ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ| ಮುಸ್ಲಿಮರಿಗೆ ನೇರ, ಹಿಂದೂಗಳಿಗೆ ಬೆನ್ನಿಗೆ ಚೂರಿ: ಚಿಂತಕ ಶಿವಸುಂದರ್‌

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಜನಜಾಗೃತಿ ಸಮಾವೇಶ
Last Updated 27 ಜನವರಿ 2020, 12:13 IST
ಅಕ್ಷರ ಗಾತ್ರ

ದಾವಣಗೆರೆ:‘ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಮುಸ್ಲಿಮರಿಗೆ ನೇರ ಹಾಕಿದ ಚೂರಿಯಾದರೆ ಹಿಂದೂಗಳಿಗೆ ಬೆನ್ನಿಗೆ ಹಾಕಿದ ಚೂರಿ. ದೇಶದ ಎಲ್ಲ 130 ಕೋಟಿ ಜನ ಅನುಮಾನಾಸ್ಪದ ನಾಗರಿಕರಾಗಿದ್ದಾರೆ. ಎಲ್ಲ ಬೀದಿಗೆ ಬಂದಿದ್ದಾರೆ’ಎಂದು ಚಿಂತಕ ಶಿವಸುಂದರ್‌ ಹೇಳಿದರು.

ಇಂಡಿಯನ್‌ ಹೆಲ್ಪಿಂಗ್‌ ಹಾಂಡ್ಸ್‌ ಸಂಸ್ಥೆಯು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧ ಭಾನುವಾರ ಮಿಲ್ಲತ್‌ ಹೈಸ್ಕೂಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಸ್ಸಾಂನಲ್ಲಿ 4 ಕೋಟಿ ನುಸುಳುಕೋರರು ಇದ್ದಾರೆ ಎಂದು ಬಿಜೆಪಿ ಹೇಳಿಕೊಂಡು ತಿರುಗಾಡಿತು. ಅಸ್ಸಾಂನ ಒಟ್ಟು ಜನಸಂಖ್ಯೆಯೇ 3.5 ಕೋಟಿಯಾಗಿದೆ.. ಅದರ ಬಗ್ಗೆ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದರೆ ಸರ್ಕಾರದಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಆನಂತರ ಎನ್‌ಪಿಆರ್‌ ಅಲ್ಲಿ ತಂದಾಗ 19 ಲಕ್ಷ ಜನರಲ್ಲಿ ದಾಖಲೆ ಇರಲಿಲ್ಲ. ಈ 19 ಲಕ್ಷದಲ್ಲಿ 5 ಲಕ್ಷ ಮುಸ್ಲಿಮರು, 14 ಲಕ್ಷ ಹಿಂದೂಗಳು ಆಗಿದ್ದಾರೆ’ ಎಂದು ಹೇಳಿದರು.

‘ಎನ್‌ಪಿಆರ್‌ಗೆ ಮತದಾರರ ಚೀಟಿ, ಪಡಿತರ ಚೀಟಿ, ಆಧಾರ್‌ ಕಾರ್ಡ್‌ ದಾಖಲೆಗಳಾಗಲ್ಲ. ಅದರ ಜತೆಗೆ ಜನನ ಪ್ರಮಾಣ ಪತ್ರ ಇರಬೇಕು. ಇಲ್ಲವೇ ಭೂಮಿ ಹೊಂದಿರಬೇಕು. ಇಲ್ಲವೇ ಭೂವ್ಯಾಜ್ಯದಲ್ಲಿ ಹೆಸರಿರಬೇಕು. ಈಗ ಹಿಂದೂಗಳಿಗೆ ಸಿಎಎ ಮೂಲಕ ಪೌರತ್ವ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅದೂ ಸುಳ್ಳು. ಯಾಕೆಂದರೆ ಅವರು ಮತದಾರರ ಚೀಟಿ, ಪಡಿತರ ಚೀಟಿ, ಆಧಾರ್‌ ಕಾರ್ಡ್‌ ತೋರಿಸಿ ನಾವು ಭಾರತೀಯರು ಎಂದು ಹೇಳಿಕೊಂಡು ಬಂದಿದ್ದಾರೆ. ಈಗ ನಾವು ಭಾರತೀಯರಲ್ಲ ಎಂದು ಒಪ್ಪಿಕೊಳ್ಳಬೇಕು. ಹಾಗೆ ಒಪ್ಪ ಬೇಕಿದ್ದರೆ ಅವರು ಬಾಂಗ್ಲಾದೇಶಿಯರು ಎಂದು ದಾಖಲೆ ಬೇಕು. ಬಾಂಗ್ಲಾದವರು ಆದರೆ ಹೋಗಲಿ. ಅಲ್ಲದವರಿಗೆ ಬಾಂಗ್ಲಾ ದೇಶವಾದರೂ ಯಾಕೆ ದಾಖಲೆ ಕೊಡುತ್ತದೆ’ ಎಂದು ಪ್ರಶ್ನಿಸಿದರು.

‘ಮಾಜಿ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹ್ಮದ್‌ ಅವರ ಸಂಬಂಧಿಕರು, ಅಸ್ಸಾಂನ ಮಾಜಿ ಮುಖ್ಯಮಂತ್ರಿ ಪ್ರೊ. ಸಯ್ಯದ್ ತೈಮೂರು, 30 ವರ್ಷ ಸೈನಿಕನಾಗಿ ದುಡಿದ ಸನಾವುಲ್ಲಾ ದಾಖಲೆ ಇಲ್ಲದೇ ಇವರೆಲ್ಲ ಡಿಟೆನ್ಶನ್‌ ಸೆಂಟರ್‌ಗೆ ಹೋಗಿದ್ದಾರೆ. ಪಾರ್ವತಿದಾಸ್‌ ಎನ್ನುವ 70 ವರ್ಷದ ಮಹಿಳೆ ಡಿಟೆನ್ಸನ್‌ ಸೆಂಟರ್‌ ಸೇರಿದ್ದಾರೆ. ಅವರ ಪತಿ, ಮಕ್ಕಳೆಲ್ಲ ಭಾರತದ ನಾಗರಿಕರು. ಆದರೆ, ಪಾರ್ವತಿಯವರಲ್ಲಿ ದಾಖಲೆ ಇಲ್ಲ. ಅದಕ್ಕೆ ಅವರು ನುಸುಳುಕೋರರು ಎಂದು ಗುರುತಿಸಲಾಗಿದೆ. ಭಾರತದಲ್ಲಿ 1985ರ ಹಿಂದೆ ಜನನ ದಾಖಲೆ ಕಡ್ಡಾಯವಾಗಿರಲಿಲ್ಲ. ಪುರುಷಪ್ರಧಾನ ದೇಶವಾದ ಇಲ್ಲಿ ಹೆಣ್ಣುಮಕ್ಕಳ ಹೆಸರಲ್ಲಿ ಆಸ್ತಿ ಇಲ್ಲ. ಹೆಣ್ಣುಮಕ್ಕಳು ಎಲ್ಲಿಂದ ದಾಖಲೆಗಳನ್ನು ತರಲಿ’ ಎಂದು ಕೇಳಿದರು.

‘ಮುಂದಿನ ಏಪ್ರಿಲ್‌ನಿಂದ ದಾಖಲೆ ಪರಿಶೀಲನೆಗೆ ಮನೆಮನೆಗೆ ಬರುತ್ತಾರೆ. ಜನಗಣತಿ ಜತೆಗೆ ಈ ಗಣತಿಯೂ ನಡೆಯುತ್ತದೆ. ಅದರಲ್ಲಿ ನಿಮ್ಮ ತಂದೆ, ತಾಯಿ ಎಲ್ಲಿ ಹುಟ್ಟಿದರು? ಯಾವಾಗ ಹುಟ್ಟಿದರು ? ಎಂಬ ಪ್ರಶ್ನೆ ಇರುತ್ತದೆ. ಇದಕ್ಕೆ ಸರಿಯಾಗಿ ಉತ್ತರ ನೀಡದಿದ್ದರೆ ಅವರನ್ನು ಅನುಮಾನಾಸ್ಪದ ಎಂದು ಗುರುತಿಸಲಾಗುತ್ತದೆ. ಹೆತ್ತವರ ಜನನ ಪ್ರಮಾಣ ಪತ್ರ ಎಲ್ಲಿಂದ ತರುವಿರಿ? ಭೂಮಿ ಇಲ್ಲದ ಜನ ಏನು ಮಾಡುವುದು?’ ಎಂದು ಕೇಳಿದರು.

‘ದೇಶದಲ್ಲಿ 20 ಕೋಟಿ ಜನ ದಲಿತರು, 8.5 ಕೋಟಿ ಜನ ಆದಿವಾಸಿಗಳು, 2.5 ಕೋಟಿ ಜನ ಅಲೆಮಾರಿಗಳಿದ್ದಾರೆ. ಇವರು ಭೂಮಿ ಹೊಂದಿಲ್ಲ. ಜನನ ಪ್ರಮಾಣ ಪತ್ರ ಇಲ್ಲದಿದ್ದರೆ ಇವರೆಲ್ಲರೂ ಎರಡನೇ ದರ್ಜೆಯ ನಾಗರಿಕರಾಗಿ ಬದುಕಬೇಕಾಗುತ್ತದೆ’citi ಎಂದರು.

ನುಸುಳುಕೋರರನ್ನು ಗುರುತಿಸಿ. ಅವರನ್ನು ಹೊರಗೆ ಕಳುಹಿಸಿ. ನಮ್ಮ ವಿರೋಧವಿಲ್ಲ. ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಬಂದಿದ್ದರೆ ಅವರಿಗೆ ಪೌರತ್ವ ಕೊಡಬೇಕು ಎಂದಿದ್ದರೆ ಕೊಡಿ. ಆದರೆ ಈ ಹೆಸರಲ್ಲಿ ದೇಶದ ಎಲ್ಲ ಜನರನ್ನು ಬೀದಿಗೆ ತಂದು ನಿಲ್ಲಿಸುವುದು ಯಾವ ನ್ಯಾಯ? ಪೌರತ್ವ ಕೊಡುವಾಗ ಮುಸ್ಲಿಮರನ್ನು ಯಾಕೆ ಹೊರಗಿಡುತ್ತೀರಿ ಎಂದು ಪ್ರಶ್ನಿಸಿದರು.

ಧರ್ಮಗುರು ಹನೀಫ್‌ ಮೌಲನಾ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ ಉದ್ಘಾಟಿಸಿದರು. ಹೋರಾಟಗಾರ್ತಿಯರಾದ ನಾಜೀಯಾ ಕೌಸರ್‌, ನಜ್ಮಾ ನಜೀರ್‌, ಕ್ರಿಶ್ಚಿಯನ್‌ ಫಾರಂ ಅಧ್ಯಕ್ಷ ಪಾಸ್ಟರ್‌ ರಾಜಶೇಖರ, ಮುಖಂಡರಾದ ಸೈಯದ್‌ ಸೈಫುಲ್ಲಾ ಸಾಬ್‌, ಡಾ. ಸುನೀತ್‌ ಕುಮಾರ್‌, ರಸೀದ್‌ಖಾನ್‌ ಉಪಸ್ಥಿತರಿದ್ದರು. ಅನೀಸ್‌ ಪಾಷಾ ಸ್ವಾಗತಿಸಿದರು. ವಕೀಲ ರಜ್ವಿಖಾನ್‌ ಕಾರ್ಯಕ್ರಮ ನಿರೂಪಿಸಿದರು.

‘ರಿಪಬ್ಲಿಕ್‌ ಆಫ್‌ ಕಲ್ಲಡ್ಕ’

ಮಂಗಳೂರು ಇರುವುದು ಇಂಡಿಯನ್‌ ರಿಪಬ್ಲಿಕ್‌ನಲ್ಲಿ ಅಲ್ಲ. ಅದು ಇರುವುದು ಕಲ್ಲಡ್ಕ ರಿಪಬ್ಲಿಕ್‌ನಲ್ಲಿ. ಅಲ್ಲಿ ನಡೆಯುವುದು ಕಲ್ಲಡ್ಕ ಪ್ರಭಾಕರ ಭಟ್ಟರೇ ಮಾಡಿದ ಕಾಯ್ದೆ, ಕಾನೂನು ಎಂದು ಚಿಂತಕ ಶಿವಸುಂದರ್‌ ಆರೋಪಿಸಿದರು.

ಪ್ರಭಾಕರ ಭಟ್ಟರು ಹೇಳಿದರೆ ಗೋಲಿಬಾರ್‌ ಮಾಡುತ್ತಾರೆ. ಅವರು ಹೇಳಿದಂತೆ ಬಾಂಬು ಇಡೋದು. ಬಾಂಬು ಇಡುವವನಿಗೆ ಜನಿವಾರ ಇದ್ದರೆ ಅಸ್ವಸ್ಥ, ಗಡ್ಡ ಬಿಟ್ಟಿದ್ದರೆ ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಮಾಡುತ್ತಾರೆ. ಸಿಎಎ ವಿರುದ್ಧ ಮುಸ್ಲಿಮರಷ್ಟೇ ಹೋರಾಟ ಮಾಡಿದರೆ ಮುಸ್ಲಿಮರು ಮತ್ತೊಮ್ಮೆ ಭಾರತದ ವಿರುದ್ಧ ಆಕ್ರಮಣ ಮಾಡುತ್ತಿದ್ದಾರೆ ಎಂದು ಹಿಂದೂಗಳಲ್ಲಿ ಭ್ರಮೆ ಹುಟ್ಟಿಸುತ್ತಿದ್ದಾರೆ. ಹಿಂದೂಗಳಿಗೆ ಏನೂ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಈ ಕಾಯ್ದೆ ಎಲ್ಲ ಧರ್ಮಗಳ ಬಡಜನರ ವಿರುದ್ಧ ಸಾರಿದ ಸಮರ. ಕಾಗದ ಪತ್ರಗಳಿಲ್ಲದೇ ಇದ್ದರೂ ದುಡಿದುಕೊಂಡು ಬದುಕುತ್ತಿದ್ದ ಜನರ ವಿರುದ್ಧದ ಸಂಚು ಇದು. ಇದನ್ನು ನಾವೆಲ್ಲ ಒಟ್ಟಾಗಿಯೇ ಸೋಲಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT