ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಬಲ್‌ ಚಾನಲ್‌ ಹೊಸ ದರ ಪದ್ಧತಿಗೆ ವಿರೋಧ

ಜಿಲ್ಲಾ ಕೇಬಲ್‌ ಆಪರೇಟರ್‌ಗಳ ಸಂಘದ ಪ್ರತಿಭಟನೆ * ಹಳೆ ಪದ್ಧತಿ ಮುಂದುವರಿಕೆಗೆ ಆಗ್ರಹ
Last Updated 19 ಡಿಸೆಂಬರ್ 2018, 14:43 IST
ಅಕ್ಷರ ಗಾತ್ರ

ದಾವಣಗೆರೆ: ಟಿವಿ ಕೇಬಲ್‌ ಮತ್ತು ಡಿಟಿಎಚ್‌ಗೆ ಹೊಸ ದರ ಪದ್ಧತಿ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಕೇಬಲ್‌ ಆಪರೇಟರ್‌ಗಳು ನಗರದ ಜಯದೇವ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಟ್ರಾಯ್‌ ಸಲಹೆ ಮೇರೆಗೆ ಕೇಂದ್ರ ಸರ್ಕಾರ ಡಿ. 29ರಿಂದ ಕೇಬಲ್‌ ಕನೆಕ್ಷನ್‌ ದರವನ್ನು ಪರಿಷ್ಕರಿಸಿ, ಹೊಸ ದರ ಜಾರಿಗೆ ತರುತ್ತಿದೆ. ಪ್ರತಿ ಚಾನಲ್‌ಗೂ ಇಂತಿಷ್ಟು ದರ ಎಂದು ನಿಗದಿಪಡಿಸಲಾಗಿದೆ. ಇದರಿಂದಾಗಿ ಪ್ರಸ್ತತಕ್ಕಿಂತ ಮೂರು ಪಟ್ಟು ಶುಲ್ಕ ಹೆಚ್ಚಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸದ್ಯ ₹ 200, ₹ 250 ಶುಲ್ಕಕ್ಕೆ 400ಕ್ಕೂ ಅಧಿಕ ಚಾನಲ್‌ಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈಗ ಹೊಸ ಎಂಆರ್‌ಪಿ ದರದಲ್ಲಿ ಇಷ್ಟೇ ಚಾನಲ್‌ ವೀಕ್ಷಿಸಲು ₹ 600ರಿಂದ ₹ 800 ಭರಿಸಬೇಕಾಗುತ್ತದೆ. ಇದರಿಂದ ಗ್ರಾಹಕರಿಗೆ ಮತ್ತು ಚಾನಲ್‌ ಸೌಲಭ್ಯ ಒದಗಿಸುವ ಕೇಬಲ್‌ ಆಪರೇಟರ್‌ಗಳಿಗೆ ಹೊರೆ ಆಗಲಿದೆ. ಹೀಗಾಗಿ ಹೊಸ ದರ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಟ್ರಾಯ್‌ ಆದೇಶ ಜಾರಿಯಾದರೆ 25–30 ವರ್ಷಗಳಿಂದ ಕೇಬಲ್‌ ಉದ್ಯೋಗವನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವ ಆಪರೇಟರ್‌ಗಳ ಕುಟುಂಬಗಳು ಬೀದಿಗೆ ಬೀಳಲಿವೆ. ಪೇ ಚಾನಲ್‌ನವರು ಸದ್ಯ ಈಗ ಪಡೆಯುವ ದರವೇ ಜಾಸ್ತಿಯಾಗಿದೆ. ಜತೆಗೆ ಜಾಹೀರಾತು ಮೂಲಕವೂ ಚಾನಲ್‌ಗಳಿಗೆ ಅಧಿಕ ಆದಾಯ ಹರಿದುಬರುತ್ತದೆ. ಈ ಕಡೆ ಹೊಸ ದರದಿಂದಲೂ ಚಾನಲ್‌ನವರಿಗೆ ಲಾಭ ಆಗಲಿದೆ. ಆದರೆ, ಸರ್ಕಾರ ಹಾಗೂ ಗ್ರಾಹಕರಿಗೆ ಯಾವ ಪ್ರಯೋಜನವೂ ಆಗದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಚಿತ ಚಾನಲ್‌ಗೂ ಶುಲ್ಕ: ನೂತನ ನೀತಿಯಂತೆ ಗ್ರಾಹಕರು ಉಚಿತ ಚಾನಲ್‌ ವೀಕ್ಷಿಸಲು ₹ 130 ಶುಲ್ಕ ವಿಧಿಸಲಾಗುತ್ತದೆ. ಜತೆಗೆ ₹ 18 ತೆರಿಗೆಯನ್ನೂ ಕಟ್ಟಬೇಕು. ಸರ್ಕಾರಿ ಸ್ವಾಮ್ಯದ ಚಾನಲ್‌ ಜತೆ ಕೆಲ ಉಚಿತ ಚಾನಲ್‌ಗಳನ್ನು ಮಾತ್ರ ನೋಡಬಹುದು.

ನಂತರ ಜಿಲ್ಲಾಡಳಿತ ಭವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಆಪರೇಟರ್‌ಗಳು, ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ, ವಾರ್ತಾ ಸಚಿವಾಲಯ, ವಿತ್ತ ಸಚಿವಾಲಯ, ಟ್ರಾಯ್‌ ಸಲಹೆಗಾರರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕೇಬಲ್‌ ಅಸೋಸಿಯೇಷನ್‌ನ ರಾಮಚಂದ್ರ, ಹದಡಿ ಮಂಜುನಾಥ್‌, ಎ.ಪಿ. ರುದ್ರಮುನಿ, ಸುನೀಲ್‌ ಜಾಧವ್‌, ಬಾಬೂರಾವ್‌ ಪವನ್‌, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

* * *

ಶುಲ್ಕ ನಾಲ್ಕುಪಟ್ಟು ಏರಿಕೆ

ಡಿಟಿಎಚ್‌ಗೂ ಹೊಸ ದರ ಅನ್ವಯ ಆಗಲಿದೆ. ಹೀಗಾಗಿ, ಎಲ್ಲಾ ರೀತಿಯ ಟಿವಿ ಚಾನಲ್‌ ಪ್ರಸಾರದ ವೆಚ್ಚವೂ ಏಕಾಏಕಿ ನಾಲ್ಕು ಪಟ್ಟು ಹೆಚ್ಚಳವಾಗಲಿದೆ. ಹೊಸ ನೀತಿ ಪ್ರಕಾರ ದರ ಏರಿಕೆ ಅಧಿಕಾರ ಮಾಲೀಕರ ಕೈಯಲ್ಲಿಯೇ ಇರುತ್ತದೆ. ಶುಲ್ಕ ಏರಿಕೆಯಾದರೆ ಆಪರೇಟರ್‌ಗಳು ಪ್ರತಿಭಟನೆ ನಡೆಸುತ್ತಿದ್ದರು. ಆಗ ಬೆಲೆ ಇಳಿಕೆಗೆಯಾಗುತ್ತಿತ್ತು. ಇನ್ನು ಮುಂದೆ ಇದಕ್ಕೆಲ್ಲಾ ಅವಕಾಶ ಸಿಗದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT