್ತದಲ್ಲಿ ಸಂಸ್ಥೆ ಪುನಶ್ಚೇತನಗೊಳಿಸಲು ಸಾಧ್ಯವಿದೆ ಎಂದರು.

‘ಟೆಲಿಕಾಂ ಹೋಗಿ ಬಿಎಸ್‌ಎನ್‌ಎಲ್‌ ಮಾಡಿದಾಗಲೇ ನೌಕರರ ಭದ್ರತೆ ಬಗ್ಗೆ ಕಾಯ್ದೆ ಮಾಡಲಾಗಿದೆ. ಸಂಸ್ಥೆ ಆರ್ಥಿಕ ಮುಗ್ಗಟ್ಟು ಎದುರಿಸಿದರೆ ಅದಕ್ಕೆ ಸರ್ಕಾರವೇ ಹೊಣೆ. ಕಾರ್ಮಿಕರನ್ನು ತೆಗೆದು ಹಾಕುವಂತಿಲ್ಲ. ಸಂಚಿತ ನಿಧಿಯಿಂದಲೇ ಪಿಂಚಣಿ ನೀಡಬೇಕು ಎಂಬುದು 37 ಎ ಕಾಯ್ದೆಯಲ್ಲಿದೆ. ಬಿಎಸ್‌ಎನ್‌ಎಲ್‌ ನೌಕರರಿಗೆ 50 ವರ್ಷದ ಬದಲು 58 ವರ್ಷಕ್ಕೆ ನಿವೃತ್ತಿ ವಯಸ್ಸನ್ನು ನಿಗದಿ ಮಾಡುತ್ತಾರೆ ಎಂಬ ವದಂತಿಗೂ ಕಿವಿಕೊಡಬೇಕಿಲ್ಲ. ನಾವು ಕೇಂದ್ರ ಸರ್ಕಾರದ ನೌಕರರು. 50 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ನಿವೃತ್ತಿಯ ವಯಸ್ಸಿನ ಮಿತಿ ಹೆಚ್ಚು ಕಡಿಮೆ ಮಾಡಿದರೆ ನಮಗೂ ಅನ್ವಯವಾಗುತ್ತದೆ. ಅದಲ್ಲದೇ ನಮಗಷ್ಟೇ ವ್ಯತ್ಯಾಸ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ’ ಎಂದು ವಿವರಿಸಿದರು.

ಬಿಎಸ್ಎನ್‌ಎಲ್‌ ಅಭಿವೃದ್ಧಿಗೆ ಸರಿಯಾದ ಬ್ಲೂಪ್ರಿಂಟ್‌ ತಯಾರಿಸಬೇಕು. ಎಷ್ಟು ದುಡ್ಡು ಬೇಕು? ಯಾರು ಕೊಡುವುದು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಒಬ್ಬ ವ್ಯಕ್ತಿಗೆ ₹ 40 ಲಕ್ಷ ವರೆಗೆ ಸಾಲ ಕೊಡುತ್ತಾರೆ. ಆದರೆ 1.67 ಲಕ್ಷ ನೌಕರರಿರುವ ಸರ್ಕಾರಿ ಅಧೀನದಲ್ಲಿರುವ ಬಿಎಸ್‌ಎನ್‌ಎಲ್‌ ಸಂಸ್ಥೆಗೆ ₹ 400 ಕೋಟಿ ಸಾಲ ನೀಡುವುದಿಲ್ಲ ಎಂದರೆ ಇದು ಸರ್ಕಾರದ ತಾರತಮ್ಯ ನೀತಿಯಾಗಿದೆ. ತಾರತಮ್ಯ ಬಿಡಿ. 4ಜಿ ಬಳಸು ಅವಕಾಶ ನೀಡುವ ಆದೇಶ ನೀಡಿ. ಅನುದಾನ ಒದಗಿಸಲು ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದರು.

ಎನ್‌ಎಫ್‌ಟಿಇ ವೃತ್ತ ಕಾರ್ಯದರ್ಶಿ ಮಹಾದೇವ್, ‘ಸರ್ಕಾರಿ ಕಚೇರಿಗಳಲ್ಲಿ ಶೇ 50ರಷ್ಟು ಬಿಎಸ್‌ಎನ್‌ಎಲ್‌ ಸಂಪರ್ಕ ಸಾಧನಗಳಿರಬೇಕು ಎಂದು ನಿಯಮ ಮಾಡಿದರೆ ಬಿಎಸ್‌ಎನ್‌ಎಲ್‌ ನಷ್ಟದಿಂದ ಹೊರಬರುತ್ತದೆ ಎಂದರು.

ಆಲ್‌ ಇಂಡಿಯಾ ಬಿಎಸ್‌ಎನ್‌ಎಲ್‌ ಎಕ್ಸಿಕ್ಯೂಟಿವ್ಸ್‌ ಅಸೋಸಿಯೇಶನ್‌ನ ವೃತ್ತ ಕಾರ್ಯದರ್ಶಿ ಶಶಿಧರ ಕೆ. ಹಿರೇಮಠ್‌, ‘₹ 30 ಸಾವಿರ ಕೋಟಿ ಮೀಸಲು ಹಣ ಇದ್ದ ಬಿಎಸ್‌ಎನ್‌ಎಲ್‌ ಸಂಸ್ಥೆ ಇಘ ₹ 25 ಸಾವಿ ಕೋಟಿ ನಷ್ಟಕ್ಕೆ ಹೋಗಿದೆ. ವರ್ಷದಿಂದ ವರ್ಷಕ್ಕೆ ನಷ್ಟ ಜಾಸ್ತಿಯಾಗುತ್ತಿದೆ. ಬಿಎಸ್‌ಎನ್‌ಎಲ್‌ ಒಂದೇ ಅಲ್ಲ ದೇಶದ ಹಲವು ಸಂಸ್ಥೆಗಳೂ ಆರ್ಥಿಕ ಹಿಂಜರಿತದಿಂದ ತೊಂದರೆಗೆ ಈಡಾಗಿವೆ. ಜಾಗತಿಕ ಮಟ್ಟದಲ್ಲಿಯೂ ಆರ್ಥಿಕ ಹಿನ್ನಡೆ ಉಂಟಾಗಿದೆ. ಭಾರತದಲ್ಲಿ ಜಿಡಿಪಿ 5ಕ್ಕೆ ಕುಸಿದಿದೆ. ಕಳೆದ ಆರು ವರ್ಷಗಳಲ್ಲಿ ಇದು ಅತಿ ಕನಿಷ್ಠವಾಗಿದೆ. ಸರ್ಕಾರದ ಪ್ರೋತ್ಸಾಹ ಇದ್ದರೆ, ನಷ್ಟಕ್ಕೆ ಕಾರಣವನ್ನು ಹುಡುಕಿ ಅದನ್ನು ಸರಿ ಮಾಡಿ ಮತ್ತೆ ಲಾಭದತ್ತ ಹೋಗಬಹುದು’ ಎಂದು ತಿಳಿಸಿದರು.

ಬಿಎಸ್‌ಎನ್‌ಎಲ್‌ ಜಿಎಂ ಜೆ.ಎಲ್‌. ಗೌತಮ್‌, ಆಲ್‌ ಇಂಡಿಯಾ ಬಿಎಸ್‌ಎನ್‌ಎಲ್‌ ಎಕ್ಸಿಕ್ಯೂಟಿವ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಉಲ್ಲಾಸ್‌ ವಿ.ಗೌರವ್‌, ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ ಬಜಾರಿ, ಕೃಷ್ಣ ರೆಡ್ಡಿ, ನಾರಾಯಣ ಸ್ವಾಮಿ, ಕುಲಕರ್ಣಿ, ಅಂಗಡಿ ಅವರೂ ಇದ್ದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT