ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆ ನೀಡುವವರಿಗೆ ಬುದ್ಧನ ಅರಿವು ಬರಲಿ: ಜಬೀನಾಖಾನಂ

Last Updated 17 ಮೇ 2022, 3:46 IST
ಅಕ್ಷರ ಗಾತ್ರ

ದಾವಣಗೆರೆ: ದೈಹಿಕವಾಗಿ ಅಥವಾ ಮಾನಸಿಕವಾಗಿ ಬೇರೆಯವರಿಗೆ ಹಿಂಸೆ ನೀಡಿಯೇ ಬದುಕುವವರಿಗೆ ಬುದ್ಧನ ಪ್ರೀತಿಯ, ಶಾಂತಿಯ ಅರಿವು ಬರಲಿ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾಖಾನಂ ಹೇಳಿದರು.

ಇಲ್ಲಿನ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಕಚೇರಿಯಲ್ಲಿ ಸೋಮವಾರ ಯೂನಿಯನ್‌ ವತಿಯಿಂದ ನಡೆದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಂತಿ ಮತ್ತು ಪ್ರೀತಿಯೇ ಬುದ್ಧ ಜಗತ್ತಿಗೆ ನೀಡಿದ ದೊಡ್ಡ ಕೊಡುಗೆ. ಎಲ್ಲರೂ ಪ್ರೀತಿಯಿಂದ, ಸಹಬಾಳ್ವೆಯಿಂದ ಬದುಕಿದಾಗ ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯ. ಆದರೆ ಇಂದು ಹಿಂಸೆ ಕೊಟ್ಟೇ ಬದುಕುವ ಸನ್ನಿವೇಶದಲ್ಲಿ ನಾವಿದ್ದೇವೆ. ಬುದ್ಧನನ್ನು ಓದಿ ಅರ್ಥಮಾಡಿಕೊಂಡರೆ ಮಾತ್ರ ಈ ಹಿಂಸೆಗೆ ಪ್ರೀತಿಯ ಉತ್ತರ ನೀಡಲು ಸಾಧ್ಯ ಎಂದು ಹೇಳಿದರು.

ಇಂದು ಧರ್ಮ ಧರ್ಮಗಳ ಮಧ್ಯೆ ವೈಷಮ್ಯ ಬೆಳೆಸುವವರ ಸಂಖ್ಯೆ ಹೆಚ್ಚಾಗಿದೆ. ಇದು ಭಾರತಕ್ಕೆ ಸೀಮಿತವಾದ ವೈಷಮ್ಯ ಅಲ್ಲ. ಜಗತ್ತಿನಾದ್ಯಂತ ನಡೆಯುತ್ತಿದೆ. ಬುದ್ಧ ಬೋಧಿಸಿದ ಬೌದ್ಧ ಧರ್ಮವೂ ಬುದ್ಧನ ತತ್ವಗಳನ್ನು ಮರೆತು ವೈಷಮ್ಯ ರಾಜಕೀಯದಲ್ಲಿ ಮುಳುಗಿರುವುದು ಕಾಣುತ್ತಿದ್ದೇವೆ. ಎಲ್ಲ ದೇಶಗಳ ಎಲ್ಲ ಜನರಲ್ಲಿ ತಾಯಿ ಹೃದಯದ ಬುದ್ಧನ ಪ್ರೀತಿ ಬರಬೇಕು ಎಂದು ತಿಳಿಸಿದರು.

ಯೂನಿಯನ್ ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಮಾತನಾಡಿ, ‘ಮನುಷ್ಯರನ್ನು ಕೊಂದು ಧರ್ಮದ ರಕ್ಷಣೆ ಮಾಡುವುದಕ್ಕಿಂತ ಧರ್ಮವನ್ನೆ ಕೊಂದು ಮನುಷ್ಯರನ್ನು ರಕ್ಷಣೆ ಮಾಡಿ, ಯಾಕಂದರೇ ಮನುಷ್ಯತ್ವವೆ ನೈಜ ಧರ್ಮ ಎಂದು ಬುದ್ಧ ಹೇಳಿದ್ದ. ಇವತ್ತು ಇನ್ನೊಬ್ಬರನ್ನು ಕೊಂದೇ, ಹಿಂಸೆ ದೌರ್ಜನ್ಯವನ್ನು ಕೊಟ್ಟೇ ಬದುಕುತ್ತೇ‌ವೆ. ಧರ್ಮಗಳನ್ನು ಉಳಿಸುತ್ತೇವೆ ಎನ್ನುವವರು ಹೆಚ್ಚಾಗಿದ್ದಾರೆ’ ಎಂದು ವಿಷಾದಿಸಿದರು.

ಬುದ್ಧನ ಶಾಂತಿ, ಬಸವಣ್ಣನ ಸಮಾನತೆ, ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವನ್ನು ನಾವು ಸಾರಿ ಸಾರಿ ಹೇಳಬೇಕಾಗಿದೆ. ಆದರ್ಶವ್ಯಕ್ತಿಗಳ ದಿನವನ್ನು ಆಚರಿಸುವ ಜೊತೆಗೆ ಅವರು ಮಾದರಿ ಬದುಕನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಹಸೀನಾ, ನಾಹೇರ, ನೂರ್ ಫಾತೀಮ, ಶಾಹಿನ, ಶೀರಿನ್ ಬಾನು, ಬೀಬಿ ಜಾನ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT